ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಜೈನ ದುಗ್ದ ಹಾಲಿನ ಡೈರಿ ಹಾಗೂ ಗೆಳೆಯರ ಬಳಗ ವತಿಯಿಂದ ಒಟ್ಟು 07 ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿ ಸಾಧನೆ ತೋರಿದ ಬನಹಟ್ಟಿಯ ಅಕ್ಷಯ ದೇವಾಡಿಗರನ್ನು ಸತ್ಕರಿಸಲಾಯಿತು.
7 ವಿವಿಧ ಹುದ್ದೆಗಳಿಗೆ ಆಯ್ಕೆ : ಬಿ.ಕಾಂ ಪದವಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಇಂದು ಪಿಎಸ್‍ಆಯ್ ಹುದ್ದೆಗೆ ಆಯ್ಕೆ 
ತೇರದಾಳ : ಜೀವನದಲ್ಲಿ ಸಾಧಿಸಬೇಕೆಂಬ ಛಲವೊಂದಿದ್ದರೇ ಸೇರಬೇಕಾದ ಗುರಿ ಮುಟ್ಟಲು ಸಾಧ್ಯ, ಸಾಧನೆಗೆ ರ್ಯಾಂಕ್‍ಗಿಂತಲೂ ಏಕಾಗ್ರತೆ ಮುಖ್ಯ, ಸೋಲು ಬದುಕಿನ ಬದಲಾವಣೆಗೆ ದೇವರು ಹೇಳಿದ ಪಾಠ, ಅಧ್ಯಯನದಲ್ಲಿ ಬಾಯಿಪಾಠಕ್ಕಿಂತ ನಿರಂತರ ಅಧ್ಯಯನ ಮುಖ್ಯ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ದೃಢ ಸಂಕಲ್ಪ ಮಾಡಿದರೆ ಅಮೋಘ ಸಾಧನೆ ಅಸಾಧ್ಯವಲ್ಲ,ಬಿ.ಕಾಂ ಪದವಿಯಲ್ಲಿ ಅನುತ್ತೀರ್ಣಗೊಂಡು ಒಂದು ವರ್ಷದ ನಂತರ ಉತ್ತೀರ್ಣನಾದ ನಾನು ಇಂದು ಪಿಎಸ್‍ಆಯ್ ಸಿವ್ಹಿಲ್ ಹುದ್ದೆಗೆ ಆಯ್ಕೆಯಾಗಿರುವುದೇ ಉತ್ತಮ ಉದಾಹರಣೆಯಂದು ಸಾಧಕ ಅಕ್ಷಯ ನಾರಾಯಣ ದೇವಾಡಿಗ ಹೇಳಿದರು.
   ಸಮೀಪದ ಹಳಿಂಗಳಿ ಗ್ರಾಮದ ಜೈನ ದುಗ್ದ ಹಾಲಿನ ಡೈರಿ ಹಾಗೂ ಗೆಳೆಯರ ಬಳಗದಿಂದ ಆಯೋಜಿಸಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ತಮ್ಮ ಸಾಧನೆಯ ಪೂರ್ವ ಇತಿಹಾಸವನ್ನು ಹಾಗೂ ತಮ್ಮ ವಿದ್ಯಾರ್ಥಿ ಬದುಕಿನ ಸಿಹಿ-ಕಹಿ ಅನುಭವಗಳನ್ನು ಹಂಚಿಕೊಂಡು ಕೈಲಾಸವಾಸಿ ತಮ್ಮ ತಂದೆಯವರನ್ನು ನೆನೆದು ಕ್ಷಣಹೊತ್ತು ಭಾವುಕರಾದ ಅವರು ಪದವಿಯಲ್ಲಿ ಒಂದು ಸಾರಿ ಅನುತ್ತೀರ್ಣಗೊಂಡ ನಾನು ನಂತರ ಅವಕಾಶಗಳಲ್ಲಿ ಉತ್ತೀರ್ಣನಾಗಿ ಇಂದು ಈ ಮಟ್ಟದ ಸಾಧನೆ ತೋರುವಂತೆ ಮಾಡುವಲ್ಲಿ ನನ್ನ ತಾಯಿಯ ಹಂಬಲ ಹಾಗೂ ಸಹೋದರರ ಬೆಂಬಲ ಮೂಲ ಪ್ರೇರಣೆಯಾಗಿದೆಯಂದು ನುಡಿದರು.
ಸಾಧಕರ ಪರಿಚಯ: ಮೂಲತ: ಮಂಗಳೂರು ಜಿಲ್ಲೆಯ ಮೂಡಬಿದರೆಯವರಾದ ಇವರ ತಂದೆ ನಾರಾಯಣ ದೇವಾಡಿಗ ಹೊಟೇಲ್ ಉದ್ಯೋಗಕ್ಕೆಂದು ಸುಮಾರು 40 ವರ್ಷಗಳ ಹಿಂದೆ ಬನಹಟ್ಟಿಗೆ ಆಗಮಿಸಿ ಬನಹಟ್ಟಿಯಲ್ಲಿಯೇ ನೆಲೆಸಿರುವ ದೇವಾಡಿಗ ಕುಟುಂಬ ಪಟ್ಟಣದ ವೈಭವ ಚಿತ್ರಮಂದಿರದ ಸಮೀಪ ಶಿವಸಾಗರ ಹೊಟೇಲ್ ಉದ್ಯಮದಲ್ಲಿ ತೊಡಗಿದ್ದು, ಮೂರು ಜನ ಸಹೋದರರನ್ನು ಹೊಂದಿದ್ದು, ಇವರ ತಂದೆ ತೀರಿಕೊಂಡ ನಂತರ ಇವರ ಹಿರಿಯಣ್ಣನೇ ಕುಟುಂಬದ ಸಾರಥಿಯಾಗಿದ್ದಾನೆ.
ಶಿಕ್ಷಣ : ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀಮಲ್ಲಿಕಾರ್ಜುನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬನಹಟ್ಟಿಯಲ್ಲಿ ಪೂರ್ಣಗೊಳಿಸಿ ನಂತರ ಪ್ರೌಢ,ಪದವಿ ಪೂರ್ವ ಹಾಗೂ ಬಿ.ಕಾಂ ಪದವಿಯನ್ನು ಪಟ್ಟಣದ ಪ್ರತಿಷ್ಠಿತ ಎಸ್‍ಆರ್‍ಎ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡ ಕ್ಲಾಸಿಕ್ ಕೋಚಿಂಗ್ ಸೆಂಟರ್‍ನಲ್ಲಿ ತರಬೇತಿ ಪಡೆದು, 2021 ರಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೇ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಸೇವೆಯಲ್ಲಿರುವಾಗಲೇ 2021 ರಲ್ಲಿ ನಡೆದ ಪಿಎಸ್‍ಆಯ್ ಪರೀಕ್ಷೆಯಲ್ಲಿ ಪಾಸಾಗಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ದ್ವಿತೀಯ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ 07 ಹುದ್ದೆಗಳಿಗೆ ಆಯ್ಕೆ : ಎಸ್.ಎಸ್.ಎಲ್.ಸಿ ಕೇವಲ ಶೇ58. ಪ್ರತಿಷತದಲ್ಲಿ ಉತ್ತೀರ್ಣನಾಗಿ, ಪಿ.ಯು.ಸಿ ಶೇ56. ಪ್ರತಿಷತದಲ್ಲಿ ಉತ್ತೀಣಗೊಂಡು, ಬಿ.ಕಾಂ ಪದವಿಯಲ್ಲಿ ಅನುತ್ತೀರ್ಣನಾಗಿ ಒಂದು ವರ್ಷದ ನಂತರ ಅವಕಾಶಗಳಲ್ಲಿ ಉತ್ತೀರ್ಣನಾಗಿ ಇಂದು ವಿವಿಧ ಇಲಾಖೆಗಳಲ್ಲಿ ಒಟ್ಟು 07 ಹುದ್ದೆಗಳಿಗೆ ಆಯ್ಕೆಯಾಗುವುದರೊಂದಿಗೆ ಈ ಅಮೋಘ ಸಾಧನೆ ಮಾಡಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. 
    ಈ ವಿದ್ಯಾರ್ಥಿಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಇವರ ಗುರು ವೃಂದ ಹಾಗೂ ಗೆಳೆಯರ ಬಳಗ ಸತ್ಕಾರಗಳ ಸುರಿಮಳೆಗೈಯುತ್ತಿರುವುದು ಪ್ರಸ್ತುತ ದಿನಮಾನಕ್ಕೆ ಎಲ್ಲರಿಗೂ ಮಾದರಿಯಾಗಿದೆ. 
   ಈ ನಿಟ್ಟಿನಲ್ಲಿ ಸಮೀಪದ ಹಳಿಂಗಳಿ ಗ್ರಾಮದ ಜೈನ ದುಗ್ದ ಹಾಲಿನ ಡೈರಿ ಹಾಗೂ ಗೆಳೆಯರ ಬಳಗದಿಂದ ಇವರನ್ನು ಹಾಗೂ ಇವರ ಸಾಧನೆಗೆ ಪ್ರೇರಕವಾಗಿರುವ ಇವರ ಸಹೋದರ ಜಗದೀಶರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಯುವ ಧುರೀಣ ರಾಜು ನಂದೆಪ್ಪನವರ, ಜಿನ್ನಪ್ಪ ಚೌಗಲಾ, ಭೂಪಾಲ ಚಿಣಗಿ, ಬಾಬು ಶಿರೋಳ, ಮಹಾವೀರ ಚೌಗಲಾ, ಅಹಿಂಸಾ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಜೈನ ದುಗ್ದ ಸಮೂಹದ ಸಂಸ್ಥೆಯ ಡಿ.ಆರ್ ಖವಟಕೊಪ್ಪ, ಮಹಾವೀರ ಖವಟಕೊಪ್ಪ, ಸುರೇಶ ಖವಟಕೊಪ್ಪ, ಆನಂದ ಖವಟಕೊಪ್ಪ, ಮಹಾವೀರ ಕೊಂಡಾಳಿ, ಸಿಬಿಎಸ್‍ಇ ಪ್ರಾಚಾರ್ಯ ವಾಯ್.ಎಚ್ ಅಲಾಸ,ಬಾವಿ ಅಂಗಳ ಗೆಳೆಯರ ಬಳಗದ ಪ್ರಜೋತ ದೇಸಾಯಿ, ಅಣ್ಣಾಸಾಬ ಪಾಟೀಲ, ಮಹಾವೀರ ಪಾಟೀಲ, ಭೀಮಪ್ಪ ವೆಂಕಟಾಪೂರ ಹಾಗೂ ಬನಹಟ್ಟಿ ಗೆಳೆಯರ ಬಳಗದ ಸಚೀನ ಬಳಗಾರ, ಉದಯ ಮಠದ, ಸಚೀನ ಸೇರಿದಂತೆ ಸಮಸ್ತ ಗೆಳೆಯರ ಬಳಗದ ಸದಸ್ಯರು ಇದ್ದರು, ಶಿಕ್ಷಕ ಶೀತಲ ನಂದೆಪ್ಪನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.