ಬಿಜೆಪಿ ರೋಡ್ ಶೋ: ಹರಿದು ಬಂದ ಜನಸಾಗರ
ಸಿದ್ದು ಸವದಿ ನಾಮಪತ್ರ ಸಲ್ಲಿಕೆ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಸಿದ್ದು ಸವದಿ ಅವರು ನಾಮಪತ್ರ ಸಲ್ಲಿಸುವದಕ್ಕೂ ಮೊದಲು ರಬಕವಿಯ ಬಸ್ ನಿಲ್ದಾಣದಿಂದ ಸುಮಾರು 2 ಕಿ.ಮೀನಷ್ಟು ಅದ್ದೂರಿ ರೋಡ್ ಶೋ ನಡೆಸಿ ಎತ್ತಿನ ಬಂಡಿ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುರುವಾರ ಬೆಳಿಗ್ಗೆ ಕಾಡಸಿದ್ಧೇಶ್ವರ, ಮಲ್ಲಿಕಾರ್ಜುನ ದೇವರು ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಪೂಜೆಗೈದು ಸಾವಿರಾರು ಕಾರ್ಯಕರ್ತರಿಂದ ರೋಡ್ ಶೋ ನಡೆಸಿದರು.
ಲಘು ಲಾಠಿ ಪ್ರಹಾರ
: ಭಾರಿ ಜನಸ್ತೋಮದೊಂದಿಗೆ ತಹಶೀಲ್ದಾರ ಕಚೇರಿವರೆಗೆ ತೆರಳುವ ಸಂದರ್ಭ ಪೊಲೀಸ್ ಠಾಣೆ ವೃತ್ತದ ಬಳಿ ಪೊಲೀಸರಿಂದ ಬ್ಯಾರಿಕೇಡ್ ಹಾಕಿಸಾರ್ವಜನಿಕರಿಗೆ ನಿಷೇಧ ಹೇರಲಾಗಿತ್ತು. ಏಕಾಏಕಿ ಸಾವಿರಾರು ಕಾರ್ಯಕರ್ತರು ಜಮಾವನೆಗೊಂಡ ಕಾರಣ ಭಾರಿ ಕೋಲಾಹಲ ಸೃಷ್ಟಿಸುವಲ್ಲಿ ಕಾರಣವಾಗಿ, ಪೊಲೀಸರು ಲಘು ಲಾಠಿ ಪ್ರಹಾರ ನಡೆಸುತ್ತಿದ್ದಂತೆಯೇ ಮೊದಲೇ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಕಾರ್ಯಕರ್ತರು ಓಡಿ ಹೋಗುತ್ತಿದ್ದಂತೆ ಕೆಲವರು ರಸ್ತೆಯೇ ಮೇಲೆ ಬಿದ್ದು ಎದ್ದು ಓಡುವ ಪ್ರಸಂಗ ನಡೆಯಿತು.
 ಸತತ 2 ಗಂಟೆಗಳ ರೋಡ್ ಶೋ ವೇಳೆ ಸಂಸದ ಕೆ. ನಾರಾಯಣಸ್ವಾಮಿ, ಜಗದೀಶ ಗುಡಗುಂಟಿಮಠ, ಜಿ.ಎಸ್. ನ್ಯಾಮಗೌಡ, ಮೋಹನ ಜಾಧವ, ಧರೆಪ್ಪ ಉಳ್ಳಾಗಡ್ಡಿ, ಬಸನಗೌಡ ಪಾಟೀಲ, ಬಾಬಾಗೌಡ ಪಾಟೀಲ, ಸುರೇಶ ಅಕ್ಕಿವಾಟ, ಪುಂಡಲೀಕ ಪಾಲಭಾಂವಿ, ವರ್ಧಮಾನ ಕೋರಿ ಸೇರಿದಂತೆ ಅನೇಕರಿದ್ದರು.