ಕಿಕ್ಕಿರಿದು ತುಂಬಿದ ಕೆ ಎಸ್‍ ಆರ್‍ ಟಿ ಸಿ ಬಸ್ಸುಗಳು : ಕೋವಿಡ್ ನಿಯಮಾವಳಿಗಳು ಮಂಗಮಾಯ 
ತೇರದಾಳ : ಕೋವಿಡ್-19 ಸಾಂಕ್ರಾಮಿಕತೆಯ ತೀವ್ರತೆಗೆ ಕಡಿವಾನ ಹಾಕಲು ಸರಕಾರ ಘೋಷಿಸಿದ ವಾರಾಂತ್ಯದ ಲಾಕ್‍ಡೌನ್ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಬಡಜನರ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡುವಂತೆ ಕ್ರಮವಹಿಸಿದ ಸರಕಾರ ಬೀದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಬರೆ ಎಳೆದು,ಖಾಸಗಿ ಸಾರಿಗೆಯನ್ನು ನಿಷೇಧಿಸಿ ತನ್ನದೇ ಉದ್ಯಮವಾದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳನ್ನು ರಸ್ತೆಗಿಳಿಸಿ,ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಮಿತಿಗಿಂತ ಅಧಿಕ ಜನರನ್ನು ತುಂಬಿಕೊಂಡು ರಾಜಾರೋಷವಾಗಿ ಸಂಚರಿಸುತ್ತಿರುವುದು ಸಾರ್ವಜನಿಕರು ಸರ್ಕಾರವನ್ನು ಪ್ರಶ್ನಿಸುವಂತಾಗಿದೆ.
      ಪಟ್ಟಣದ ಮೂಲಕ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸುವ ಕೆ ಎಸ್‍ಆರ್‍ ಟಿ ಸಿ ಬಸ್ಸುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು, ಬಹುತೇಕ ಜನರು ಮಾಸ್ಕ ಧರಿಸದೆ ಹಾಗೂ ಸೂಕ್ತ ಸಾಮಾಜೀಕ ಅಂತರವನ್ನು ಕಾಯ್ದುಕೊಳ್ಳದೆ, ಬಸ್ಸಿನೊಳಗೆ ನೂಕುನುಗ್ಗಲಾಗುವಂತೆ ಕುಳಿತಿದ್ದು, ಕನಿಷ್ಠ ಪಕ್ಷ ಚಾಲಕ ಹಾಗೂ ನಿರ್ವಾಹಕರ್ಯಾರೂ ಕೂಡ ಮಾಸ್ಕ ಧರಿಸದಿರುವುದು ಸರಕಾರ ತನ್ನ ಮುಖಕ್ಕೆ ತಾನೇ ಮಸಿ ಬಳಿದು ಕೊಳ್ಳುವಂತಾಗಿದ್ದು, ಸಾರ್ವಜನಿಕರ ಉದ್ಯೋಗಕ್ಕೆ ಹಲವಾರು ಕಠಿಣ ಕ್ರಮಗಳನ್ನು ಸೂಚಿಸುವ ಸರಕಾರ ತನ್ನದೇ ಉದ್ಯಮಕ್ಕೆ ನಿರ್ಭಂಧವನ್ನು ವಿಧಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
    ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸಂದರ್ಶಿಸಲಾಗಿ ಸರಕಾರ ಸಾರ್ವಜನಿಕರ ಪ್ರಯಾಣವನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲಾಗಿ ಪ್ರಯಾಣಕ್ಕೆ ಅವಕಾಶ ನೀಡಿರುವುದು ದುರದೃಷ್ಠಕರ,ಖಾಸಗಿ ವಾಹನ ಸಂಚಾರವನ್ನು ನಿಷೇಧಿಸಿ ಕೇವಲ ಪ್ರತಿಷತ 20 ರಷ್ಟು ಕೆಎಸ್‍ಆರ್‍ ಟಿ ಸಿ ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದು ಇಂದು ಬಸ್ಸುಗಳಲ್ಲಿ ಈ ಮಟ್ಟದ ಜನದಟ್ಟನೆಯಾಗಲು ಮೂಲ ಕಾರಣವಾಗಿದ್ದು,ಅಡ್ಡ ಗೋಡೆಯ ಮೇಲೆ ದೀಪದಂತಿರುವ ಸರಕಾರದ ಆದೇಶವೇ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸದಿರುವ ಸರಕಾರದ ವಿರುದ್ಧ ಹಿಡಿ ಶಾಪ ಹಾಕಿದರು.
    ಇನ್ನೂ ಕಂಡರೂ ಕಾಣದಂತೆ ಮೂಖ ಪ್ರೇಕ್ಷಕರಂತೆ ಕುಳಿತಿದ್ದ ಬಸ್ ನಿಲ್ದಾನ ವ್ಯವಸ್ಥಾಪಕರು ಕನಿಷ್ಠ ಪಕ್ಷ ಚಾಲಕ ಹಾಗೂ ನಿರ್ವಾಹಕರಿಗೆ ಮಾಸ್ಕ ಧರಿಸುವಂತೆ ಹಾಗೂ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕುಳಿಸಿಕೊಳ್ಳದಂತೆ ನಿರ್ದೇಶಿಸದಿರುವುದು ಆಡಳಿತ ಯಂತ್ರ ಕುಂಭಕರ್ಣ ನಿದ್ದೆಯಲ್ಲಿರುವುದು ಸಾಬೀತಾದಂತಿದೆ.
ರಾಜಾರೋಷವಾಗಿ ರೋಡಿಗಿಳಿದ ವಾಹನಗಳು : ಲಾಕ್‍ಡೌನ್ ಲೆಕ್ಕಿಸದೆ ಯಾವುದೇ ಕೋವಿಡ್ ನಿಯಮಾವಳಿಗಳನ್ನು ಪಾಲಿಸದೇ ಸಾರ್ವಜನಿಕರು ರಾಜಾರೋಷವಾಗಿ ರಸ್ತೆಯ ಮೇಲೆ ಸಂಚರಿಸುತ್ತಿದ್ದು, ಬಾಗಿಲು ಮುಚ್ಚಿರುವ ಅಂಗಡಿ ಮುಂಗಟ್ಟುಗಳ ಕಟ್ಟೆಗಳ ಮೇಲೆ ಸೋಮಾರಿಗಳು ಹರಟೆಹೊಡೆಯುತ್ತಾ ಕುಳಿತಿರುವುದು ಸಾಮಾನ್ಯವಾಗಿತ್ತು.
ಅಳಲೊತ್ತುಕೊಂಡ ಬೀದಿ ವ್ಯಾಪಾರಿಗಳು: ಈ ಸಂಧರ್ಭದಲ್ಲಿ ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋರಿಕೊಂಡ ಬೀದಿ ವ್ಯಾಪಾರಿಗಳು ಸರಕಾರ ಬೀದಿ ವ್ಯಾಪರಕ್ಕೆ ಅನುಮತಿಸಿದ್ದರೂ ಸ್ಥಳೀಯ ಆಡಳಿತ ವಿನಾಕಾರಣ ಕಿರಿಕಿರಿ ನೀಡುತ್ತಿದ್ದು, ಅಧಿಕಾರಿಗಳ ಕಿರುಕುಳದಿಂದ ಬೆಳಿಗ್ಗೆಯಿಂದ ಮೂರ್ನಾಲ್ಕು ಸ್ಥಳಗಳನ್ನು ಬದಲಾಯಿಸಿದ್ದು,ಮೂಲೆಯಲ್ಲಿ ನಿಂತು ವ್ಯಾಪಾರ ಮಾಡುವಂತೆ ಹೇಳುತ್ತಿದ್ದು, ದಿನಾಲು ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರವನ್ನು ಅವಲಂಭಿಸಿರುವ ನಾವುಗಳು ವ್ಯಾಪಾರವಿಲ್ಲದೆ ಒಪ್ಪತ್ತಿನ ಊಟಕ್ಕಾಗಿ ಪರದಾಡುವಂತಾಗಿದೆಯಂದು ತಮ್ಮ ಅಳಲನ್ನು ತೋರಿಕೊಂಡರು.
    ಈ ನಿಟ್ಟಿನಲ್ಲಿ ಸರಕಾರ ಕೇವಲ ಆದೇಶಗಳನ್ನು ಮಾಡುವುದರ ಬದಲಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡದಂತೆ ಕಟ್ಟುನಿಟ್ಟಾಗಿ ಅನುಪಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕಧರಿಸಿ ಸೂಕ್ತ ಸಾಮಾಜೀಕ ಅಂತರವನ್ನು ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.