ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆ
*ರಾಯರ 25ನೇ ವರ್ಷದ ಬೆಳ್ಳಿ ಮಹೋತ್ಸವದ ಆರಾಧನೆ
ರಬಕವಿ-ಬನಹಟ್ಟಿ,ಆ18: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯದ 25ನೇ ಬೆಳ್ಳಿ ಮಹೋತ್ಸವ ಆರಾಧನೆಯು ರಬಕವಿಯ ಶ್ರೀಮಠದ ಮುಂಭಾಗದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ನೆರವೇರಿಸಿ ಇದೇ ಸಂದರ್ಭ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆಯೂ ಜರುಗಿತು.
ನಂತರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ರಬಕವಿಯ ಗುರುಸಿದ್ಧೇಶ್ವರ ಶ್ರೀಗಳು, ಗುರು ರಾಘವೇಂದ್ರ ಸ್ವಾಮಿಗಳನ್ನು ನಾವು ಒಲಿಸಿಕೊಳ್ಳುವದು ಮುಖ್ಯ. ಪ್ರತಿ ಗುರುವಾರ ನಿಮ್ಮ ಮನೆಯ ಹತ್ತಿರವಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೆಟ್ಟಿ ನೀಡಿ ಆತನ ದರ್ಶನ ಮಾಡಿರಿ ಇದರಿಂದ ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ ಎಂದರು.
ಬನಹಟ್ಟಿಯ ಶರಣಬಸವ ಶಿವಾಚಾರ್ಯರು ಮಾತನಾಡಿ, ರಬಕವಿಯಲ್ಲಿ ಸಾಯಿಬಾಬಾ ಮಂದಿರ ಕೊರತೆಯಿತ್ತು. ಇದೀಗ ಇದರಿಂದ ದೂರವಾಗಿ ಎಲ್ಲ ಭಕ್ತರಿಗೂ ಸಾಯಿನಾಥರ ದರ್ಶನ ಪಡೆಯುವಲ್ಲಿ ಸೌಭಾಗ್ಯ ಕಲ್ಪಿಸಿದ್ದಕ್ಕೆ ರಾಘವೇಂದ್ರ ತೇಲಿಯವರನ್ನು ಅಭಿನಂದಿಸಿದರು.
ಹೆಸರಾಂತ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಧಾರ್ಮಿಕ ಸಹಿಷ್ಣುತೆಯಿಂದ ಭಾರತಕ್ಕೆ ದೊಡ್ಡ ಯಶಸ್ಸು ಸಾಧಿಸಿದೆ. ಧರ್ಮದ ಆಧಾರದಲ್ಲಿ ಒಡೆದು ಚೂರಾಗದಿದ್ದರೆ ಭಾರತ ದೀರ್ಘ ಕಾಲದವರೆಗೆ ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತದೆ. ಇಂಥಹ ಕಾರ್ಯ ಸಾಮಾನ್ಯ ಜನರಿಂದ ನಡೆಯುತ್ತಿರುವದು ಶ್ಲಾಘನೀಯವೆಂದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ರಾಮಪೂರದ ನೀಲಕಂಠೇಶ್ವರ ಮಠದಿಂದ ರಾಘವೇಂದ್ರ ದೇವಸ್ಥಾನದವರೆಗೆ ಸುಮಾರು 2 ಕಿಮೀನಷ್ಟು ಮೆರವಣಿಗೆಯು ಉಡುಪಿಯು ಲಕ್ಷ್ಮೀನಾರಾಯಣ ಚೆಂಡೆ ವಾದ್ಯ ಬಳಗದಿಂದ ನೂರಾರು ಕುಂಭ ಹೊತ್ತ ಮಹಿಳೆಯರೊಂದಿಗೆ ಸಾಯಿಬಾಬಾರ ಮೂರ್ತಿ ಮೆರವಣಿಗೆ ನೋಡುಗರ ಮೈನವಿರೇಳಿಸುವಂತೆ ಮಾಡಿತು.
ವೇದಿಕೆ ಮೇಲೆ ನಗರಸಭಾಧ್ಯಕ್ಷ ಸಂಜಯ ತೆಗ್ಗಿ, ಶಶಿಧರ ಪೂಜಾರಿ, ವೆಂಕನಗೌಡ ಪಾಟೀಲ, ಚನ್ನಮಲ್ಲಪ್ಪ ತೇಲಿ, ರಾಮಣ್ಣ ಹುಲಕುಂದ, ಪರಪ್ಪ ಬಿಳ್ಳೂರ ಇದ್ದರು.

Social Plugin