ಜಗತ್ತಿಗೆ ಪ್ರಜಾಪ್ರಭುತ್ವವನ್ನು ಮೊದಲು ಪರಿಚಯಿಸಿದವರು ಶ್ರೀಅಲ್ಲಮಪ್ರಭುಗಳು
ತೇರದಾಳ : ಶ್ರಾವಣ ಮಾಸದ ಕೊನೆಯ ಸೋಮವಾರ ಪಟ್ಟಣದ ಆರಾಧ್ಯದೈವ ಶ್ರೀ ಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ನಡೆದ ಪಾಲಕಿ ಉತ್ಸವ ಹಾಗೂ ನಂದಿಕೋಲು ಉತ್ಸವದಲ್ಲಿ ಶಾಸಕ ಸಿದ್ದು ಸವದಿ ಪಾಲ್ಗೊಂಡು ನಂತರ ಅರ್ಚಕರಿಂದ ಆಶೀರ್ವಾದ ಪಡೆದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೊರೊನಾ ಹಾಗೂ ಅತೀವೃಷ್ಟಿ ಮಳೆಯಿಂದಾಗಿ ಜಾತ್ರೆಯು ನಡೆದಿರಲಿಲ್ಲ. ಈ ವರ್ಷ ಸರಕಾರ ಜಾತ್ರೆಗಳನ್ನು ಮಾಡಲು ಅವಕಾಶ ಕೊಟ್ಟಿರುವುದರಿಂದ ಈ ವರ್ಷ ಜಾತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದಾರೆ. 
   ಶ್ರೀಅಲ್ಲಮಪ್ರಭುಗಳು ಜಗತ್ತಿಗೆ ಮೊದಲನೆಯ ಅನುಭವ ಮಂಟಪ ಮಾಡಿ ಶೂನ್ಯ ಸಿಂಹಾಸನಾಧೀಶನಾಗಿ ಜಗತ್ತಿಗೆ ಪ್ರಜಾಪ್ರಭುತ್ವವನ್ನು ಮೊದಲು ಪರಿಚಯಿಸಿದವರು. ಶ್ರೀ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ಕಾರ್ಯಕಲಾಪಗಳು ಬಸವಣ್ಣನವರ ಕಾಲದಲ್ಲಿ ನಡೆಯುತ್ತಿದ್ದವು. ಶಿವ ಶರಣರನ್ನು ಹುಟ್ಟು ಹಾಕಿ ಸಮಾಜದ ಓರೆಕೋರೆಗಳನ್ನು ತಿದ್ದುವಂತ ಕೆಲಸವನ್ನು ಅಲ್ಲಮಪ್ರಭುಗಳು ತಮ್ಮ ವಚನಗಳ ಮುಖಾಂತರ ಮಾಡಿದರು. ಶೂನ್ಯಸಿಂಹಾಶನಾಧೀಶ ಶ್ರೀ ಅಲ್ಲಮಪ್ರಭು ನಮ್ಮ ಪಟ್ಟಣದಲ್ಲಿ ಪವಿತ್ರವಾದ ದೇವಸ್ಥಾನ ಸ್ಥಾಪನೆಯಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಹಾಗೂ ನಾವೆಲ್ಲರೂ ಭಾಗ್ಯವಂತರು. ರಾಜ್ಯದ ವಿವಿಧ ಭಾಗಗಳಿಂದ, ನಗರಗಳಿಂದ, ಹಾಗೂ ಹೊರರಾಜ್ಯಗಳಿಂದ ಮತ್ತು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿರುವಂತ ಎಲ್ಲ ಭಕ್ತಾದಿಗಳಿಗೆ ಶ್ರೀಅಲ್ಲಮಪ್ರಭು ಸುಖ ಶಾಂತಿಯನ್ನು ಕೊಡಲಿ ಎಂದು ನಾನು ಶ್ರೀ ಅಲ್ಲಮಪ್ರಭುವಿನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.  
   ಈ ಸಂದರ್ಭದಲ್ಲಿ ಅರ್ಚಕರಾದ ಗುಹೇಶ್ವರ ಪುರಾಣಿಕ, ಆನಂದ ಹಿತ್ತಲಮನಿ, ಸರ್ವಜ್ಞ ಭಾಂವಿ, ಮುಖಂಡರಾದ ರಾಮಣ್ಣ ಹಿಡಕಲ್ಲ, ಶ್ರೀಶೈಲ ತೆಳಗಿನಮನಿ, ಪ್ರಭು ಬಾಗಿ, ಸಂಗಮೇಶ ಕಾಲತಿಪ್ಪಿ, ಮುರಗೇಶ ಮಿರ್ಜಿ ಸೇರಿದಂತೆ ದೇವಸ್ಥಾನದ ಅರ್ಚಕರು ಹಾಗೂ ಇನ್ನಿತರರು ಇದ್ದರು.