ಅಹಿಂಸೆ ಮತ್ತು ನಿಗ್ರಹ ಪ್ರಧಾನಾಂಶಗಳಿಂದ ಜಿನಧರ್ಮ ಅಚಲ : ಸಂಸದ ಗದ್ದಿಗೌಡರ.
ತೇರದಾಳ : ಭಾರತದ ಪ್ರಾಚೀನ ಧರ್ಮಗಳಲ್ಲೊಂದಾದ ಜೈನಧರ್ಮವು ತನ್ನ ಅಹಿಂಸೆ ಮತ್ತು ನಿಗ್ರಹ ಗುಣಗಳಿಂದಾಗಿ ಇಂದಿಗೂ ಮಹತ್ತರ ಸಂದೇಶಗಳನ್ನು ನೀಡುತ್ತಿದೆ. ಧರ್ಮೀಯರು ಸಾಮರಸ್ಯದ ಬದುಕು ಸಾಗಿಸುವ ಮೂಲಕ ದೇಶದ ಪ್ರತಿಯೊಂದ ಕ್ಷೇತ್ರಗಳಲ್ಲಿಯೂ ಗುರುತರ ಸೇವೆ ಸಲ್ಲಿಸುತ್ತಿದ್ದಾರೆಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ನುಡಿದರು. ಧಾರ್ಮಿಕ ಮುಖಂಡರು, ಸಂತರು, ಮಹಾಂತರು ನೀಡುವ ಮಹತ್ತರ ಸಂದೇಶಗಳು ನಮ್ಮ ಬದುಕನ್ನು ಹಸನಾಗಿಸುತ್ತವೆ. ಧಾರ್ಮಿಕ ಆಚರಣೆಗಳು ನಮ್ಮ ಬದುಕಿಗೆ ಕ್ರಮತೆಯನ್ನು ಮತ್ತು ಬದ್ಧತೆಯನ್ನು ತಂದಿಡುತ್ತವೆ.  
ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ಜರುಗಿದ ಶ್ರೀ 1008 ಭ.ನೇಮಿನಾಥ ತೀರ್ಥಂಕರ ರತ್ನಮಯ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ತಥಾ ಜೀರ್ಣೋದ್ಧಾರಗೊಂಡ ಶಿಖರದಲ್ಲಿ ಶ್ರೀ 1008 ಭ ಅನಂತನಾಥ ತೀರ್ಥಂಕರರ ಜಿನಬಿಂಬ ವೇದಿಪ್ರತಿಷ್ಠಾ ಮಹಾಮಹೋತ್ಸವ ಮೂರನೇ ದಿನದ ಸಮಾರಂಭದ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಧಾರ್ಮಿಕ ಆಚರಣೆಗಳಿಂದ ಅಸಮಾನತೆ ದೂರಾಗಿ ನಾವೆಲ್ಲರೂ ಒಂದೆಂಬ ಐಕ್ಯತೆಯ ಭಾವ ಮೂಡುತ್ತದೆ. ಸರ್ವರೂ ಸಂಘಟಿತರಾಗುವ ಮೂಲಕ ಸರ್ವರ ಪ್ರಗತಿಯಾಗುತ್ತದೆ. ವೇದಿಕೆಯಲ್ಲಿ ಉಪಸ್ಥಿತ ಮುನಿ ಮಹಾರಾಜರ ಆಶೀರ್ವಚನಗಳಿಂದ ನಮ್ಮೆಲ್ಲರ ಅಂಧಕಾರ ದೂರಾಗಿ ಜ್ಞಾನದ ಜೀವನ ನಮ್ಮದಾಗುತ್ತದೆ ಎಂದರು.
ಕರ್ನಾಟಕ ರಾಜ್ಯದ ಸಚಿವರಾದ ಗೋವಿಂದ ಕಾರಜೋಳ ಇದೇ ಸಂದರ್ಭದಲ್ಲಿ ಮಾತನಾಡಿ ಎಲ್ಲ ಸಂತರ, ಮಹಂತರ ಅನುಭಾವಿಕ ನುಡಿಗಳು ಸಾಮಾಜಿಕ ಚೌಕಟ್ಟಿನಡಿಯಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕುವಂತೆ ಮತ್ತು ನಮ್ಮ ಬದುಕಿಗೆ ಸುಂದರತೆಯ ಅನುಭಾವಿಕ ಲೇಪನ ನೀಡಿ ಮುಕ್ತಿ ಮಾರ್ಗದತ್ತ ಸಾಗಲು ನೆರವಾಗಿವೆ. ಅಹಿಂಸೆ ಮತ್ತು ಅಪರಿಗ್ರಹ ತತ್ವಗಳು ಇಂದಿಗೂ ವಿಶ್ವದಲ್ಲಿ ಮನ್ನಣೆ ಹೊಂದಲು ಜಿನಧರ್ಮದ ಕೊಡುಗೆ ಬಹುಮುಖ್ಯವಾಗಿದೆ ಎಂದರು.
2ನೇ ಶತಮಾನದಲ್ಲಿ ಸ್ಥಾಪಿತ ಅತ್ಯಂತ ಪ್ರಾಚೀನ ಮಠಗಳಲ್ಲೊಂದ ತೇರದಾಳದ ಶ್ರೀ 1008 ನೇಮಿನಾಥ ಗೋಂಕ ಜಿನಾಲಯವು ಅತಿಶಯ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಸುತ್ತಲಿನ ಜಿನ ಬಾಂಧವರು ಸುಕ್ಷೇತ್ರದ ಪಾವಿತ್ರ್ಯವನ್ನು ಹೆಚ್ಚಿಸುವತ್ತ ಇಂಥ ಹೊಣೆಯುಳ್ಳ ಕಾರ್ಯಕ್ರಮ ಹಮ್ಮಿಕೊಂಡಿರುವುದ ಸ್ತುತ್ಯಾರ್ಹ ಎಂದರು. ಸಕಲ ಜೀವ ಸಂಕುಲನದ ಕಲ್ಯಾಣ ಬಯಸುವುದು ಮತ್ತು ದೈನಂದಿನ ಜೀವನದಲ್ಲಿ ಆಚರಿಸುವುದು ಜಿನ ಧರ್ಮೀಯರ ಆದ್ಯ ಕರ್ತವ್ಯವಾಗಿದ್ದು, ನಾವು ಶೃದ್ಧಾ ಭಕ್ತಿಗಳಿಂದ ಧರ್ಮವನ್ನು ಆಚರಿಸಬೇಕೆಂದು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ಮುಂಜಾನೆ ಮಂಗಲಕುಂಭ ತರುವುದು, ಅಭಿಷೇಕ, ಶಾಂತಿ ಮಂತ್ರ, ದೀಕ್ಷಾ ಕಲ್ಯಾಣ ವಿಧಾನ, ಯಕ್ಷನೃತ್ಯ, 56 ದೇಶಗಳ ಮಹಾರಾಜರ ಮೆರವಣಿಗೆ, ಮಧ್ಯಾನ್ಹ ಮುನಿಗಳ ಆಗಮನ, ಪ್ರವಚನ, ವ್ಯಾಖ್ಯಾನ, ಸವಾಲ ರಾಜಾಭಿಷೇಕ, ಕಪ್ಪಕಾಣಿಕೆ ಅರ್ಪಣೆ, ಕಿಮಿಟಿಕ್ ದಾನ, ನಿಲಾಂಜನ ನೃತ್ಯ, ವೈರಾಗ್ಯ ಭಾವನೆ, ಲೌಕಾಂತಿಕ ದೇವರ ಆಗಮನ, ವೈರಾಗ್ಯ ಸ್ತುತಿ, ವೈರಾಗ್ಯ ಧಾರಣ ಮಾಡಿ ದೀಕ್ಷಾ ಕಲ್ಯಾಣ ಮಹೋತ್ಸವ ಮತ್ತು ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು, ಭಾಷ್ಯ ಆರತಿ ಜರುಗಿದವು.
ವೇದಿಕೆಯಲ್ಲಿ ಡಿ.ಆರ್.ಪಾಟೀಲ, ಪ್ರವೀಣ ನಾಡಗೌಡ, ಮಹಾವೀರ ಕೊಕಟನೂರ, ಅಶೋಕ ಆಲಗೊಂಡ, ಡಾ.ಜೆ.ಬಿ.ಆಲಗೂರ, ಡಾ.ಶೀತಲ ಸದಲಗಿ, ಡಾ.ಸಿದ್ದು ಹುಲ್ಲೊಳ್ಳಿ,ಸಿದ್ದು ಆಲಗೂರ, ಅಜಿತ ಮುರಗುಂಡಿ, ವಿಜಯ ಕುಚನೂರ, ಬಾಹುಬಲಿ ಹುಲ್ಲೊಳ್ಳಿ, ಆರ್.ಕೆ.ಪಾಟೀಲ, ಬಿ.ಎಸ್.ಲೋಕಾಪುರ, ಅಶೋಕ ಸದಲಗಿ, ಅರುಣ ಮುರಗುಂಡಿ, ಮಹಾದೇವ ಶಿರಹಟ್ಟಿ, ಜಿ.ಕರುಣೇಶಗೌಡ, ರಾಜು ಬೀಳಗಿ, ಅಶೋಕ ಗುಡಿಮನಿ, ಡಾ.ಸುದರ್ಶನ ನಿಡೊಣಿ, ಶಾಂತಿನಾಥ ಕೋರಿಗೇರಿ, ಸದಾಶಿವ ಹೊಸಮನಿ, ಅಲ್ಲಪ್ಪ ಬಾಬಗೊಂಡ ಮುಂತಾದವರಿದ್ದರು. 
ತೇರದಾಳ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಗೋವಿಂದ ಕಾರಜೋಳ.