ತೇರದಾಳ : ಕೋವಿಡ್‍ದಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮ ಸರಕಾರ ಹಿಂದೆ ಬಿದ್ದಿಲ್ಲ. ರಸ್ತೆ, ಕೆರೆಗಳ ದುರಸ್ತಿಗಾಗಿ ಸರಕಾರ ಸಾಕಷ್ಟು ಅನುದಾನ ಮಂಜೂರ ಮಾಡುತ್ತಿದೆ. ಇನ್ನು ಹೆಚ್ಚಿನ ಅನುದಾನ ಮಂಜೂರ ಮಾಡಿಸಿ ರಸ್ತೆಗಳು ಹಾಗೂ ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ಪಟ್ಟಣವನ್ನು ಸುಂದರವಾಗಿ ಕಾಣುವಂತೆ ಮಾಡಲಾಗುವುದು. ಪ್ರಧಾನಿ ಮೋದಿ ಒಬ್ಬರಿಂದ ದೇಶ ಕಟ್ಟಲು ಸಾಧ್ಯವಿಲ್ಲ ಹಾಗೆ ಮುಖ್ಯಮಂತ್ರಿ ಒಬ್ಬರಿಂದ ರಾಜ್ಯ ಕಟ್ಟಲು ಸಾಧ್ಯವಿಲ್ಲ, ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದರೆ ಸ್ಥಳೀಯರ ಸಹಕಾರ ಅಗತ್ಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.

   ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹತ್ತಿರವಿರುವ ಪುರಸಭೆ ನೂತನ ಕಟ್ಟಡ ಉದ್ಘಾಟನಾ  ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದಲ್ಲಿ ಹೆಚ್ಚಾಗಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಜಾಗೆಯನ್ನು ಒತ್ತುವರಿ ಮಾಡಿ ಕಟ್ಟಡಗಳನ್ನು ಕಟ್ಟಲಾಗಿದೆ. ಮೊದಲು ಅರಣ್ಯ ಇಲಾಖೆಯಲ್ಲಿ ಜಿಪಿಎಸ್ ಸೌಲಭ್ಯ ಇದ್ದಿದ್ದಿಲ್ಲ. ಈಗ ಜಿಪಿಎಸ್ ಸೌಲಭ್ಯ ಆಗಿರುವುದರಿಂದ ಯಾರೇ ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಜಾಗೆಯಲ್ಲಿ ಕಟ್ಟಡ ಕಟ್ಟಿದರೆ ಪ್ರಿನ್ಸಿಪಾಲ ಸೆಕ್ರೇಟರಿಯವರಿಗೆ ಜಿಪಿಎಸ್ ಮೂಲಕ ತಿಳಿಯುವುದರಿಂದ ಅವರು ಸಂಬಂಧಿಸಿ ಅಧಿಕಾರಿಗಳಿಗೆ ನೋಟಿಸು ನೀಡಿ ಒತ್ತುವರಿ ಜಾಗೆಯನ್ನು ವಶಪಡಿಸಿಕೊಳ್ಳುವಂತೆ ಹೇಳುತ್ತಾರೆ. ನೂತನ ಪುರಸಭೆ ಸುತ್ತಮುತ್ತಲೂ ಇರುವ ಜಾಲಿಗಿಡಗಳನ್ನು ತೆರವುಗೊಳಿಸಿ ಒಳ್ಳೆಯ ಗಿಡಗಳನ್ನು ಬೆಳಸಿ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸಬೇಕು. ಆದರ್ಶ ನಗರವನ್ನಾಗಿ ಮಾಡಲು ನಮಗೆ ಎಲ್ಲರ ಸಹಕಾರ ಅಗತ್ಯ ಎಂದರು. 

  ಸಾನಿಧ್ಯ ವಹಿಸಿ ಮಾತನಾಡಿದ ತೇರದಾಳ ವಿರಕ್ತ ಮಠದ ಶಿವಕುಮಾರ ಶ್ರಿಗಳು ಬುದ್ಧ,ಬಸವ, ಅಲ್ಲಮ,ಯೇಸು, ಮಹಾವೀರ.  ಪೈಗಂಬರರು ಇವರು ಹುಟ್ಟಿದಾಗ ನಾವ್ಯಾರು ಇಲ್ಲ, ಆದರೂ ಅವರು ಹುಟ್ಟಿ ನಡೆದಾಡಿದ ಪುಣ್ಯ ನೆಲದಲ್ಲಿ ನಾವು ಉದಯವಾಗಿದ್ದು ನಮ್ಮ ಪುಣ್ಯ ಇಂತಹ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಸರಕಾರವು ಸಕಲ ಸೌಲಭ್ಯಗಳನ್ನು ನೀಡಬೇಕು ಎಂದರು. 

   ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ ಎಸ್.ಬಿ.ಇಂಗಳೆ, ಆಹಾರ ಇಲಾಖೆಯ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ರಬಕವಿ-ಬನಹಟ್ಟಿ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ಪುರಸಭೆ ಅಧ್ಯಕ್ಷ ಅನ್ನಪೂರ್ಣಾ ಹೊಸಮನಿ, ಉಪಾಧ್ಯಕ್ಷ ಶಾಂತವ್ವಾ ಕಾಲತಿಪ್ಪಿ, ಸ್ಥಾಯಿ ಸಮೀತಿ ಚೇರಮನ್ ಹಫೀಜ ಮೌಲಾಅಲಿ ಚತ್ತರಬಾನುಕೋಟೆ, ಸಿಪಿಐ ಜೆ.ಕರುಣೇಶಗೌಡ, ಪಿಎಸ್‍ಐ ರಾಜು ಬೀಳಗಿ ಸೇರಿದಂತೆ ಪುರಸಭೆ ಸರ್ವ ಸದಸ್ಯರು ಹಾಗೂ ಇನ್ನಿತರರು ಇದ್ದರು.

   ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ರಾಯಪ್ಪ ಕುಂಬಾರ ಪ್ರಾರ್ಥಿಸಿದರು. ಶ್ರೀಸಿದ್ಧೇಶ್ವರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ಉಪನ್ಯಾಸಕ ಸಿದ್ದು ಅಥಣಿ ನಿರೂಪಿಸಿದರು. ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸ್ವಾಗತಿಸಿದರು.