ರಾಜ್ಯದ ನೇಕಾರರ ಸಮಸ್ಯೆ ಅರಿತು 2006 ರಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‌ರ ಅವಧಿಯಲ್ಲಿ ಹಣಕಾಸು ಮಂತ್ರಿಯಾಗಿದ್ದ ಸಿದ್ರಾಮಯ್ಯನವರು ನೇಕಾರರಿಗೆ 1.25 ರೂ. ಪ್ರತಿ ಯೂನಿಟ್‌ಗೆ ಸಬ್ಸಿಡಿಯಾಗಿ ವಿದ್ಯುತ್ ನೀಡುವಲ್ಲಿ ಅನುಮತಿಸಿತ್ತು.
ಇಂದಿನವರೆಗೂ ಆ ಯೋಜನೆ ಚಾಲ್ತಿಯಲ್ಲಿದ್ದು, ಇದೀಗ ವಿದ್ಯುತ್ ಬೆಲೆ ಏರಿಕೆ ಸಂದರ್ಭ ನೇಕಾರರನ್ನೂ ಒಳಗೊಂಡು ಹೆಚ್ಚಳಗೊಳಿಸಿರುವದು ನೇಕಾರರು ತೀವ್ರ ಆತಂಕಕ್ಕೊಳಗಾಗಲು ಕಾರಣವಾಗಿದೆ.
ಪ್ರತಿ ಯುನಿಟ್‌ಗೆ 1.25 ರೂ. ಇದ್ದು ಅದರಲ್ಲಿ `ಇಂಧನ ಹೊಂದಾಣಿಕೆ ಮೊತ್ತ’(ಎಫ್‌ಎಸಿ) ಕಾಲಂನಲ್ಲಿ ಪ್ರತಿ ತಿಂಗಳು ಪ್ರತಿ ಯುನಿಟ್‌ಗೆ 0.57 ಪೈಸೆ ಬರುತ್ತಿತ್ತು. ಇದೀಗ 2.55 ರೂ.ಗಳು ಪ್ರತಿ ಯುನಿಟ್‌ಗೆ ಆಗಿರುವದರಿಂದ ಸುಮಾರು 1.75 ರೂ.ಗಳ ಯುನಿಟ್ ಇದೀಗ 4 ರೂ.ಗಳವರೆಗೆ ತೆತ್ತಬೇಕಾಗಿದ್ದು, ದುಪ್ಪಟ್ಟು ದರ ನೇಕಾರರಿಗೆ ತಲೆನೋವಾಗಿದೆ.
ಈ ಮೊದಲು ಪ್ರತಿ ಎಚ್.ಪಿ. ಮೋಟಾರ್‌ಗೆ ಯಾವದೇ ಶುಲ್ಕವಿರಲಿಲ್ಲ. ಕಳೆದೆರಡು ವರ್ಷಗಳಿಂದ ಪ್ರತಿ ಒಂದು ಎಚ್.ಪಿ.ಗೆ 90 ರೂ. ಶುಲ್ಕ ನಿಗದಿಪಡಿಸಿತ್ತು. ಇದೀಗ ಅದನ್ನೂ ಸಹಿತ ಈಗ 140 ರೂ.ಗೆ ಏರಿಕೆ ಮಾಡಿದ್ದಾರೆ.
ಹೀಗಾಗಿ ರಿಯಾಯ್ತಿ ದರದಲ್ಲಿ ನೇಯ್ಗೆ ಮಾಡುತ್ತಿದ್ದ ನೇಕಾರರಿಗೆ ವಿದ್ಯುತ್ ಬಿಲ್ ಕಟ್ಟುವದೇ ಒಂದು ಸವಾಲಾಗಿದೆ.
ಇದೆಲ್ಲವನ್ನು ಅರಿತು ಇದೀಗ ನೇಕಾರರು ಅಲ್ಲಲ್ಲಿ ಬೃಹತ್ ಸಭೆಗಳನ್ನು ನಡೆಸುತ್ತ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಬೃಹತ್ ಆಂದೋಲನ ಜರುಗಲಿದೆ ಎಂಬುದು ನೇಕಾರ ಸಮುದಾಯದ ಆಂತರಿಕ ಮಾಹಿತಿಯಾಗಿದೆ.
`ಈ ಮೊದಲು ಯಾವದೇ ಶುಲ್ಕವಿಲ್ಲದೆ ನೇರವಾಗಿ ಸಬ್ಸಿಡಿಯಾಗಿ ಪ್ರತಿ ಯುನಿಟ್‌ಗೆ 1.25 ರೂ. ಹಣ ವಿಧಿಸಿತ್ತಾ ಬಂದಿದೆ. ಈಗಲೂ ಅದನ್ನೇ ಮುಂದುವರೆಸಬೇಕು.’----ಮಲ್ಲಿಕಾರ್ಜುನ ಬಾಣಕಾರ, ನೇಕಾರ ಮುಖಂಡ, ಬನಹಟ್ಟಿ.
`ವಿದ್ಯುತ್ ಬಿಲ್ ನಿಜಕ್ಕೂ ನೇಕಾರ ವಿರೋಧಿಯಾಗಿದೆ. ಮೊದಲೇ ಮಾರುಕಟ್ಟೆಯಿಲ್ಲದೆ ಪರದಾಡುತ್ತಿರುವ ನೇಕಾರರಿಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಬದಲಾಗಿ ದುಪ್ಪಟ್ಟು ಬೆಲೆಯಿಂದ ನೇಕಾರಿಕೆ ನಡೆಸುವದಾದರೂ ಹೇಗೆ?. ಸರ್ಕಾರ ಇದನ್ನು ಪರಿಷ್ಕರಿಸಿ ನೇಕಾರ ಸಮುದಾಯಕ್ಕೆ ಅನುಕೂಲ ಮಾಡಬೇಕು.’--- ಸತೀಷ ಹಜಾರೆ, ಪದ್ಮಶ್ರೀ ಸಾರೀಜ್, ರಬಕವಿ.

Social Plugin