ಸ್ವಾಭಿಮಾನ ಉಳಿವಿಗಾಗಿ ಹೋರಾಟ ನಮ್ಮದು
 ಕಾಂಗ್ರೆಸ್ ಪಕ್ಷವು ಜನತೆಗೆ ಹಾಗು ತೇರದಾಳ ಕ್ಷೇತ್ರದ ಮುಖಂಡರಿಗೆ ಮಾಡಿದ ಅನ್ಯಾಯ ವಿರೋಧಿಸಿ ಸ್ವಾಭಿಮಾನ ಉಳಿವಿಗಾಗಿ ನಮ್ಮ ಹೋರಾಟವಾಗಿದೆಯೆಂದು ಜಂಟಿಯಾಗಿ ನಾಮಪತ್ರ ಸಲ್ಲಿಸಿದ ಡಾ. ಪದ್ಮಜೀತನಾಡಗೌಡ ಪಾಟೀಲ ಹಾಗು ಡಾ. ಎ.ಆರ್. ಬೆಳಗಲಿ ತಿಳಿಸಿದರು.
ತಹಶೀಲ್ದಾರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಗು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ ಮಾತನಾಡಿದ ಉಭಯ ಮುಖಂಡರು, ಕಾಂಗ್ರೆಸ್ ಪಕ್ಷದ ನಾಯಕರ ನಡೆಯನ್ನು ತೀವ್ರವಾಗಿ ಖಂಡಿಸಿದರು.ಜನತೆ ಸ್ವಾಭಿಮಾನಕ್ಕಾಗಿ ಸ್ಪರ್ಧೆಗೆ ಒತ್ತಾಯಿಸುತ್ತಿದ್ದು, ಕಳೆದ ಆರೇಳು ವರ್ಷದಿಂದ ಪಕ್ಷ ಬಲವರ್ಧನೆಯ ಜೊತೆಗೆ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಂಡು ಬಂದಿದ್ದೇನೆಂದ ನಾಡಗೌಡ ಪಾಟೀಲ, ಸ್ಥಳೀಯ ಮುಖಂಡರ ಹಾಗು ಕಾರ್ಯಕರ್ತರ ಮಧ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯ ಅಧ್ಯಯನವಾಗಬೇಕಿತ್ತು. ಬದಲಾಗಿ ಸ್ವಯಂ ನಿರ್ಧಾರದಿಂದ ಪಕ್ಷಕ್ಕೆ ಭಾರಿ ಹಾನಿಯಾಗಿದೆಯೆಂದರು.
ಡಾ. ಎ.ಆರ್. ಬೆಳಗಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ನನಗೆ ಅಥವಾ ನಾಡಗೌಡರಿಗೆ ಒಬ್ಬರಲ್ಲಿ ಟಿಕೆಟ್ ದೊರೆಯುವ ಎಲ್ಲ ನಿರೀಕ್ಷೆಗಳಿದ್ದವು. ಕೊನೆಯ ಹಂತದಲ್ಲಿ ಕಾಣದ ಕೈಗಳ ಕೆಲಸದಿಂದ ಇಂತಹ ದುರಂತ ನಡೆದಿದ್ದು, ನಾಲ್ಕೈದು ದಶಕಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಇಂತಹ ನೋವು ಎಂದಿಗೂ ಬಂದಿಲ್ಲ. ಇದೇ ಕಾರಣದಿಂದ ಎಲ್ಲ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದೇನೆ. ಈ ಬಾರಿ ಇಬ್ಬರೂ ಏಕಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದು, ಒಬ್ಬರು ಮಾತ್ರ ಕಣದಲ್ಲಿ ಉಳಿಯಲಿದ್ದು, ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಕ್ಷೇತ್ರದ ಜನತೆಗೆ ಅನ್ಯಾಯವಾಗಿದೆ. ಇವೆಲ್ಲವನ್ನು ಧಿಕ್ಕರಿಸಲು ಪಕ್ಷೇತರರಾಗಿ ಸ್ಪರ್ಧೆ ಅನಿವಾರ್ಯವಾಗಿದ್ದು, ನಮ್ಮ ಸ್ವಾಭಿಮಾನದ ಗೆಲುವು ನಿಶ್ಚಿತವೆಂದು ಬೆಳಗಲಿ ತಿಳಿಸಿದರು.
ಶಂಕರ ಸೊರಗಾಂವಿ, ಉಳ್ಳಾಗಡ್ಡಿ, ಮಾಳು ಹಿಪ್ಪರಗಿ, ನೀಲೇಶ ದೇಸಾಯಿ,ರಾಜು ನಂದೆಪ್ಪನವರ, ಕುಮಾರ ಬಿಳ್ಳೂರ, ಬುಡಾನ್ ಜಮಾದಾರ ಸೇರಿದಂತೆ ಅನೇಕರಿದ್ದರು.