ತೇರದಾಳದ ಶ್ರೀಅಲ್ಲಮಪ್ರಭು ದೇವಸ್ಥಾನಕ್ಕೆ ಜಾನಪದ ಗಾರುಡಿಗ ಗುರುರಾಜ ಹೊಸಕೋಟಿ ಭೇಟಿ ನೀಡಿದಾಗ ದೇವಸ್ಥಾನದ ಅರ್ಚಕರು ಸತ್ಕರಿಸಿದರು.

ತೇರದಾಳ : 12ಶತಮಾನದ ಶಿವಶರಣರ ವಚನಗಳು ಸಾಮಾನ್ಯರು ಸಹ ಅರ್ಥೈಸಿಕೊಳ್ಳುವಂತ ವಚನಗಳನ್ನು ರಚಿಸಿ ಜನಮಾನಸದಲ್ಲಿ ದೇವರಾಗಿ ಉಳಿದವರು. ಹಾಗಯೇ ಜನಪದ ಸಾಹಿತ್ಯವು ಕೂಡಾ ಬಹಳ ಸರಳವಾಗಿ ಅನಕ್ಷರಸ್ಥರ ಮನಸಲ್ಲಿಯೂ ಉಳಿಯುವ ಹಾಗೆ ಜನರೂಢಿಯಾಗಿ ಮೂಡಿ ಬಂದು ಅದರದ್ದೆ ಆದ ಛಾಪು ಮೂಡಿಸಿರುವುದು ವಿಶೇಷ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಹಿರಿಯ ಸಾಹಿತಿ ಗುರುರಾಜ ಹೊಸಕೋಟೆ ಹೇಳಿದರು.
  ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನಕ್ಕೆ ವಿಶೇಷವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀಅಲ್ಲಮಪ್ರಭುದೇವರ ಕುರಿತು ಚಲನಚಿತ್ರ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಇಂದಿನ ಸಮಾಜಕ್ಕೆ ಈ ತರಹದ ಚಲನಚಿತ್ರಗಳು ಮೂಡಿ ಬರುವುದು ಅತಿ ಅವಶ್ಯ. ಕಾರಣ ಇಂದಿನ ಯುವ ಪೀಳಿಗೆ ರಕ್ತಪಾತ ಹಾಗೂ ದುಶ್ಚಟಗಳ ಕುರಿತು ಸಿನೇಮಾ ನೋಡಿ ಏನು ಕಲಿಯಬೇಕು? ಹಿಂದೆ ಡಾ.ರಾಜಕುಮಾರ ಅವರ ಅಭಿನಯದ ಇಮ್ಮಡಿ ಪುಲಕೇಶಿಯಿಂದ ಇಲ್ಲಿಯವರೆಗೆ ದರ್ಶನ ಅಭಿನಯದ ಸಂಗೋಳ್ಳಿ ರಾಯಣ್ಣ ಅಂತಹ ಸಿನೇಮಾಗಳು ಮೂಡಿ ಬಂದರೆ ಸಮಾಜಕ್ಕೆ ಹಾಗೂ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಅಪರಾಧದ ವೈಭವಿಕರಣದ ಚಿತ್ರಗಳು ಮೂಡಿ ಬರುವುದನ್ನು ನೋಡಿ ಸಮಾಜವನ್ನು ನಾವೇ ಹಾಳು ಮಾಡಿದಂತಾಗುತ್ತದೆ. ಇಂದಿನ ಈ ಸಮಯದ ಪರಿಸ್ಥಿತಿಯಲ್ಲಿ ಶ್ರೀಅಲ್ಲಮಪ್ರಭು ಚಲನ ಚಿತ್ರ ಮೂಡಿ ಬರುತ್ತಿರುವುದು ಅತಿ ಸೂಕ್ತವಾಗಿದೆ. ಕಾರಣ ಅಲ್ಲಮರ ಚರಿತ್ರೆ ಸಾಹಿತ್ಯಕವಾಗಿ ಸಂಪನ್ನಭರಿತವಾಗಿರುವುದಷ್ಟೇ ಅಲ್ಲದೇ ಮನುಷ್ಯ ಜೀವನಕ್ಕೆ ಅನುಭವದ ಸಂದೇಶ ನೀಡುವಂತಹ ಚರಿತ್ರೆಯಾಗಿದೆ. ಇಂತಹ ಸಿನೇಮಾ ತಂಡದಲ್ಲಿ ನನ್ನ ಸಾಹಿತ್ಯದ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಶ್ರೀಅಲ್ಲಮಪ್ರಭು ದೇವರ ಕ್ಷೇತ್ರದಲ್ಲಿಯೇ ಹುಟ್ಟಿ ಬೆಳೆದ ನನಗೆ ಈ ಚಲನಚಿತ್ರಕ್ಕೆ ಸಾಹಿತ್ಯವದಗಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದರು. ಸಾಯಂಕಾಲ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಅವರೇ ರಚಿಸಿದ ಒಂದು ವಿಶೇಷ ಭಾವಗೀತೆಯನ್ನು ಹಾಡಿದರು.
    ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಚಲನಚಿತ್ರ ನಿರ್ಮಾಪಕರು ಶಾಲು ಹೊದಿಸಿ ಸತ್ಕರಿಸಿದರು. ನಿಂಗಯ್ಯ ಭಾವಿ, ರಾಜು ಭಾವಿ, ಆನಂದ ಹಿತ್ತಲಮನಿ, ಶ್ರೀಅಲ್ಲಮಪ್ರಭು ಚಲನಚಿತ್ರ ನಿರ್ಮಾಕರಾದ ಮಹಾವೀರ ಪ್ರಭುಗಳು ಹಾಗೂ ಮಾಧವಾನಂದ ಶೇಗುಣಶಿ, ಪ್ರಕಾಶ ಕಾಲತಿಪ್ಪಿ, ಎಮ್.ಸಿ.ಕುಂಚಗನೂರ, ಪರಯ್ಯ.ಮ.ತೆಳಗಿನಮನಿ ಸೇರಿದಂತೆ ಇನ್ನಿತರರು ಇದ್ದರು.