ಕಣದಲ್ಲಿ ನಾಡಗೌಡ: ಹಿಂಪಡೆದ ಬೆಳಗಲಿ
 ಕಾಂಗ್ರೆಸ್ ಪಕ್ಷಕ್ಕೆ ಮಾಡಿದ ಕೆಲಸದ ಮಹತ್ವ ಪರಿಗಣಿಸದೆ, ಸ್ಥಳೀಯ ಸರ್ವೆ ಮಾಡದೆ, ತಪ್ಪು ನಿರ್ಧಾರದಿಂದ ಪಕ್ಷದಿಂದ ಟಿಕೆಟ್ ನೀಡಿರುವ ಹೈಕಮಾಂಡ್ ನಿರ್ಧಾರವನ್ನು ವಿರೋಧಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುವಲ್ಲಿ ಕಾರಣವಾಗಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ. ಪದ್ಮಜೀತ ನಾಡಗೌಡ ಪಾಟೀಲ ಸ್ಪಷ್ಟನೆ ನೀಡಿದರು. 
ಚುನಾವಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ರಾಜಕಾರಣಿ ಡಾ. ಎ.ಆರ್. ಬೆಳಗಲಿ ಹಾಗು ನಾನು ಸೇರಿ ನಾಮಪತ್ರ ಸಲ್ಲಿಸಿದ್ದೇವು.
 ಇಬ್ಬರಲ್ಲಿ ಒಬ್ಬರು ಕಣದಲ್ಲಿ ಉಳಿಯುವದಾಗಿ ಸ್ಪಷ್ಟಪಡಿಸಿದಂತೆ ಡಾ. ಬೆಳಗಲಿಯವರು ನಾಮಪತ್ರ ಹಿಂಪಡೆದಿದ್ದು, ಹಣ್ಣು ತುಂಬಿದ ಬುಟ್ಟಿಯ ಚಿಹ್ನೆಯೊಂದಿಗೆ ಕಣದಲ್ಲಿ ಉಳಿದಿದ್ದೇನೆಂದು ಡಾ. ನಾಡಗೌಡ ಸ್ಪಷ್ಟಪಡಿಸಿದರು.
ಏಳೆಂಟು ವರ್ಷಗಳಿಂದ ಜನಸೇವೆಯಲ್ಲಿಯೇ ನನ್ನ ಜೀವ ಸವೆಸಿದ್ದೇನೆ. ಇದೊಂದು ಒಳ್ಳೆಯ ಅವಕಾಶವಿದ್ದು, ಕ್ಷೇತ್ರದ ಮತದಾರರು ನನಗೆ ಸಂಪೂರ್ಣ ಆಶೀರ್ವಾದ ಮಾಡಲಿದ್ದು, ಗೆಲುವಿಗೆ ಕಾರಣರಾಲಿದ್ದಾರೆಂದು ನಾಡಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಭಿಮಾನದ ಮತದಾರರು ನನಗೆ ಸ್ಪರ್ಧೆಗೆ ಹಕ್ಕು ನೀಡಿದ್ದಾರೆ. ಪಕ್ಷದೆಲ್ಲೆಡೆಯಿಂದ ಕಣದಿಂದ ಹಿಂದೆ ಸರಿಯಲು ಒತ್ತಡಗಳು ಬಂದರೂ ಯಾವದಕ್ಕೂ ಮಹತ್ವ ನೀಡಿಲ್ಲ. ಇದರಿಂದ ವರಿಷ್ಠರಿಗೆ ನೋವಾಗಿದ್ದರೆ ಕ್ಷಮಿಸಿ, ಆದರೆ ಕ್ಷೇತ್ರದ ನನ್ನ ಅಭಿಮಾನಿಗಳ, ಕಾರ್ಯಕರ್ತರ ಮಹತ್ವದ್ದಾಗಿ ಮತದಾರರ ವಿರುದ್ಧ ನಾನು ನಿರ್ಧಾರ ಕೈಗೊಂಡಂತಾಗುವದೆಂಬ ಕಾರಣಕ್ಕೆ ಯಾವದಕ್ಕೂ ಮಣಿಯದೆ ಸ್ಪರ್ಧೆಯೇ ನನ್ನ ಕೊನೆಯ ನಿರ್ಧಾರವೆಂದು ನಾಡಗೌಡ ತಿಳಿಸಿದರು.
ನಾಮಪತ್ರ ಹಿಂಪಡೆದ ಡಾ. ಎ.ಆರ್. ಬೆಳಗಲಿ ಮಾತನಾಡಿ, ಕ್ಷೇತ್ರದಲ್ಲಿನ ಮತದಾರರ ಬೆಂಬಲ ಸಂಪೂರ್ಣವಾಗಿದೆ. ಕಾಂಗ್ರೆಸ್ ಪಕ್ಷ ಅವಸರದ ನಿರ್ಧಾರದಿಂದ ತೇರದಾಳ ಟಿಕೆಟ್ ಹಂಚಿಕೆ ಮಾಡಿದ್ದರ ಕಾರಣ, ಇದರ ಅನುಭವ ಅರಿವಾಗುವದೆಂದು ಹೇಳಿದರು.
ಇದು ನನ್ನ ಕೊನೆಯ ಚುನಾವಣೆಯಾಗಿತ್ತು. ಅಲ್ಲದೆ ಹೈಕಮಾಂಡ್ ಕೂಡ ಅತ್ಯಂತ ವಿಶ್ವಾಸದಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಕೊನೆಯ ಕ್ಷಣದಲ್ಲಿ ಯಾವದೋ ಒತ್ತಡಕ್ಕೆ ಮಣಿದು ಅಭ್ಯರ್ಥಿ ಬದಲಿಸಿದ್ದು ಬೇಸರ ತಂದಿದೆ ಎಂದು ಭಾವುಕರಾಗಿ ನುಡಿದರು.
ಶಂಕರ ಸೊರಗಾಂವಿ ಮಾತನಾಡಿ, ಕ್ಷೇತ್ರಾದ್ಯಂತ ಡಾ. ನಾಡಗೌಡರು ಮಾಡಿದ ಕಾರ್ಯಕ್ಕೆ ಜನತೆ ಕೈ ಹಿಡಿಯಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಚಾತುರ್ಯದಿಂದ ಮತದಾರರಿಗೆ ತುಂಬ ನೋವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಅನಿವಾರ್ಯವಾಗಿದ್ದು, ಮತದಾರರು ನಾಡಗೌಡರ ಗೆಲುವಿಗೆ ಕಾರಣರಾಗಲಿದ್ದಾರೆಂದರು.