ತೇರದಾಳದ ದಲಿತ ಪರ ವಿವಿಧ ಸಂಘಟನೆಗಳು ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಇವರನ್ನು ವಜಾಗೊಳಿಸಿ ಬಂಧಿಸುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ ಎಸ್,ಬಿ,ಕಾಂಬಳೆ ಇವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಇವರ ಪ್ರತಿಕೃತಿಯನ್ನು ತೇರದಾಳದ ದಲಿತ ಪರ ವಿವಿಧ ಸಂಘಟನೆಗಳಿಂದ ದಹನ ಮಾಡಲಾಯಿತು.
ತೇರದಾಳ : ಕಳೆದ ಜನೇವರಿ 26ರ 73ನೇ ಗಣರಾಜ್ಯೋತ್ಸವ ದಿನದಂದು ರಾಯಚೂರು ಜಿಲ್ಲೆಯಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ನಾವು ಎಂದೂ ಸಹಿಸುವುದಿಲ್ಲ. ಬಾಬಾ ಸಾಹೇಬರು ಕೇವಲ ದಲಿತರ ಆಸ್ತಿಯಲ್ಲ, ಅವರು ಇಡೀ ದೇಶದ ಆಸ್ತಿ ಅವರು ಈ ನಾಡಿಗೆ ನೀಡಿದ ಕೊಡುಗೆ ಅಪಾರ. ಮಹಾಮಾನವತಾವಾದಿ, ವಿಶ್ವರತ್ನ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಈ ದೇಶಕ್ಕೆ ಅರ್ಪಿಸಿರುವ ಸಂವಿಧಾನ ಇಡೀ ಜಗತ್ತಿನಲ್ಲಿಯೇ ಬಹು ದೊಡ್ಡ ಹಾಗೂ ಲಿಖಿತ ವಿಶ್ವ ಶ್ರೇಷ್ಠ ಸಂವಿಧಾನ, ದೇಶವೇ ಗಣರಾಜ್ಯೋತ್ಸವದಂದು ಈ ಶ್ರೇಷ್ಠ ಮಹಾ ನಾಯಕನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸುತ್ತಿರುವಾಗ ರಾಯಚೂರು ಜಿಲ್ಲೆಯಲ್ಲಿ ನ್ಯಾಯಾಧೀಶನೆನಸಿಕೊಂಡ ಅವಿವೇಕಿ ಮಲ್ಲಿಕಾರ್ಜುನ ಗೌಡ ಈತನು ಬಾಬಾಸಾಹೇಬರ ಭಾವಚಿತ್ರವನ್ನು ತಗೆಯದಿದ್ದರೆ ನಾನು ಧ್ವಜಾರೋಹಣ ಮಾಡುವುದಿಲ್ಲವೆಂದು ಅನಾಗರಿಕರಂತೆ ವರ್ತಿಸಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬರಿಗೆ ಅವಮಾನ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ದಲಿತ ಪರ ವಿವಿಧ ಸಂಘಟನೆಗಳ ಮುಖಂಡರು ಹೇಳಿದರು.
ಪಟ್ಟಣದ ದಲಿತ ಪರ ವಿವಿಧ ಸಂಘಟನೆಗಳು ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಇವರನ್ನು ವಜಾಗೊಳಿಸಿ ಬಂಧಿಸುವಂತೆ ಆಗ್ರಹಿಸಿ ತೇರದಾಳ ಸ್ವಯಂ ಪ್ರೇರಿತ ಬಂದ್ ಹಿನ್ನಲೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಶೀಲ್ದಾರ ಎಸ್.ಬಿ.ಕಾಂಬಳೆ ಇವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಘಟನೆಗಳನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ದೇಶಕ್ಕೆ ಗಂಡಾಂತರವಾಗುವಂತ ಪರಿಸ್ಥಿತಿ ಬರುವುದರಲ್ಲಿ ಎರಡು ಮಾತಿಲ್ಲ. ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ತಗೆಯಲು ಹೇಳುತ್ತಾರೆ. ನಾಳೆ ಇಡೀ ಸಂವಿಧಾನವನ್ನೇ ತಗೆಯಲು ಹೇಳುತ್ತಾರೆ. ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ನ್ಯಾಯಾಧೀಶರನ್ನು ಹುದ್ದೆಯಿಂದ ವಜಾಗೊಳಿಸಿ ಜೈಲಿಗೆ ಕಳುಹಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಉಗ್ರ ರೂಪ ತಾಳುತ್ತದೆ ಎಂದರು.
ಬಂದ್ ಯಶಸ್ವಿ : ದಲಿತ ಪರ ಸಂಘಟನೆಗಳು ನೀಡಿದ ಬಂದ್ ಕರೆ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಪಟ್ಟಣದಲ್ಲಿ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದ್ದರು. ಶಾಲೆ ಕಾಲೇಜುಗಳು ಹಾಗೂ ಬ್ಯಾಂಕ್ ಸೇರಿದಂತೆ ಸರಕಾರಿ ಕಚೇರಿಗಳು ಹಾಗೂ ಅವಶ್ಯಕ ವಸ್ತುಗಳ ಅಂಗಡಿಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಬಸ್ ಸಂಚಾರ ಬಂದ್ ಆಗಿತ್ತು. ಪ್ರತಿಭಟನಾಕಾರರು ಪಟ್ಟಣದ ಅಂಬೇಡ್ಕರ್ ಸರ್ಕಲ್‍ದಿಂದ ತಮದಡ್ಡಿ ನಾಕಾ, ಕಾಳಿನ ಬಜಾರ, ವಿಶೇಷ ತಹಶೀಲ್ದಾರ ಕಚೇರಿ, ಮಹಾವೀರ ಸರ್ಕಲ್‍ದಿಂದ ಬಸವೇಶ್ವರ ಸರ್ಕಲ್‍ದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾಕಾರರಿಂದ ಮಲ್ಲಿಕಾರ್ಜುನಗೌಡ ಇವರ ಪ್ರತಿಕೃತಿಯನ್ನು ದಹನ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹನಮಂತ ರೋಡನ್ನವರ, ಪಿ.ಎಸ್.ಮಾಸ್ತಿ, ರಾಜು ಸರಿಕರ, ದಯಾನಂದ ಕಾಳೆ, ಪ್ರಭು ಗಸ್ತಿ, ಮಾಶೂಂ ಇನಾಮದಾರ, ರಾಜೇಸಾಬ ನಗಾರ್ಜಿ, ನೇಮಣ್ಣಾ ಸಾವಂತನವರ, ಕುಮಾರ ಪಾತ್ರೋಟ, ಸುರೇಶ ಗಾಡಿವಡ್ಡರ, ಗೋಪಾಲ ಮಾಂಗ, ಆನಂದ ನಡುವಿನಕೇರಿ, ಸಿದ್ಧಾರ್ಥ ದೊಡಮನಿ, ರಮೇಶ ಧರೆನ್ನವರ, ನಾಗಪ್ಪ ದೊಡಮನಿ, ಸಾವಂತ ಮಾಂಗ, ಅಣ್ಣಪ್ಪ ವಾಜಂತ್ರಿ ಸೇರಿದಂತೆ ಪಟ್ಟಣದ ಎಲ್ಲ ಸಮಾಜದ ಮುಖಂಡರು, ದಲಿತ ಪರ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು ಮತ್ತು ದಲಿತ ಬಾಂಧವರು ಭಾಗವಹಿಸಿದ್ದರು.

Social Plugin