ತೇರದಾಳ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಗೆ ವಿದ್ಯುತ್ ತಂತಿ ತಗುಲಿ ಕಟಾವಿಗೆ ಕಾಯ್ದುನಿಂತಿದ್ದ 12 ಎಕರೆ ಕಬ್ಬಿನ ಬೆಳೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿರುವುದು,
ತೇರದಾಳ : ಹೊಲದಲ್ಲಿ ಹಾಯ್ದು ಹೋದ ವಿದ್ಯುತ್ ಕಂಬಗಳ ಸಡಿಲುಗೊಂಡ ತಂತಿಗಳ ಪರಸ್ಪರ ಹೋಯ್ದಾಟದಲ್ಲಿ ಕಿಡಿ ಸಿಡಿದು ಕಟಾವಿಗೆ ಕಾಯ್ದು ನಿಂತಿದ್ದ 12 ಎಕರೆ ಕಬ್ಬಿನ ಬೆಳೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ತೇರದಾಳ ಪಟ್ಟಣದ ಹೊರವಲಯದ ತೇರದಾಳ ತಮದಡ್ಡಿ ರಸ್ತೆಗೆ ಹೊಂದಿಕೊಂಡಿರುವ ಭರಮಪ್ಪ ಪ್ರತಾಪ ಸವದಿ, ಬಾಬು ಭೀಮಪ್ಪ ಸವದಿ ಹಾಗೂ ಮಹಾವೀರ ಅಪ್ಪಣ್ಣ ನಿಡಗುಂದಿ ಇವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಕಟಾವಿಗಾಗಿ ಕಾಯ್ದು ಕುಳಿತ ಕಬ್ಬು ಗದ್ದೆಯ ಮೂಲಕ ಹಾಯ್ದು ಹೋದ ವಿದ್ಯುತ್ ತಂತಿಗಳಿಗೆ ತಾಗಿ ಸುಟ್ಟು ಸಂಪೂರ್ಣವಾಗಿ ಕರಕಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಾದಂತಾಯಿತೆಂತು ಕಣ್ಣೀರಿಡುತ್ತಿರುವ ರೈತರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾಲದ ಸುಳಿಯಲ್ಲಿ ಸಿಲುಕಿ ಕಂಗಾಲಾಗಿರುವ ರೈತರ ಬದುಕಿಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ.
ಈ ಸಂಧರ್ಭದಲ್ಲಿ ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ರೈತ ಮಹಾವೀರ ನಿಡಗುಂದಿ ಈ ಘಟನೆಗೆ ವಿದ್ಯುತ್ ಇಲಾಖೆಯ ನಿರ್ಲಕ್ಷವೇ ಕಾರಣವಾಗಿದ್ದು, ಮೂರು ತಿಂಗಳ ಹಿಂದೆ ಟ್ರ್ಯಾಕ್ಟರ್ ಹಾಯ್ದು ಸಡಿಲುಗೊಂಡಿರುವ ತಂತಿಗಳನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದರು ಕೂಡ ಸ್ಪಂದಿಸದ ಅಧಿಕಾರಿಗಳು ಇಂದು ನಮ್ಮ ಬದುಕಿಗೆ ಆಸರೆಯಾಗಿದ್ದ ಬೆಳೆ ಸುಟ್ಟು ಸರ್ವನಾಶವಾಗಲು ಮೂಲ ಕಾರಣಿಕರ್ತರಾಗಿದ್ದು ನಾಶವಾದ ಬೆಳೆಗೆ ಸೂಕ್ತ ಪರಿಹಾರವನ್ನು ವಿದ್ಯುತ್ ಇಲಾಖೆಯವರೇ ಭರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಆಕ್ರೋಶ: ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ವಿದ್ಯುತ್ ಇಲಾಖೆಯ ದಿವ್ಯ ನಿರ್ಲಕ್ಷವೇ ಘಟನೆಗೆ ಕಾರಣವಾಗಿದ್ದು, ಹೊಲದಲ್ಲಿ ಹಾಯ್ದುಹೋದ ವಿದ್ಯುತ್ ಕಂಬದ ತಂತಿಗಳು ಬೆಳೆಗೆ ತಾಗಿರುವುದೇ ಈ ದುರಂತಕ್ಕೆ ಕಾರಣವಾಗಿದ್ದು, ಈ ಘಟನೆಯಿಂದ ಎಚ್ಚೆತ್ತುಕೊಂಡು ಇನ್ನೂಳಿದ ರೈತರ ಹೊಲದಲ್ಲಿ ನೆಲಕ್ಕಪ್ಪಳಿಸುವಷ್ಟು ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸಿ ನೊಂದ ರೈತನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

Social Plugin