ರಬಕವಿ-ಬನಹಟ್ಟಿ,ಆ18: ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮನೆಗಳನ್ನು ಕಂದಾಯ, ಅರಣ್ಯ ಹಾಗು ನಗರಸಭೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸುಮಾರು 5 ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಿದ್ದಲ್ಲದೆ, ದಾಖಲೆಗಳಿಲ್ಲದೆ ಲೇಔಟ್ ಮಾಡಿಕೊಂಡಿರುವದನ್ನೂ ನೆಲಸಮ ಮಾಡಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸರ್ವೆ ನಂ.7 ರಲ್ಲಿನ ಪ್ರದೇಶದಲ್ಲಿ ಅರಣ್ಯ ಹಾಗು ಕೆಲ ಖಾಸಗಿ ಮಾಲಿಕತ್ವದಲ್ಲಿರುವ ಪ್ರದೇಶವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡು ಯಾವದೇ ನಿಯಮಗಳನ್ವಯಸದೆ ಕಾಮಗಾರಿ ಪ್ರಾರಂಭಿಸಿದ್ದರ ಕಾರಣ ನಗರಸಭೆ, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಬಂದೋಬಸ್ತನೊಂದಿಗೆ ಬೆಳಿಗ್ಗೆ 5 ಗಂಟೆಗೆ ತೆರವು ಕಾರ್ಯಾಚರಣೆ ನಡೆಸಿದರು. ಜೆಸಿಬಿ ಯಂತ್ರದಿಂದ ತಗಡಿನ ಶೆಡ್, ಕಲ್ಲುಗಳನ್ನು ತೆರವುಗೊಳಿಸಲಾಯಿತು. 10 ಕ್ಕೂ ಅಧಿಕ ಟ್ರ್ಯಾಕ್ಟರ್‍ಗಳ ಮೂಲಕ ಅಲ್ಲಿದ್ದ ಸಾಮಗ್ರಿಗಳನ್ನು ಹೊತ್ತೊಯ್ದರು.
ಖಾಸಗಿ ಪ್ರದೇಶದಲ್ಲಿನ ಜಾಗೆಯನ್ನು ಅನಧಿಕೃತವಾಗಿ ಸಂಭಂಧವಿಲ್ಲದವರಿಂದ ಮಾರಾಟ ಮಾಡುತ್ತಿದ್ದರಲ್ಲದೆ, ಕೆಲ ಅರಣ್ಯ ಪ್ರದೇಶದಲ್ಲಿ ಶೆಡ್ ನಿರ್ಮಾಣ ಕಾರ್ಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತೀಕ್ಷ್ಣವಾಗಿ ವೀಕ್ಷಣೆ ನಡೆಸಿ ಏಕಾಏಕಿ ಜಂಟಿ ಕಾರ್ಯಾಚರಣೆ ಮಾಡುವಲ್ಲಿ ಕಾರಣವಾಗಿದೆ.
`ಜಾಗೆ ಖರೀದಿಸುವ ಸಂದರ್ಭ ಸೂಕ್ತ ದಾಖಲಾತಿಗಳಿದ್ದರೆ ಮಾತ್ರ ವ್ಯವಹರಿಸಬೇಕು. ಇಲ್ಲವಾದಲ್ಲಿ ನಷ್ಟ ಅನುಭವಿಸುವದಲ್ಲದೆ ಶಿಕ್ಷೆಗೂ ಕಾರಣವಾಗುವದು. ಜನತೆ ಇದರಿಂದ ಎಚ್ಛೆತ್ತುಕೊಳ್ಳಬೇಕು.’----ಸಂಜಯ ಇಂಗಳೆ, ತಹಶೀಲ್ದಾರ.
`ಅನುಮತಿ ಪಡೆಯದೇ ಲೇಔಟ್ ಹಾಗು ಮನೆಗಳ ನಿರ್ಮಾಣ ಕಾರ್ಯದ ಹಂತ ನಡೆಯುತ್ತಿತ್ತು. ಇದನ್ನು ಅವಲೋಕಿಸಿ ಕಾರ್ಯಾಚರಣೆ ಮಾಡಲಾಗಿದೆ.’---ಅಶೋಕ ಗುಡಿಮನಿ, ಪೌರಾಯುಕ್ತರು, ರಬಕವಿ-ಬನಹಟ್ಟಿ.
`ಜಂಟಿ ಸರ್ವೆ ಮಾಡದೇ ಸಾರ್ವಜನಿಕರು ಮನೆಗಳ ನಿರ್ಮಾಣ ಕಾರ್ಯ ಮಾಡಿದ್ದನ್ನು ಗಮನಸಿ, ಕಾನೂನು ಬಾಹಿರವಾಗಿ ಹಾಗು ಅಲ್ಲಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಗುರುತು ಹಾಕಿಲ್ಲ.’----ಮಲ್ಲಿಕಾರ್ಜುನ ನಾವಿ, ಉಪವಲಯ ಅರಣ್ಯ ಇಲಾಖೆ.

Social Plugin