ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ಭಗ್ನಗೊಳಿಸಿದ ಘಟನೆ ಖಂಡಿಸಿ ಕರುನಾಡು ವಿಜಯಸೇನೆ ಹಾಗೂ ತೇರದಾಳ ತಾಲೂಕಾ ಹೋರಾಟ ಸಮಿತಿ ನೇತೃತ್ವದಲ್ಲಿ ಉಪತಹಶೀಲ್ದಾರ ಎಸ್.ಬಿ ಮಾಯನ್ನವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಿಗರ ರಕ್ಷಣೆಗೆ ಆಗ್ರಹ : ಉದ್ಭವ ಠಾಕ್ರೆ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು
ತೇರದಾಳ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿದ ಪ್ರಸಂಗ ಇಡಿ ರಾಜ್ಯವ್ಯಾಪಿ ಕನ್ನಡಾಭಿಮಾನಿಗಳು ಎಮ್‍ಇಎಸ್ ಹಾಗೂ ಶಿವಸೇನೆ ವಿರುದ್ಧ ಭುಗಿಲೇಳುವಂತೆ ಮಾಡಿದ್ದು, ಈ ನಿಟ್ಟಿನಲ್ಲಿ ಸಮಾಜದ ಶಾಂತಿಯನ್ನು ಕದಡುತ್ತಿರುವ ಇಂತಹ ಸಂಘಟನೆಗಳನ್ನು ರದ್ದು ಮಾಡಿ, ಕೃತ್ಯಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದ ಕರುನಾಡು ವಿಜಯಸೇನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು ಉಪತಹಶೀಲ್ದಾರ ಎಸ್.ಬಿ ಮಾಯನ್ನವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನಾಕಾರರು, ದಾರಿಯ ಉದ್ದಗಲಕ್ಕೂ ಎಮ್‍ಇಎಸ್ ವಿರುದ್ಧ ಘೋಷನೆಗಳನ್ನು ಕೂಗಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ ಠಾಕ್ರೆಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಕರುನಾಡು ವಿಜಯಸೇನೆಯ ಜಿಲ್ಲಾ ಸಂಚಾಲಕ ಮಂಜುನಾಥ ಜಮಖಂಡಿ ಹಿರೇಮಠ ಹಾಗೂ ಮುಖಂಡರಾದ ಪ್ರವೀಣ ನಾಡಗೌಡ ನಮ್ಮ ನಾಡಿನ ಜಲ ನೆಲವನ್ನು ಅನುಭವಿಸುತ್ತಿರುವ ಮರಾಠಿಗರು ನಾಡದ್ರೋಹಗೈಯುತ್ತಿರುವುದು ಖಂಡನೀಯ, ದೇಶದ ಸ್ವತಂತ್ರಕ್ಕಾಗಿ ಮಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ-ಬಲಿದಾನ ಸ್ಮರಣೀಯ, ಇಂತಹ ಮಹಾನುಭಾವರ ಮೂರ್ತಿಯನ್ನು ಭಗ್ನಗೊಳಿಸಿ ವಿಕೃತಿಯನ್ನು ಮೆರೆದ ಇವರು ನಿಜವಾದ ಭಯೋತ್ಪಾದಕರು, ಇಂತಹ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಂಡು ನಮ್ಮ ರಾಜ್ಯದಿಂದ ಗಡಿಪಾರು ಮಾಡಿ ಎಮ್‍ಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
ತೇರದಾಳ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಭುಜಬಲ್ಲಿ ಕೆಂಗಾಲಿ ಮಾತನಾಡಿ ಭಾಷೆಯ ಆಧಾರದ ಮೇಲೆ ಹಿಂಸಾಚಾರ ಖಂಡನೀಯ, ಭಾಷೆ ಬೇರೆ-ಬೇರೆಯಾದರು ನೆಲವೊಂದೇ ಭಾರತ ಈ ನಿಟ್ಟಿನಲ್ಲಿ ವಿನಾಕಾರಣ ಸಾಮಾಜಿಕ ಶಾಂತಿಯನ್ನು ಕದಡುತ್ತಿರುವ ಮರಾಠಿಗರ ಉದ್ಧಟತನ ನಾಚಿಕೆಗೇಡಿ ಸಂಗತಿ, ನಮ್ಮ ಕನ್ನಡ ನೆಲದ ರಕ್ಷಣೆಗಾಗಿ ಪ್ರಾಣಕೊಡಲು ಸದಾ ಸಿದ್ಧವೆಂದು ವಾಗ್ದಾನ ನೀಡಿದರು.
ಪ್ರತಿಭಟನೆಯಲ್ಲಿ ರಾಮಣ್ಣ ಹಿಡಕಲ್ಲ, ಕರುನಾಡ ವಿಜಯಸೇನೆಯ ರಾಜ್ಯ ಕಾರ್ಯದರ್ಶಿ ಹಾಗೂ ಬಾಗಲಕೋಟ ಉಸ್ತವಾರಿ ಮಂಜುನಾಥ ಜಮಖಂಡಿ ಹಿರೇಮಠ, ಹಣಮಂತ ರೋಡನ್ನವರ, ಪ್ರಭು ಭಾಗಿ, ಸಂತೋಷ ಜಮಖಂಡಿ, ಪ್ರಕಾಶ ಹೊಸಮನಿ, ಯಾಸೀನ ಸಾತಬಚ್ಚೆ, ಪ್ರಸನ್ನ್ ಪಂಚಾಕ್ಷರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರು, ಪಟ್ಟಣದ ಪ್ರಮುಖರು, ಶಾಲಾ ವಿದ್ಯಾರ್ಥಿಗಳು ಹಾಗೂ ಪಟ್ಟಣದ ಇನ್ನಿತರರು ಇದ್ದರು.

Social Plugin