ತೇರದಾಳ : ಇಲ್ಲಿನ ಕ್ಷೇತ್ರಾಧಿಪತಿ ಶ್ರೀಅಲ್ಲಮ ಪ್ರಭುದೇವರ ಜಾತ್ರೆ ನಿಮಿತ್ಯ ಇಂದು ಶ್ರಾವಣ ಮಾಸದ ಕೊನೆಯ ಸೋಮವಾರ ಸಹಸ್ರ-ಸಹಸ್ರ ಸಂಖ್ಯೆಯ ಸದ್ಭಕ್ತರ ಜೈಘೋಷಗಳು, ಬೃಂಗೀಸ್ವಾಮಿಗಳು, ಕಲಾವಿದರ ವಚನ ಗಾಯನದೊಂದಿಗೆ, ಶ್ರೀ ಪ್ರಭುಲಿಂಗೇಶ್ವರ ಝಾಂಝ ಪಥಕ, ಕರಡಿಮೇಳ, ಶಹನಾಯಿ, ಸಂಬಾಳ ವಾದ್ಯ ವೃಂದಗಳೊಂದಿಗೆ ಪಾಲಕಿ ಉತ್ಸವ ಮತ್ತು ನಂದಿಕೋಲು ಉತ್ಸವ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು, ಬೆಳಿಗ್ಗೆ 10 ಗಂಟೆಗೆ ವಿಶೇಷ ಅಲಂಕಾರ ಪೂಜೆ, ಪೂಜಾ ಕೈಂಕರ್ಯಗಳು ನಡೆದವು, ಅಂದು ವಿಶೇಷ ಅಲಂಕಾರ ಪೂಜೆಯನ್ನು ವಿವಿಧ ಹೂವುಗಳಿಂದ ಅರ್ಚಕರು ಅಲಂಕಾರ ಮಾಡಿರುತ್ತಾರೆ. ಹೂಗಳಿಂದ ಅಲಂಕೃತ ಪಾಲಕಿ ಉತ್ಸವ ಹಾಗೂ ನಂದಿಕೋಲು ಉತ್ಸವ ಸಡಗರ ಸಂಭ್ರಮದಿಂದ ಜರುಗಿತು. ಸದ್ಭಕ್ತರು ಬೆಂಡು, ಬೆತ್ತಾಸ್ ಹಾಗೂ ಉತ್ತತ್ತಿ ಪಾಲಕಿ ಹಾಗೂ ನಂದಿಕೋಳು ಮೇಲೆ ಹಾರಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ದೇವಸ್ಥಾನದ ಸಮಸ್ತ ಅರ್ಚಕರು, ಉದ್ಯಮಿ ಜಗದೀಶ ಗುಡಗುಂಟಿಮಠ, ಪ್ರವೀಣ ನಾಡಗೌಡ, ವಿಜಯ ಮಹಾಂತ ನಾಡಗೌಡ ಹಾಗೂ ಕುಟುಂಬ ವರ್ಗ, ಶಾಸಕ ಸಿದ್ದು ಸವದಿ, ಪಟ್ಟಣದ ಮುಖಂಡರು, ಯುವಕರು, ಮಾತೆಯರು,ಮಕ್ಕಳು ಸೇರಿದಂತೆ ರಾಜ್ಯ ಹೊರರಾಜ್ಯಗಳಿಂದ, ಪಟ್ಟಣದ ಸುತ್ತಮುತ್ತಲಿನ ಗ್ರಾಮ ನಗರಗಳಿಂದ ಅಪಾರ ಭಕ್ತ ಸಮೂಹ ಪಾಲ್ಗೊಂಡಿದ್ದರು.
ಉತ್ಸವಕ್ಕಿಂತ ಮುಂಚಿತವಾಗಿ ಮಾಜಿ ಸಚಿವೆ ಉಮಾಶ್ರೀ, ಡಾ.ಪದ್ಮಜೀತ ನಾಡಗೌಡಪಾಟೀಲ ದೇವಸ್ಥಾನಕ್ಕೆ ಬಂದು ದರ್ಶನಾಶೀರ್ವಾದ ಪಡೆದರು.
ಸ್ಥಳೀಯ ಪಿಎಸ್‍ಐ ರವಿ ಪವಾರ ಹಾಗೂ ಸಿಬ್ಬಂದಿ ಶಾಂತಿ ಸುವ್ಯವಸ್ಥೆ, ಬಂದೋಬಸ್ತ್ ಗೆ ಕ್ರಮ ಕೈಗೊಂಡಿದ್ದರು. ನಸುಕಿನ ಜಾವ ಸದ್ಭಕ್ತರು ದೀಡನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು. ಹೊರ ರಾಜ್ಯಗಳಿಂದ ಬಂದಿರುವ ಸದ್ಭಕ್ತರು, ಬೇರೆ ಬೇರೆ ಊರು, ಗ್ರಾಮಗಳಿಂದ ಸದ್ಭಕ್ತರು ಪಾದಯಾತ್ರೆಯ ಮೂಲಕವೂ ಆಗಮಿಸಿ ದರ್ಶನಾಶೀರ್ವಾದ ಪಡೆದುಕೊಂಡರು.
ಶ್ರೀಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮೀತಿ ಹಾಗೂ ಸಮಸ್ತ ಸದ್ಭಕ್ತ ಮಂಡಳಿಯವರು ಬಂದ ಸದ್ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಗದ್ದಲ ಗಲಾಟೆಯಾಗದಂತೆ ಮಹಿಳೆಯರಿಗೆ, ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದು ಪ್ರಶಂಸನೀಯವಾಗಿದೆ ಎಂದು ಸದ್ಭಕ್ತರು ಅಭಿಪ್ರಾಯಪಟ್ಟರು.

Social Plugin