ತೇರದಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಬೇಡಿಕೆಯಂತೆ ಸ್ಥಳೀಯವಾಗಿ ನನಗೆ ಅವಕಾಶ ಕಲ್ಪಿಸಿದ್ದಾರೆ. ಮಾತಿನಂತೆ ನಡೆದುಕೊಂಡ ಪಕ್ಷ ಕಾಂಗ್ರೆಸ್. ಗೆಲುವಿಗೆ ಶ್ರಮಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಮನವಿ ಮಾಡಿದರು.
ರಾಮಪೂರದ ದಾನೇಶ್ವರಿ(ಬಿಳ್ಳೂರ) ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದಲ್ಲಿ ಗೊಂದಲವಿರುವದು ನಿಜ. ಇದಕ್ಕೆಲ್ಲ ವರಿಷ್ಠರು ಹಾಗು ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಮಾಜಿ ಸಚಿವೆ ಉಮಾಶ್ರೀ, ಡಾ. ಎ.ಆರ್. ಬೆಳಗಲಿ ಹಾಗು ಡಾ. ಪದ್ಮಜಿತ ನಾಡಗೌಡ ಸೇರಿದಂತೆ ಅನೇಕರ ಮನವೊಲಿಕೆಗೆ ಸನ್ನದ್ಧರಾಗಿದ್ದು, ಯಾವದೇ ಭಿನ್ನಾಭಿಪ್ರಾಯವಿಲ್ಲವೆಂದು ಕೊಣ್ಣೂರ ಸ್ಪಷ್ಟಪಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಪಕ್ಷದ ವರಿಷ್ಠರಂತೆ ಸಿದ್ದು ಕೊಣ್ಣೂರರಿಗೆ ಟಿಕೆಟ್ ಘೋಷಣೆಯಾಗಿದೆ. ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಪಕ್ಷದ ತೀರ್ಮಾಣವಾದ ಮೇಲೆ ಎಲ್ಲ ಕಾರ್ಯಕರ್ತರು ಬದ್ಧರಾಗಿ ಪಕ್ಷ ಗೆಲ್ಲಿಸಬೇಕೆಂದರು. ಪ್ರಧಾನಿ ಮೋದಿಯವರ 56 ಇಂಚು ಎದೆಯಲ್ಲಿ ಕೇವಲ ಅಂಬಾನಿ, ಅದಾನಿ ಮಾತ್ರವಿದ್ದು, ದೇಶದ ಜನರ ಪ್ರೀತಿಯಿಲ್ಲವೆಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಪೂರ್ವ ಹಾಗು ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಕೊಡುಗೆ ಏನು? ಎಂಬುದನ್ನು ಇತಿಹಾಸ ಓದದ ಬಿಜೆಪಿ ನಾಯಕರು ಅಧ್ಯಯನ ಮಾಡಿ ಮಾತನಾಡಲಿಯೆಂದರು.
ಮುಖಂಡ ಧರೆಪ್ಪ ಸಾಂಗ್ಲಿಕರ ಮಾತನಾಡಿ, ಬುಧವಾರ(ಇಂದು) ಪಕ್ಷದ ಪರವಾಗಿ ಅಧಿಕೃತ ನಾಮಪತ್ರ ಸಲ್ಲಿಸಲಿರುವ ಸಿದ್ದು ಕೊಣ್ಣೂರಗೆ ಬೆಂಬಲಿಸಿ ಬೆಳಿಗ್ಗೆ 10 ಗಂಟೆಗೆ ಸುಮಾರು 20 ಸಾವಿರ ಜನರೊಂದಿಗೆ ರಬಕವಿಯ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿವರೆಗೆ ರ‍್ಯಾಲಿ ನಡೆಯಲಿದೆ ಎಂದರು.
ಅನೈತಿಕವಾಗಿ ಹುಟ್ಟಿಕೊಂಡ ಸರ್ಕಾರ ಬಿಜೆಪಿ. ಅಭಿವೃದ್ಧಿ ಬದಲಾಗಿ ನಿರುದ್ಯೋಗ ಹಾಗು ಕಮಿಷನ್ ಹಾವಳಿಯಲ್ಲಿಯಲ್ಲಿಯೇ ಕಾಲಹರಣ ಮಾಡಿತು. ಇವರ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆಂದು ಸಾಂಗ್ಲಿಕರ ತಿಳಿಸಿದರು.
ಶಂಕರ ಆಲಕನೂರ, ಕಾಶಿನಾಥ ಹುಡೇದ, ಬರಮು ಉಳ್ಳಾಗಡ್ಡಿ, ಮಾರುತಿ ಸೊರಗಾಂವಿ, ಗಿರೀಶ ಅಂಕಲಿ, ಯಲ್ಲನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

Social Plugin