ಕೃಪೆ : ಶ್ರೀ ಗಣೇಶ ಕಾಸರಗೋಡು ಹಿರಿಯ ಸಿನಿಮಾ ಪತ್ರಕರ್ತರು
● ಯಾರದ್ದೇ ಅಂತ್ಯಸಂಸ್ಕಾರಕ್ಕೆ ನಾನು ಹೋಗುವುದಿಲ್ಲ. ಹೋದರೆ 'ಕಣ್ಣೀರೇ ಸುರಿಸಲಿಲ್ಲ ಬಡ್ಡೀಮಗ' ಅಂತಾರೆ. ಸುರಿಸಿದರೆ 'ನಾಟ್ಕ ಆಡ್ತಿದ್ದಾನೆ' ಅಂತಾರೆ!
● ಅಪ್ಪ ಹೇಳುತ್ತಿದ್ದ ಕಿವಿಮಾತು : 'ಬದುಕಿನಲ್ಲಿ ಯಾರಿಗೂ ತೊಂದ್ರೆ ಕೊಡ್ಬೇಡ, ಯಾರ ಋಣಕ್ಕೂ ಬೀಳ್ಬೇಡ, ಯಾರಿಗೂ ಅಗತ್ಯ ಮೀರಿ ಸಹಾಯ ಮಾಡ್ಬೇಡ...'
● ನಾನೆಂದೂ ನೆಗೆಟಿವ್ ಆಗಿ ಯೋಚಿಸುವ ಮನುಷ್ಯನಲ್ಲ. 'ಏಕಾಂಗಿ' ಚಿತ್ರ ಶೋಚನೀಯ ಸೋಲು ಕಂಡಾಗಲೂ ಪಾಸಿಟಿವ್ ಆಗಿದ್ದೆ. 5 ಪ್ರಶಸ್ತಿ ಆ ಮೇಲೆ ಬಂತು.
● ನಾಯಕಿಯ ಹೊಕ್ಕುಳ ಮೇಲೆ ದ್ರಾಕ್ಷಿ ಇಟ್ಟರೆ ವಿಮರ್ಶಕ ಬೈತಾನೆ. 'ಏಕಾಂಗಿ'ಯಂಥಾ ಸಿನಿಮಾ ಮಾಡಿದರೆ ಪ್ರೇಕ್ಷಕ ಉಗೀತಾನೆ! ನಾನೇನು ಮಾಡ್ಲಿ ನೀವೇ ಹೇಳಿ?
● 'ಪ್ರೇಮಲೋಕ'ಕ್ಕೆ ಜೂಹಿಯನ್ನು ಆಯ್ಕೆ ಮಾಡಿಕೊಂಡಾಗ ಎಲ್ಲರೂ ನಕ್ಕರು. ಫಿಲಂ ಹಿಟ್ ಆಗುತ್ತಿರುವಂತೆಯೇ ಅವ್ಳಿಗೆ ಡಿಮಾಂಡಪ್ಪೋ ಡಿಮಾಂಡ್...
● ಜೂಹಿಗೆ ನಾನು ಕೊಟ್ಟ ಸಂಭಾವನೆ ಆ ಕಾಲದಲ್ಲೇ 27 ಸಾವಿರ. ಆದ್ರೆ ಹೋಟೆಲು ಖರ್ಚು 4 ಲಕ್ಷ! ಅಂಗಿಗಿಂತ ಬನಿಯನ್ ರೇಟೇ ಜಾಸ್ತಿಯಾಯಿತೇನೋ...?
● ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರಗಳಲ್ಲಿ ಪೂರ್ತಿ ಇನ್'ವಾಲ್ವ್ ಆಗುತ್ತಿದ್ದೆ. ಇದನ್ನೇ 'ಇಂಟರ್'ಫಿಯರೆನ್ಸ್' ಅಂದರು. ನಾನು ಸುಮ್ಮನಾದೆ!
● ಕೆಲವು ಅಭಿಮಾನಿಗಳಿಗೆ ಕೈಕೊಟ್ಟರೆ ಉಂಗುರವೇ ನಾಪತ್ತೆ! ಅಪ್ಪಿಕೊಂಡರೆ ಚೈನೇ ನಾಪತ್ತೆ!! ಕೆಲವರು ಬ್ಲೇಡ್ ಹಾಕಿ ಪರ್ಸ್ ಕದ್ದು ಬಿಡುತ್ತಾರೆ!!! ಇದೆಂಥಾ ಅಭಿಮಾನ?
● ಈ ಜಗತ್ತಿನಲ್ಲಿ ನಿಂದಕರು ಇಲ್ಲವಾದ್ರೆ ಬೆಳವಣಿಗೆ ಸಾಧ್ಯವೇ ಇಲ್ಲವೇನೋ? ನನ್ಗೆ ಗೆಳೆಯರಿಗಿಂತಲೂ ಹೆಚ್ಚಾಗಿ ಶತ್ರುಗಳೇ ದಾರಿದೀಪ! ● ತೆರೆಯ ಮೇಲೆ ನಾಯಕಿ ಜೊತೆ ಏನೇ ಮಾಡಿದರೂ ಪ್ರೇಕ್ಷಕ ಸಹಿಸಿಕೊಳ್ಳುತ್ತಾನೆ. ಅದನ್ನೇ ರಸ್ತೆ ಮೇಲೆ ಹೆಂಡ್ತಿ ಜೊತೆ ಮಾಡಿದ್ರೆ ಜನ ಉಗೀತಾರೆ ಅಲ್ವಾ?
● ನನ್ನನ್ನು ಎಲ್ರೂ ಡುಮ್ಮಣ್ಣ ಅಂತ ರೇಗಿಸ್ತಾರೆ. ವ್ಯಾಯಾಮ ಮಾಡೋಣ ಅಂದ್ರೆ ಬ್ಯಾಕ್'ಪೇನ್ ಅಡ್ಡ ಬರತ್ತೆ. ನಾನೇನು ಮಾಡಲಿ ನೀವೇ ಹೇಳಿಬಿಡಿ...
- ಇವೆಲ್ಲಾ ಕೆಲವು ಸಾಂಪಲ್ ಮಾತ್ರ. ಸಮಯ ಸಿಕ್ಕಾಗಲೆಲ್ಲಾ ಇನ್ನಷ್ಟು ಹೇಳುತ್ತೇನೆ. ಸಧ್ಯಕ್ಕೆ ನನ್ನ ಪ್ರೀತಿಯ ಕ್ರೇಜಿಸ್ಟಾರ್ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದೇನೆ...ನಿಮ್ಮದೊಂದು ಶುಭಾಶಯವನ್ನೂ ಸೇರಿಸಿಕೊಳ್ಳಿ...

Social Plugin