ನತಮಸ್ತಕ ಸಪ್ತರ್ಷಿಗಳು:
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಿನ್ನೆ ಸಂಜೆ (ಮೇ 28) ಭಾರೀ ಬಿರುಗಾಳಿ ಬೀಸಿತು. ಅದೆಂಥ ರುದ್ರ ಮಾರುತ ಎಂದರೆ, ಅಲ್ಲಿನ ಪ್ರಸಿದ್ಧ ಮಹಾಕಾಲೇಶ್ವರ ಮಂದಿರದ ಪ್ರಾಂಗಣದಲ್ಲಿ ಸ್ಥಾಪಿಸಲಾಗಿದ್ದ ಸಪ್ತ ಋಷಿಗಳ (ಏಳು) ಪ್ರತಿಮೆಗಳಲ್ಲಿ ಆರು ಪ್ರತಿಮೆಗಳು ನೆಲಕ್ಕುರುಳಿದವು. ವಾಯುದೇವನ ಆರ್ಭಟ ಅದೆಷ್ಟಿತ್ತೆಂದರೆ ಕೆಲವು ಪ್ರತಿಮೆಗಳು ಕೈಕಾಲು ಮುರಿದುಕೊಂಡವು; ಇನ್ನು ಕೆಲವುಗಳ ರುಂಡ ಮುಂಡ ಬೇರ್ಪಟ್ಟವು. ಹೀಗೆ ನಾನಾ ವಿಕೃತಿಗಳೊಂದಿಗೆ ಧರಾಶಾಹಿಯಾದ ಅವುಗಳನ್ನು ಇಂದು ಬುಲ್‌ಡೋಝರ್‌ ಮೂಲಕ ಗುಜರಿಗೆ ಹಾಕಲಾಗುತ್ತಿದೆ. ಭಕ್ತರನ್ನು ಆಕರ್ಷಿಸುವ ಭಾರೀ ದೊಡ್ಡ ದೇಗುಲ ಸಮುಚ್ಚಯ ಇದು. 419 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೊದಲ ಹಂತದ ನಿರ್ಮಿತಿ ಮುಗಿದ ಮೇಲೆ ಕಳೆದ ಅಕ್ಟೊಬರ್‌ನಲ್ಲಿ ತುಂಬ ಅದ್ದೂರಿಯಾಗಿ, ಭರ್ಜರಿ ಮಂತ್ರಘೋಷಗಳೊಂದಿಗೆ ಪ್ರಧಾನಿಯವರು ಇದನ್ನು ಉದ್ಘಾಟಿಸಿದ್ದರು. ಒಟ್ಟು 850 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದು. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಅಲ್ಲಿನ ಪ್ರತಿಪಕ್ಷದ (ಕಾಂಗ್ರೆಸ್‌) ಶಾಸಕರು ಆಗಲೇ ದೂರನ್ನು ದಾಖಲಿಸಿದ್ದರು. ಈ ಪ್ರತಿಮೆಗಳನ್ನು ಗುಜರಾತ್‌ ಕಂಪನಿಯೊಂದು ನಿರ್ಮಿಸಿತ್ತು. ನೂರು ವರ್ಷ ಗ್ಯಾರಂಟಿಯನ್ನೂ ಕೊಟ್ಟಿತ್ತು. 
ಮಹಾಕಾಲೇಶ್ವರನ ಬಗ್ಗೆ ಎರಡು ಕತೆಗಳಿವೆ: (ಒಂದು) ಶಿವನನ್ನು ಮದುವೆಯಾಗಲು ಹೊರಟ ಪಾರ್ವತಿಯನ್ನು ಅವಳ ಅಪ್ಪ ತಡೆಯುತ್ತಾನೆ. ಅವಮಾನಿತಳಾದ ಪಾರ್ವತಿ ಅಗ್ನಿಪ್ರವೇಶ ಮಾಡುತ್ತಾಳೆ. ಆಗ ಕುಪಿತನಾದ ಶಿವ ಅಲ್ಲಿಗೆ ಬಂದು ತಾಂಡವ ನೃತ್ಯದ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡುತ್ತಾನೆ. ಇನ್ನೊಂದು ಕತೆಯ ಪ್ರಕಾರ ದೂಷಣನೆಂಬ ರಾಕ್ಷಸನು ಶಿವಭಕ್ತರನ್ನು ಹಿಂಸಿಸಿದಾಗ ಈಶ್ವರನಿಗೆ ಭಾರೀ ಕೋಪ ಬಂದು ಇಡೀ ಭೂಮಿಯನ್ನೇ ಸಿಗಿದು ಹಾಕಿ ದೂಷಣನ ನಾಶ ಮಾಡುತ್ತಾನೆ. ಉಜ್ಜಯಿನಿಯಲ್ಲಿ ಮಹಾಕಾಲೇಶ್ವರನ ಮೂರ್ತಿ ತಾನಾಗಿ ಉದ್ಭವ ಆಗಿದೆಯೆಂದು ಹೇಳಲಾಗುತ್ತಿದೆ. ಸಪ್ತರ್ಷಿ ಎಂದರೆ ವಿಶ್ವಾಮಿತ್ರ, ಜಮದಗ್ನಿ, ಗೌತಮ, ವಶಿಷ್ಠ್ ಕಾಶ್ಯಪ, ಭಾರದ್ವಾಜ ಮತ್ತು ಅತ್ರಿ. ಭಾರತೀಯ ಪರಂಪರೆಯಲ್ಲಿ ಈ ಏಳೂ ಋಷಿಗಳಿಗೆ ಪೂಜ್ಯ ಸ್ಥಾನಗಳಿವೆ. ಆಕಾಶದಲ್ಲಿನ ಉರ್ಸಾ ಮೇಜರ್‌ ನಕ್ಷತ್ರಪುಂಜಗಳಲ್ಲಿನ ಏಳು ನಕ್ಷತ್ರಗಳಿಗೆ ಹಿಂದಿನವರು ಈ ಋಷಿಗಳ ಹೆಸರನ್ನೇ ನೀಡಿದ್ದರು. ಅದಕ್ಕೆ ಸಪ್ತರ್ಷಿ ಪುಂಜ ಎಂತಲೇ ಹೆಸರಿದೆ. ನಿನ್ನೆಯ ಬಿರುಗಾಳಿಯಲ್ಲಿ ಗಟ್ಟಿಯಾಗಿ ನಿಂತಿದ್ದು ಯಾವ ಋಷಿಯ ಪ್ರತಿಮೆ ಎಂಬುದು ಗೊತ್ತಾಗಿಲ್ಲ. ಪುಣ್ಯ, ಯಾವ ಪುತ್ಥಳಿಯೂ ಯಾವುದೇ ಭಕ್ತರಿಗೆ ಯಾವ ಹಾನಿಯನ್ನೂ ಮಾಡಲಿಲ್ಲ. ಪ್ರವಾಸೋದ್ಯಮ ವನ್ನು ಲಾಭದಾಯಕವಾಗಿಸಬೇಕೆಂಬ ದೃಷ್ಟಿಯಿಂದ ಈ ಮಹಾಕಾಲೇಶ್ವರ ದೇಗುಲ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಬರುವ ಭಕ್ತರು ಏಳೂವರೆ ನೂರು (ಸಾಡೇಸಾತ್‌ ಸೌ) ರೂಪಾಯಿಗಳನ್ನು ತೆತ್ತು ಪ್ರಾಂಗಣವನ್ನು ಸುತ್ತಬೇಕು. ತುಂಬ ದುಬಾರಿ. ನಿನ್ನೆ ಹೊಸ ಸಂಸತ್‌ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಅಷ್ಟೊಂದು ಸಂಖ್ಯೆಯ ಋಷಿಮುನಿಗಳು ಸಾಲುಗಟ್ಟಿ ಪ್ರಧಾನಿಗೆ ಆಶೀರ್ವಾದ ಮಾಡಿದ ತುಸು ಹೊತ್ತಿನಲ್ಲೇ ಇಲ್ಲಿನ ಆರು ಋಷಿಗಳ ಪ್ರತಿಮೆಗಳು ಹೀಗೆ ನತಮಸ್ತಕ ಆಗಿದ್ದು ನೋಡಿದರೆ, ಯಾಕೋ ಬೇಜಾರಾಗುತ್ತದೆ. ಗುತ್ತಿಗೆದಾರನ ಬಗ್ಗೆ ಸಿಟ್ಟು ಬರುತ್ತದೆ. ಅಥವಾ ಮರುಕ ಹುಟ್ಟುತ್ತದೆ, ಏಕೆಂದರೆ ಪಾಪ ಎಷ್ಟು ಪರ್ಸೆಂಟ್‌ ಹಣವನ್ನು ಯಾರ್ಯಾರಿಗೆ ಸಂದಾಯ ಮಾಡಬೇಕಾಗಿ ಬಂದಿತ್ತೊ ಏನೊ. 
ಅಷ್ಟದಿಕ್ಪಾಲಕರಲ್ಲೊಬ್ಬನಾದ ವಾಯುದೇವನಿಗೆ ಅಷ್ಟೊಂದು ಕೋಪ ಯಾಕೆ ಬಂದಿತ್ತೊ ಗೊತ್ತಿಲ್ಲ. ಭೂಮಿಯ ತಾಪಮಾನ ಏರುತ್ತ ಹೋದಂತೆ ಎಲ್ಲ ಪಂಚಭೂತಗಳೂ ಎರ್ರಾಬಿರ್ರಿ ಕೋಪಗೊಳ್ಳುತ್ತವೆ. ಭಾರೀ ಸೆಕೆ, ಭಾರೀ ವೇಗದ ಸುಂಟರಗಾಳಿ, ಅನಿರೀಕ್ಷಿತ ಮೇಘಸ್ಫೋಟ, ಮಹಾಮಳೆ ಎಲ್ಲ ಹೆಚ್ಚುತ್ತವೆ ಎಂದು ವಿದ್ವಜ್ಜನರು ಹೇಳುತ್ತಿದ್ದಾರೆ. ಈ ಸಪ್ತರ್ಷಿ ಪ್ರತಿಮೆಗಳನ್ನು ಮತ್ತೆ ಹೊಸದಾಗಿ, ಈ ಬಾರಿ ಕಲ್ಲಿನಲ್ಲೇ ಕಟೆದು ನಿಲ್ಲಿಸಲಾಗುತ್ತದಂತೆ. ಅಷ್ಟು ಮಾಡಲಿ. ಒಟ್ಟಿನ ಮೇಲೆ ದೇವರಿಗೆ ಕೋಪ ಬರಬಾರದು. ಭಕ್ತರಿಗೆ ತೊಂದರೆ ಆಗಬಾರದು.