ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಶ್ರೀಅಲ್ಲಮಪ್ರಭು ದೇವಸ್ಥಾನದ ಪೀಠಾಧಿಪತಿ ಮಹಾವೀರ ಪ್ರಭುಗಳ ಪ್ರಭುವಿನ ಮಹಾಪ್ರಭೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸರಳವಾಗಿ ಜರುಗಿದ ಅಲ್ಲಮ ಜಾತ್ರೆ : ಮುತೈದೆಯರ ಉಡಿ ತುಂಬಿ,ಮಳೆ,ಬೆಳೆ ಸಂಪನ್ನ ಭವಿಷ್ಯ ನುಡಿದ ಶ್ರೀಗಳು
ತೇರದಾಳ : ಲೋಕಕಲ್ಯಾಣಾರ್ಥವಾಗಿ ಜಗತ್ತಿಗೆ ಬೆಳಕಾಗಿರುವ ಅಲ್ಲಮ ಪ್ರಭುವಿನ ನಡೆ ನುಡಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕೆಂದು ಸುಕ್ಷೇತ್ರದ ಪೀಠಾಧಿಪತಿ ಮಹಾವೀರ ಪ್ರಭುಗಳು ತಿಳಿಸಿದರು.
ಸತತ ಮೂರು ದಿನಗಳಿಂದ ಸರಳವಾಗಿ ನಡೆದ ಸಮೀಪದ ಹಳಿಂಗಳಿ ಗ್ರಾಮದ ಶ್ರೀಅಲ್ಲಮ ಪ್ರಭುದೇವರ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು, ಮಹಿಳೆ ಮಡದಿ ಮಾತ್ರವಲ್ಲ ಮಾತೆಯ ಸ್ವರೂಪಿನಿಯಾಗಿದ್ದು, ಪುರುಷರ ಬಾಳಿನ ಆಶಾಕಿರಣವಾಗಿದ್ದು, ಅವಳೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳದೆ ಮಾನವೀಯವಾಗಿ ವರ್ತಿಸುವಂತೆ ತಿಳಿಸಿದ ಅವರು ಸರ್ವಜನಾಂಗದವರು ಒಗ್ಗೂಡಿ ಮಾನವತೆಯ ಧರ್ಮವನ್ನು ಪ್ರತಿಪಾದಿಸಿ ಜೀವನದಲ್ಲಿ ಸನ್ಮಾರ್ಗವನ್ನು ಅಳವಡಿಸಿಕೊಂಡು ಸಚ್ಚಾರಿತ್ರ್ಯವಂತರಾಗಿ ದುಶ್ಚಟಗಳಿಂದ ದೂರವಾಗಿರಬೇಕೆಂದು ತಿಳಿ ಹೇಳಿ ಆದಷ್ಟು ಬೇಗ ಮಹಾಮಾರಿ ಮಾಯವಾಗಿ ಭಕ್ತರ ಬದುಕು ಹಸನಾಗಲೆಂದು ಆಶೀರ್ವದಿಸಿದರು.
ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವ, ಅಲ್ಲಮ ಪ್ರಭುದೇವರ ಭಾವಚಿತ್ರದ ಮೆರವಣಿಗೆಯೊಂದಿಗೆ ಸಾಗಿ, ಸಮಾರೋಪ ಸಮಾರಂಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಕಾರ್ಯಕ್ರಮದಲ್ಲಿ ಭಕ್ತರಿಂದ ಮಹಾವೀರ ಪ್ರಭುಗಳ ತುಲಾಭಾರ ಮಾಡಲಾಯಿತು. ನಂತರ ಮಹಾವೀರ ಪ್ರಭುಗಳಿಂದ ನುಡಿ ನುಡಿಯಲಾಯಿತು. ಈ ವರ್ಷ ನಾಡಿನಾದ್ಯಂತ ಮಳೆ,ಬೆಳೆ ಸಂಪನ್ನವಾಗಿದ್ದು, ಗಂಗಾ ತಾಯಿ ಮೈದುಂಬಿ ಹರಿವಳೆಂದು ನುಡಿದರು.
ಸಮಾರಂಭದಲ್ಲಿ ಜುಂಜರವಾಡದ ಬಸವರಾಜೇಂದ್ರ ಶರಣರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು. ದಾನಿಗಳನ್ನು ಸತ್ಕರಿಸಲಾಯಿತು ಹಾಗೂ ಪ್ರಸಕ್ತ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

Social Plugin