ತೇರದಾಳ ಪಟ್ಟಣದ ಪೋಲಿಸ್ ಠಾಣೆಯಿಂದ ಬಸ್ ನಿಲ್ದಾಣವರೆಗೆ ರಸ್ತೆ ಅಗಲಿಕರಣ ಕಾಮಗಾರಿಯು ಸ್ಥಗಿತಗೊಂಡಿರುವುದಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ ಜನರಿಂದ ಆಕ್ರೋಶ
ತೇರದಾಳ : ಪಟ್ಟಣದ ಪೋಲಿಸ್ ಠಾಣೆಯಿಂದ ಬಸ್ ನಿಲ್ದಾಣವರೆಗೆ ರಸ್ತೆ ಅಗಲೀಕರಣ ಕಾಮಗಾರಿಯು ವಿಳಂಬ ಹಾಗೂ ಕಾಮಗಾರಿಯು ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿರುವುದಕ್ಕೆ ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ರಸ್ತೆಯು ಮೊದಲು ಬಹಳಷ್ಟು ಎತ್ತರವಾಗಿತ್ತು ಅದನ್ನು ಅಗೆದು ತಗೆದು ಸಮನಾಗಿ ಮಾಡಿ ಇಲ್ಲಿಯ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎರಡು ಬದಿಯ ರಸ್ತೆಯನ್ನು ಅಗೆಯಲಾಗಿದ್ದು, ಗರಸು ಹಾಕಿ ಸಮತಟ್ಟಾಗಿ ಮಾಡಲಾಗಿದೆ. ಇನ್ನೇನು ಕಾಮಗಾರಿಯು ಕೆಲವೆ ದಿನಗಳಲ್ಲಿ ಮುಗಿಯುತ್ತದೆ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಖುಷಿ ಪಟ್ಟಿದ್ದರು. ಆದರೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಒಮ್ಮೆಲೆ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿಯ ಅಂದಾಜು ವೆಚ್ಚವನ್ನು ಹಾಗೂ ಯಾವ ಯೋಜನೆಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಹಾಗೂ ಗುತ್ತಿಗೆದಾರರ ಹೆಸರನ್ನು ರಸ್ತೆಯ ಪಕ್ಕದಲ್ಲಾಗಲಿ ಕಾಮಗಾರಿ ಪ್ರಾರಂಭದ ಹಂತದಲ್ಲಾಗಲಿ ಎಲ್ಲಿಯೂ ವಿವರವನ್ನು ಕಾಣಿಸಿರುವುದಿಲ್ಲ. ರಸ್ತೆಗೆ ಗರಸು ಹಾಕಿ ಬಿಟ್ಟಿದ್ದಾರೆ ಅದಕ್ಕೆ ಸರಿಯಾಗಿ ನೀರನ್ನು ಸಹ ಹಾಕಿರುವುದಿಲ್ಲ ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಎಳುತ್ತಿರುವ ದೂಳಿನಿಂದ ಸಮೀಪದಲ್ಲಿರುವ ಮನೆಗಳಿಗೆ ಹಾಗೂ ಅಂಗಡಿಗಳಿಗೆ ಧೂಳು ಸೇರಿಕೊಂಡಿದೆ ಮತ್ತು ಅಲ್ಲಿರುವ ಜನರಿಗೆ ಧೂಳಿನಿಂದ ರೋಗಗಳು ಬರಲು ಪ್ರಾರಂಭಿಸಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗೂ ರಾತ್ರಿ ಸಮಯದಲ್ಲಿ ಸಂಚರಿಸಲು ರಸ್ತೆಗೆ ಬೆಳಕಿನ ವ್ಯವಸ್ಥೆಯಿರುವುದಿಲ್ಲ. ಪೋಲಿಸ್ ಠಾಣೆಯಿಂದ ಬಸ್ ನಿಲ್ದಾಣವರೆಗೆ ರಸ್ತೆ ಕತ್ತಲುಮಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಕೈಗೊಂಡ ಕಾಮಗಾರಿಯ ಸ್ಥಳದ ಸುತ್ತಲೂ ನೇಕಾರರ ಮನೆಗಳಿವೆ. ಅವರು ನೇಯ್ಗೆಗಾಗಿ ಭೀಮು ತರಲು ಬಹಳಷ್ಟು ತೊಂದರೆಯಾಗುತ್ತಿದೆ. ಮತ್ತು ಪಕ್ಕದಲ್ಲಿಯೇ ಖಾಸಗಿ ಆಸ್ಪತ್ರೆ ಮತ್ತು ಪೋಲಿಸ್ ಠಾಣೆಯಿರುವುದರಿಂದ ಆಸ್ಪತ್ರೆಗೆ ಹಾಗೂ ಪೋಲಿಸ್ ಠಾಣೆಗೆ ಹೋಗಲು ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆದಷ್ಟು ಬೇಗನೆ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಸ್ಥಗಿತಗೊಂಡಿರುವ ಕಾಮಗಾರಿಯನ್ನು ಇನ್ನೇರಡು ದಿನಗಳಲ್ಲಿ ಪ್ರಾರಂಭಿಸದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಮಲ್ಲಪ್ಪ ಬೀಳಗಿ, ಮಹೇಶ ಕುಂಚಗನೂರ, ಶೀತಲ ಘೂಳನ್ನವರ, ಕಾಶೀನಾಥ ರಾಠೋಡ, ರಮೇಶ ಜಡಿ, ಪ್ರಭು ಬಾದರದಿನ್ನಿ, ಚನ್ನಪ್ಪ ಬೆಳಕೂಡ ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಈ ಕಾಮಗಾರಿ ಕುರಿತು ಮಾತನಾಡಿ ಈ ಕಾಮಗಾರಿಯು ಪುರಸಭೆ ವ್ಯಾಪ್ತಿಗೆ ಒಳಪಡುವುದಿಲ್ಲ. ಅದು ಲೋಕೋಪಯೋಗಿ ಇಲಾಖೆಗೆ ಸಂಬಂದ ಪಡುತ್ತದೆ. ಕಾಮಗಾರಿಯನ್ನು ಬೇಗನೆ ಮುಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ನಾನು ಹೇಳಿದ್ದೇನೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಮಾತನಾಡಿದರೆ ಮೇಲಾಧಿಕಾರಿಗಳ ಜೊತೆ ಮಾತನಾಡಿ ಹೇಳುತ್ತೇನೆ, ಬೇಕಾದರೆ ನೀವೇ ಅವರನ್ನು ಕೇಳಿ ಎಂದು ಹೇಳಿದರು.

Social Plugin