ತೇರದಾಳ : ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟರಾಗಿ, ಹಾಸ್ಯ ಕಲಾವಿದರಾಗಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಚಿತ್ರನಟ ಶಿವರಾಂ ಅವರ ಅಗಲಿಕೆಗೆ ತೇರದಾಳದ ಕಲಾ ಬಳಗ, ಸಾಹಿತ್ಯ ಬಳಗ, ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
1984ರ ಸೆಪ್ಟಂಬರ್ 15ರಂದು ನಟ ಶಿವರಾಂ ಅವರನ್ನು ತೇರದಾಳ ಜೇಸಿಸ್ ಸಂಸ್ಥೆಯವರು ಕರೆಸಿದ್ದರು. ಆಗ ಚಲನಚಿತ್ರಗೀತೆ ಸ್ಪರ್ಧೆಯಲ್ಲಿ ನನಗೂ ಕೂಡಾ ಬಹುಮಾನ ಬಂದಿತ್ತು. ಆ ಬಹುಮಾನವನ್ನು ನಟ ಶಿವರಾಂ ಅವರಿಂದ ಪಡೆದುಕೊಂಡಿದ್ದೆ ಎಂದು ಶಿಕ್ಷಕ-ಸಾಹಿತಿ ಮ.ಕೃ.ಮೇಗಾಡಿ ನೆನಪಿಸಿಕೊಂಡಿದ್ದಾರೆ.
ಆಗ 6ನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯ ಹಿರಿಯ ಶಿಕ್ಷಕರಾಗಿದ್ದ ಚೌಗಲಾ ಸರ್ ಅವರು ಮೇಗಾಡಿ ನೀ ಚೆನ್ನಾಗಿ ಹಾಡ್ತಿಯಾ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಪ್ರೇರೆಪಿಸಿದ್ದರು. ಆಗ ನಾನು ಸ್ಪರ್ಧೆಯಲ್ಲಿ ಹಾಡಿ ಬಹುಮಾನ ಪಡೆಯಲು ಉತ್ಸುಕನಾಗಿದ್ದೆ. ಅಂದು ಸಿದ್ಧೇಶ್ವರ ದೇವಸ್ಥಾನದ ಆವರಣದ ಎಸ್.ಪಿ.ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದ ವೇದಿಕೆಗೆ ನಟ ಶಿವರಾಂ ಬಂದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವಾಗ ನನ್ನ ಹೆಸರು ಹೇಳಿದಾಗ, ವೇದಿಕೆಗೆ ಹೋದಾಗ ನೀನು ಗೆದ್ದೆಯಾ? ಶಹಬ್ಬಾಷ್ ಎಂದು ಪೆನ್ನು ಮತ್ತು ಪ್ರಶಸ್ತಿಪತ್ರ ನೀಡಿದರು.
ನಂತರ ಅತಿಥಿಪರ ಅವರು ಮಾತನಾಡಲು ಶುರು ಮಾಡಿದಾಗ ಅಂದು ಭಾರಿ ಬಿಸಿಲು, ಆ ಬಿಸಿಲಿಗೆ ಜಪ್ ಎನ್ನದೆ ಜನ ಶಿವರಾಂ ಅವರನ್ನು ಕಾಣಲು ಜನಸಾಗರ ನೆರೆದಿತ್ತು. ವೀಕ್ಷಣೆ ಮಾಡುತಿದ್ದ ಜನರನ್ನು ನೋಡಿ, ನೀವು ಇದೀರಿ ಸರಿ. ಇಂತಹ ಬಿಸಿಲಿನಲ್ಲಿ ನಾನೇನಾದರೂ ವೇದಿಕೆ ಮುಂಭಾಗ ಕುಳಿತಿದ್ದರೆ ನನ್ನ ತಲೆ ಚಟ್ ಅಂತಾ ಸಿಡಿಯೋದು ಎಂದು ನಗೆಚಟಾಕಿ ಹಾರಿಸಿದ್ದರು. ಸಮಯದ ಗೊಂಬೆ ಚಿತ್ರೀಕರಣದಲ್ಲಿ ನನಗೂ ಒಂದು ಪಾತ್ರವಿದೆ. ಅದರ ಶೂಟಿಂಗ್ ಮುಗಿಸಿ ಬಂದಿದ್ದೇನೆ ಎಂದು ಆ ದೃಶ್ಯವನ್ನು ವರ್ಣಿಸಿದ್ದರು.
ನಂತರ ಅವರನ್ನು ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾಗಿ ತೇರದಾಳಕ್ಕೆ ಆಗಮಿಸಿದ್ದ ಬಗ್ಗೆ ನಟ ಶಿವರಾಂ ಅವರಿಗೆ ತಿಳಿಸಿದೆ.
ಈಗ ಖ್ಯಾತ ನಟ ಶಿವರಾಂ ಅವರು ನೆನಪು ಮಾತ್ರ.

Social Plugin