ರಾಜಕೀಯ ಅಖಾಡಕ್ಕಿಳಿದ ಮಠಾಧೀಶ ಶಿವಶಂಕರ ಶ್ರೀ

 ಕ್ಷೇತ್ರದ ಜನತೆಯ ಒತ್ತಾಯ ಹಾಗು ರಾಷ್ಟ್ರೀಯ ಪಕ್ಷಗಳು ನೇಕಾರ ಸಮುದಾಯವನ್ನು ನಡೆಸಿಕೊಂಡ ನೋವಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ತೇರದಾಳ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದೇನೆಂದು ಹಳೇ ಹುಬ್ಬಳ್ಳಿ ವೀರಭಿಕ್ಷಾವ್ರತಿ ಮಠದ ಶಿವಶಂಕರ ಶ್ರೀಗಳು ಹೇಳಿದರು.
ಹೊಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರ ಹಾಗು ತಾತ್ಸಾರ ಭಾವನೆಯಿಂದ ಆಧ್ಯಾತ್ಮದಿಂದ ರಾಜಕೀಯಕ್ಕೆ ಧುಮುಖಲಿದ್ದೇನೆ ಎಂದರು. ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳ ಮುಖಂಡರ ಬೆಂಬಲ ಹಾಗು ಭಕ್ತರ ಒತ್ತಾಸೆಯಿಂದ ಕಣಕ್ಕಿಳಿಯಲು ಇಚ್ಛಿಸಿದ್ದೇನೆ. ವೃತ್ತಿ ಬೇರೆಯಿದ್ದರೂ ಲಿಂಗಾಯತರೆಲ್ಲರೂ ಒಂದೇಯಾಗಿದ್ದು, ರೈತ ಹಾಗು ನೇಕಾರರ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ 10 ಜನ ಟಿಕೆಟ್ ಆಕಾಂಕ್ಷಿದಾರರೆಲ್ಲರೂ ಸಮಾನ ಮನಸ್ಕರದಿಂದ ಸ್ವಾಮೀಜಿಯನ್ನು ಅಖಾಡಕ್ಕಿಳಿಸಲು ಸನ್ನದ್ಧರಾಗಿದ್ದೇವೆಂದು ಭೀಮಶಿ ಮಗದುಮ್ ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ, ಕ್ಷೇತ್ರದಲ್ಲಿ ನೇಕಾರರಿಗಾದಅನ್ಯಾಯದ ವಿರುದ್ಧ ಸಿಡಿದೆದ್ದಿದ್ದು, ಹಣಬಲ, ದಬ್ಬಾಳಿಕೆಯಿಂದ ಜನ ಬೇಸತ್ತಿದ್ದಾರೆಂದು ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಪಂಡಿತ ಪಟ್ಟಣ ತಿಳಿಸಿದರು.ನೇಕಾರರ ಅಸ್ತಿತ್ವಕ್ಕಾಗಿ ಈ ಬಾರಿ ಕ್ಷೇತ್ರದಿಂದ ನೇಕಾರ ಪ್ರತಿನಿಧಿಯನ್ನಾಗಿಪ್ರಥಮ ಬಾರಿಗೆ ಕಣಕ್ಕಿಳಿಸಲಾಗಿದೆ. ಸ್ವಾಮೀಜಿಗಳ ಗೆಲುವು ನಿಶ್ಚಿತವೆಂದು ಬ್ರಿಜ್‌ಮೋಹನ ಡಾಗಾ ತಿಳಿಸಿದರು.
ಕಿರಣಕುಮಾರ ದೇಸಾಯಿ, ಮಲ್ಲಪ್ಪ ಕುಚನೂರ, ಅಮಿತ ನಾಶಿ, ಪುಷ್ಪದಂತ ದಾನಿಗೊಂಡ, ರಾಜೇಂದ್ರ ಅಂಬಲಿ, ಓಂಪ್ರಕಾಶ ಬಾಗೇವಾಡಿ, ಸೋಮನಾಥ ಗೊಂಬಿ, ಸುರೇಶ ಕೋಲಾರ, ಹರ್ಷವರ್ಧನ ಪಟವರ್ಧನ, ಶ್ರೀಶೈಲ ದಭಾಡಿ ಸೇರಿದಂತೆ ಅನೇಕರಿದ್ದರು.

ನಾಳೆ ನಾಮಪತ್ರ ಸಲ್ಲಿಕೆ
 ಬುಧವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಶಿವಶಂಕರ ಶ್ರೀಗಳ ನಾಮಪತ್ರ ಸಲ್ಲಿಸಲಾಗುವದೆಂದು ಬಸವರಾಜ ದಲಾಲ ತಿಳಿಸಿದರು.