ತೇರದಾಳ ಪಟ್ಟಣದಲ್ಲಿ ಪೊಲೀಸ್ ಠಾಣೆಯಿಂದ ಬಸ್ ನಿಲ್ದಾಣದವರೆಗೆ ಪ್ರಮುಖ ಮುಖ್ಯ ರಸ್ತೆಯ ಅಗಲೀಕರಣ ಕಾರ್ಯ.
ಆಮೆಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿ - ನಾಗರಿಕರ ಆಕ್ರೋಶ
ತೇರದಾಳ : ಪಟ್ಟಣದಲ್ಲಿ ಪೊಲೀಸ್ ಠಾಣೆಯಿಂದ ಬಸ್ ನಿಲ್ದಾಣದವರೆಗೆ ಪ್ರಮುಖ ಮುಖ್ಯ ರಸ್ತೆಯ ಅಗಲೀಕರಣ ಕಾರ್ಯ ಭರದಿಂದ ಸಾಗಿದೆ. ಅಂದು ಆರಂಭದಲ್ಲಿ ಕಾಮಗಾರಿ ಕೆಲಸ ತುಂಬಾ ವೇಗದಿಂದ ರಾತ್ರಿಯೂ ಸಹ ಬಿಡದೆ ನಡೆದಿರುವುದನ್ನು ಕಂಡು ಜನರು ಸಂತಸಗೊಂಡಿದ್ದರು.
ರಸ್ತೆ ಬದಿಯ ಹಲವಾರು ಜನ ತಮ್ಮ ಮನೆಗಳನ್ನು ಕಳೆದುಕೊಂಡರೂ ಸಹ ನಮ್ಮೂರಿನ ಅಭಿವೃದ್ಧಿಯಾಗುತ್ತದೆಯಲ್ಲ ಎಂಬ ಸದುದ್ಧೇಶದಿಂದ ಕಾಮಗಾರಿಗೆ ಯಾವುದೇ ರೀತಿಯ ಅಡತಡೆ ಮಾಡದೆ ಸಹಕಾರ ನೀಡಿದ್ದಾರೆ.
ಪ್ರತಿದಿನ ನೂರಾರು ವಾಹನಗಳು ಬಿಟ್ಟು ಬಿಡದೆ ಸಂಚರಿಸುತ್ತಿರುವ ಈ ರಸ್ತೆಯು ತೇರದಾಳದಿಂದ ಮಹಾರಾಷ್ಟ್ರ ರಾಜ್ಯ ಸಂಪರ್ಕ ಕಲ್ಪಿಸುವ ಮುಖ್ಯ ರಾಜ್ಯ ಹೆದ್ದಾರಿ ಎಂದೇ ಹೇಳಬಹುದು. ಹೀಗಾಗಿ ಸಾದ್ಯವಾದಷ್ಟು ಈ ಕಾರ್ಯ ಬೇಗನೆ ಮುಗಿಸುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ.
ಆದರೇ ಪ್ರಸ್ತುತ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಜನರ ನೀರಿಕ್ಷೆ ಹುಸಿಯಾಗಿದೆ ಎನ್ನಬಹುದು. ಇದರಿಂದ ಜನರು ರೋಷಿ ಹೋಗಿದ್ದಾರೆ. ಮೊದಲಿದ್ದ ದ್ವಿಪಥದ ಈ ರಸ್ತೆಯ ಒಂದು ಬದಿಯ ರಸ್ತೆಯನ್ನು ಅಗೆದು ಅಗಲೀಕರಣ ಕೆಲಸ ಪ್ರಾರಂಭ ಮಾಡಿದರು. ನಂತರ ಮೊದಲನೇ ಬದಿಯ ರಸ್ತೆ ಕೆಲಸ ಪೂರ್ಣಗೊಳಿಸದೆ ಎರಡನೇ ಬದಿಯ ರಸ್ತೆಯನ್ನೂ ಸಹ ಜೆ.ಸಿ.ಬಿ ಯಂತ್ರಗಳಿಂದ ಅಗೆದಿದ್ದಾರೆ. ಇದರಿಂದ ರಸ್ತೆ ತುಂಬ ತಗ್ಗು ದಿನ್ನೆಗಳು ಬಿದ್ದು ವಾಹನಗಳ ಸಂಚಾರಕ್ಕೆ ಹಾಗೂ ಪಾದಚಾರಿ ಸಾರ್ವಜನಿಕರಿಗೂ ತುಂಬಾ ತೊಂದರೆಯಾಗುತ್ತಲಿದೆ. ಸಾಕಷ್ಟು ತಗ್ಗುದಿನ್ನೆಗಳಿದ್ದ ಕಾರಣ ಚಿಕ್ಕಪುಟ್ಟ ಕಾರು, ದ್ವಿಚಕ್ರ ಮುಂತಾದ ವಾಹನಗಳು ಜಖಂ ಆಗುತ್ತಲಿವೆ. ಅಲ್ಲದೆ ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ಗುಂಡಿಯಲ್ಲಿ ನೀರು ನಿಂತು ಸಂಚಾರ ಮಾಡುವ ಪಾದಾಚಾರಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಇದೇ ಮುಖ್ಯ ರಸ್ತೆ ಹೊಂದಿಕೊಂಡಂತೆ ಪ್ರಮುಖವಾದ ಪದ್ಮಾ ಆಸ್ಪತ್ರೆ ಇದ್ದು ಈ ಆಸ್ಪತ್ರೆಗೂ ಸಹ ಹೋಗಲು ರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಯಾವುದಾದರೂ ಒಂದು ಬದಿಯ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಮತ್ತೊಂದು ಬದಿಯ ರಸ್ತೆ ಕೆಲಸ ಪ್ರಾರಂಭ ಮಾಡಿದ್ದರೇ ಇದ್ಯಾವ ಸಮಸ್ಯೆ ಬರುತ್ತಿರಲಿಲ್ಲ ಆದರೆ ಎರಡು ಬದಿಯ ರಸ್ತೆಗಳನ್ನು ಅಗೆದದ್ದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎಂದು ಇಲ್ಲಿಯ ಸಾರ್ವಜನಿಕರು ದೂರುತ್ತಿದ್ದಾರೆ. ಹೀಗಾಗಿ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪುರಸಭೆ ಮಾಜಿ ಸದಸ್ಯ ರಾಜೇಸಾಬ ನಗಾರ್ಜಿ, ಮುನ್ನಾ ತಾಂಬೋಳಿ, ಪರಸಪ್ಪ ಮಾಸ್ತಿ, ಇರ್ಷಾದ ನದಾಫ್, ಪ್ರಕಾಶ ಖವಾಸಿ ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.

Social Plugin