ತೇರದಾಳ ಪೇಠ ಭಾಗದ ಕನ್ನಡ ಶಾಲೆಯ ಹತ್ತಿರ ಸ್ವರ್ಗಸ್ಥ ಪದ್ಮಶ್ರೀ ಇಬ್ರಾಹಿಂ ಸುತಾರವರ ಅಕಾಲಿಕ ನಿಧನದ ಪ್ರಯುಕ್ತ ಆಯೋಜಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತೇರದಾಳ : ಸರ್ವಧರ್ಮಗಳ ಸಮಾನತೆಯ ಹರಿಕಾರ, ಪ್ರವಚನ ಮಾಂತ್ರಿಕ, ಆಧ್ಯಾತ್ಮ ದಾಸೋಹಿ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಂಬ್ರಾಹಿಂ ಸುತಾರರವರ ಅಗಲಿಕೆಗೆ ಸಾರ್ವಜನಿಕರು ಮೊಂಭತ್ತಿ ಬೆಳಗಿ ಆತ್ಮಶಾಂತಿಗಾಗಿ ಪ್ರಾರ್ಥಿಸಿ ಮೇದಾವಿ ಪ್ರವಚನ ಪಟು ಮತ್ತೊಮ್ಮೆ ಕರುನಾಡಿನಲ್ಲಿ ಜನಿಸಿಬರಲೆಂದು ಕಂಬನಿ ಮಿಡಿದರು.
ಪಟ್ಟಣದ ಹನುಮಾನ ದೇವಸ್ಥಾನದ ಹತ್ತಿರ ತೇರದಾಳ ತಾಲೂಕಾ ಹೋರಾಟ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದ ಇಬ್ರಾಹಿಂ ಸುತಾರರವರ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ಚಿರಶಾಂತಿಗಾಗಿ ಪ್ರಾರ್ಥಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ತೇರದಾಳ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಬುಜಬಲಿ ಕೆಂಗಾಲಿ ಮಾತನಾಡಿ ಇಬ್ರಾಹಿಂ ಸುತಾರರವರ ಪ್ರವಚನ ಅನಕ್ಷರಸ್ಥರಿಗೂ ಅರ್ಥವಾಗುವಂತಿರುತ್ತಿತ್ತು, ಅವರ ಪ್ರವಚನದಲ್ಲಿ ವಾಸ್ಥವತೆಯ ಅರಿವು ಮೂಡಿಸುವ ಕುಶಲತೆ ಅವರ ಈ ಮಟ್ಟದ ಉನ್ನತಿಗೆ ಹಾಗೂ ಜನಸಾಮಾನ್ಯರ ಮನಸ್ಸಿನಲ್ಲಿ ಚಾಪು ಮೂಡಿಸುವಂತಹ ಸಾಧನೆಗೆ ಮೂಲವಾಗಿದ್ದು, ಮನುಕುಲಕ್ಕೆ ಸನ್ಮಾರ್ಗದ ರಹದಾರಿಯನ್ನು ತೋರಿದ ಇವರ ಅಗಲಿಕೆ ಕೇವಲ ನಮ್ಮ ನಾಡಿಗೆ ಮಾತ್ರವಲ್ಲದೇ ಇಡೀ ವಿಶ್ವ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು ದೇವರು ಇವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಇವರ ಕುಟುಂಬ ವರ್ಗಕ್ಕೆ ದು:ಖ ಭರಿಸುವ ಶಕ್ತಿ ತುಂಬಲೆಂದು ಆಶಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಸದಾಶಿವ ಮುದಕನ್ನವರ, ಸಲೀಂ ತಾಂಬೋಳಿ, ಬಾಬು ಪೆಂಡಾರಿ, ಮೃತ್ಯುಂಜಯ ಕೆಳಗಿನಮನಿ, ಸಿದ್ಧಪ್ಪ ಹುದ್ದಾರ, ಮುಸ್ತಫಾ ಮೋಮಿನ್, ಸತ್ಯಪ್ಪ ಮಹೀಷವಾಡಗಿ, ಬಸಪ್ಪ ನಿಂಬಿಕಾಯಿ, ಚಿಕ್ಕಪ್ಪ ಲೋಹಾರ, ಸದಾಶಿವ ಗೊಂದಳಿ, ಬಾಷಾ ತಾಂಬೋಳಿ, ಬಾಬಾಸಾಹೇಬ ದೇಸಾಯಿ, ಶಿವಾನಂದ ಖವಾಸಿ, ರಾಮನಗೌಡ ಪಾಟೀಲ, ಕುಮಾರ ಕೌಜಲಗಿ, ಶಿವಪ್ಪ ಹೋಡಕರ, ಕರವೇ ಕಾರ್ಯಕರ್ತ ರಾಜು ನದಾಪ, ಅಂಬಿಕಾ ತೆಳಗಡೆ ಸೇರಿದಂತೆ ತೇರದಾಳ ತಾಲೂಕಾ ಹೋರಾಟ ಸಮಿತಿ ಸದಸ್ಯರು,ಕರವೇ ಕಾರ್ಯಕರ್ತರು, ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು.

Social Plugin