ದಿನನಿತ್ಯ ಬಸ್ಸಿಗಾಗಿ ಕಾಯುತ್ತಿರುವ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು
ಹಳ್ಳಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುಳ್ಳಾದ ಸಾರಿಗೆ ಇಲಾಖೆ ಅಧಿಕಾರಿಗಳು
ಮುಗಳಖೋಡ: ಕರೋನ ಎಂಬ ಮಹಾಮಾರಿ ರೋಗದಿಂದ ವರ್ಷವಿಡಿ ಶಾಲೆಯ ಮುಖ ನೋಡದ ವಿದ್ಯಾರ್ಥಿಗಳು ಶಿಕ್ಷಣದ ಹಂಬಲದಿಂದ ಇದೀಗ ಶಾಲೆಯತ್ತ ಮುಖಮಾಡಿದ್ದಾರೆ. ಆದರೆ ಶಿಕ್ಷಣ ಪಡೆಯಬೇಕೆಂಬ ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ ನೀಡದೇ ಅವರನ್ನು ಸಾರಿಗೆ ಇಲಾಖೆಯವರು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ರಾಯಬಾಗ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಅಂದರೆ ಖಣದಾಳ, ಇಟನಾಳ, ಸವಸುದ್ದಿ, ಹಿಡಕಲ್ ಹಾಗೂ ಸುತ್ತಮುತ್ತಲಿನ ಇನ್ನಿತರ ಹಳ್ಳಿಗಳಿಂದ ಇದೇ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ ಹಾರೂಗೇರಿ ಪಟ್ಟಣಕ್ಕೆ ಶಿಕ್ಷಣ ಪಡೆಯಲು ರಾಯಬಾಗ, ಕಂಕಣವಾಡಿ, ಇಟನಾಳ, ಖಣದಾಳ, ಹಿಡಕಲ್, ಹಾರೂಗೇರಿ ಈ ಮಾರ್ಗವಾಗಿ ಸುಮಾರು 8 ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣಕೆಂದು ಹಾರೂಗೇರಿಗೆ ತೆರಳುತ್ತಾರೆ. ಆದರೆ ಈ ಮಾರ್ಗವಾಗಿ ಚಲಿಸುವ ಬಸ್ಸುಗಳನ್ನು ಶಾಲಾ ಸಮಯಕ್ಕೆ ಸರಿಯಾಗಿ ಓಡಿಸದ ಕಾರಣ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಶಿಕ್ಷಣವೇ ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಈ ಗ್ರಾಮಗಳ ಬಡವಿದ್ಯಾರ್ಥಿಗಳು ಬಸ್ಸಿಗಾಗಿ ದಾರಿಯ ಮಧ್ಯೆ ಕಾದು ಕಾದು ಶಿಕ್ಷಣವಿಲ್ಲದೆ ಮರಳಿ ಮನೆಗೆ ತೆರಳುವ ಪರಿಸ್ಥಿತಿ ಬಂದಿದೆ. ಒಂದು ದಿನ ಬಸ್ಸ ಬಂದು ಶಾಲೆಗೆ ತೆರಳಿದರೆ ಮರಳಿ ಬರುವಾಗ ಬಸ್ಸಿನ ಸೌಕರ್ಯವಿಲ್ಲದೆ ರಾತ್ರಿ 7-8 ಗಂಟೆಗೆ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದರು. ಈ ಗ್ರಾಮದ ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯವಿಲ್ಲದ ಕಾರಣ 50ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಿಕ್ಕ ಸಿಕ್ಕ ಮೋಟಾರುಗಳಿಗೆ ಜೋತುಬಿದ್ದು ಹಾಗೂ ಅಪರಿಚಿತರ ಗಾಡಿಗಳ ಮೇಲೆ ಶಾಲೆಗೆ ಚಲಿಸುವ ಪ್ರಸಂಗ ಎದುರಾಗಿದೆ. ಇನ್ನಾದರು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರಿಗೆ ಸಚಿವರು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಹೇಳದೆ, ತಮ್ಮ ಹೆಸರನ್ನೂ ಹೇಳಿಕೊಳ್ಳದೆ ಫೋನಕಾಲ್ ಕಟ್ ಮಾಡಿದ ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಪಕ.
ಪ್ರತಿದಿನ ಬೆಳಿಗ್ಗೆ ಬಂದ ಬಸ್ಸು ಸಾಯಂಕಾಲ ಮರಳುವದಿಲ್ಲ, ಸಾಯಂಕಾಲ ಬರುವ ಬಸ್ಸು 2-3 ದಿನಗಳವರೆಗೆ ಬರುವದಿಲ್ಲ, ದಿನಂಪ್ರತಿ ತಾಲೂಕಿನ ಒಂದಲ್ಲ ಒಂದು ಗ್ರಾಮದ ಜನರು ಸಾರಿಗೆ ಇಲಾಖೆಯವರಿಗೆ ಕರೆಮಾಡಿ ಕೇಳಿದರೆ ಚಾಲಕರಿಲ್ಲ, ಬಸ್ಸುಗಳಿಲ್ಲ ಎಂಬ ಹಲವಾರು ನೆಪ ಹೇಳಿ ತಪ್ಪಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಪಾಲಿನ ಶತ್ರುಗಳಾಗಿದ್ದಾರೆ. ಇನ್ನಾದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಬಸ್ಸ ತಡೆದು ಪ್ರತಿಭಟನೆ ಮಾಡುತ್ತೆವೆ.
ರಾಮಕೃಷ್ಣ ವಸಂತ ದಳವಾಯಿ ಅಧ್ಯಕ್ಷರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹೋರಾಟ ಸಮಿತಿ ಖಣದಾಳ.
ದಿನನಿತ್ಯ ಬಸ್ಸು ಬರುತ್ತದೆ. ಟಾಯರ್ ಪಂಚ್ಚರ ಆಗಿದ್ದರೆ ಅಥವಾ ಚಾಲಕರು ಇಲ್ಲದಿದ್ದರೆ ಬಸ್ಸು ತೆರಳಲು ಆಗುವದಿಲ್ಲ ಆ ಸಂದರ್ಭದಲ್ಲಿ ನಾವು ಏನೂ ಮಾಡಲಿಕ್ಕಾಗುವದಿಲ್ಲ ಇನ್ನೂ ಮುಂದೆ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ.
ಘಟಕದ ವ್ಯವಸ್ಥಾಪಕರು ರಾಯಬಾಗ ಘಟಕ.

Social Plugin