ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಶಾಸಕ ಸಿದ್ದು ಸವದಿ.
ರಕ್ಷಿತ ಧರ್ಮವು ನಮ್ಮನ್ನು ಖಂಡಿತ ರಕ್ಷಿಸುತ್ತದೆ : ಶಾಸಕ ಸಿದ್ದು ಸವದಿ.
ತೇರದಾಳ : ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ರಕ್ಷಿತ ಧರ್ಮವು ಖಂಡಿತ ರಕ್ಷಿಸುತ್ತದೆ. ಬದುಕಿನ ಆಚಾರ-ವಿಚಾರಗಳನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ರೂಪಿಸಿ ಸಾಮಾಜಿಕ ಸನ್ನಡತೆಯ ಬದುಕು ರೂಪಿಸುವ ಮಹತ್ತರ ಕಾರ್ಯವನ್ನು ಧರ್ಮ ಮಾಡುತ್ತದೆ. ಧಾರ್ಮಿಕ ಮುಖಂಡರು, ಸಂತರು, ಮಹಾಂತರು ನೀಡುವ ನಿಖರ ಸಂದೇಶಗಳು ನಮ್ಮ ಬದುಕನ್ನು ಹಸನಾಗಿಸುತ್ತವೆ. ಧಾರ್ಮಿಕ ಆಚರಣೆಗಳು ನಮ್ಮ ಬದುಕಿಗೆ ಕ್ರಮತೆಯನ್ನು ಮತ್ತು ಬದ್ಧತೆಯನ್ನು ತಂದಿಡುತ್ತವೆ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.
    ಪಟ್ಟಣದ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ಜರುಗಿದ ಶ್ರೀ1008 ಭ.ನೇಮಿನಾಥ ತೀರ್ಥಂಕರ ರತ್ನಮಯ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ತಥಾ ಜೀರ್ಣೋದ್ಧಾರಗೊಂಡ ಶಿಖರದಲ್ಲಿ ಶ್ರೀ1008 ಭ ಅನಂತನಾಥ ತೀರ್ಥಂಕರರ ಜಿನಬಿಂಬ ವೇದಿಪ್ರತಿಷ್ಠಾ ಮಹಾಮಹೋತ್ಸವ ಎರಡನೇ ದಿನದ ಸಮಾರಂಭದ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಧಾರ್ಮಿಕ ಆಚರಣೆಗಳಿಂದ ಅಸಮಾನತೆ ದೂರಾಗಿ ನಾವೆಲ್ಲರೂ ಒಂದು ಎಂಬ ಬ್ರಾತೃತ್ವ ಮೂಡಿ ಸಮಾಜದಲ್ಲಿ ಐಕ್ಯತೆ ಮೂಡುತ್ತದೆ. ಸಂಘಟಿತರಾಗುವ ಮೂಲಕ ಸರ್ವರ ಪ್ರಗತಿಯಾಗುತ್ತದೆ. ವೇದಿಕೆಯಲ್ಲಿ ಉಪಸ್ಥಿತ ಮುನಿ ಮಹಾರಾಜರ ಆಶೀರ್ವಚನಗಳಿಂದ ನಮ್ಮೆಲ್ಲರ ಅಂಧಕಾರ ದೂರಾಗಿ ಜ್ಞಾನದ ಜೀವನ ನಮ್ಮದಾಗುತ್ತದೆ ಎಂದರು.
     ಪ.ಪೂ.108 ಆಚಾರ್ಯ ಶ್ರೀಶಾಂತಿಸೇನ ಮುನಿಮಹಾರಾಜರು ಜಿನಧರ್ಮದಲ್ಲಿ ಪಂಚಕಲ್ಯಾಣ ಮಹಾಮಹೋತ್ಸವಗಳಿಗೆ ಪರಮ ಪವಿತ್ರವಾದ ಸ್ಥಾನವಿದೆ. ಸಂಕಲ್ಪ, ಶೃದ್ಧೆ ಮತ್ತು ಭಕ್ತಿಗಳಿಂದ ಮಾತ್ರ ಇಂಥ ಪವಿತ್ರ ಮಹಾಮಹೋತ್ಸವ ಜರುಗಲು ಸಾಧ್ಯ. 2ನೇ ಶತಮಾನದಲ್ಲಿ ಸ್ಥಾಪಿತ ಅತ್ಯಂತ ಪ್ರಾಚೀನ ಮಠಗಳಲ್ಲೊಂದ ತೇರದಾಳದ ಶ್ರೀ1008 ನೇಮಿನಾಥ ಗೋಂಕ ಜಿನಾಲಯವು ಅತಿಶಯ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಸುತ್ತಲಿನ ಜಿನ ಬಾಂಧವರು ಸುಕ್ಷೇತ್ರದ ಪಾವಿತ್ರ್ಯವನ್ನು ಹೆಚ್ಚಿಸುವತ್ತ ಇಂಥ ಹೊಣೆಯುಳ್ಳ ಕಾರ್ಯಕ್ರಮ ಹಮ್ಮಿಕೊಂಡಿರುವುದ ಸ್ತುತ್ಯಾರ್ಹ ಎಂದರು. ಸಕಲ ಜೀವ ಸಂಕುಲನದ ಕಲ್ಯಾಣ ಬಯಸುವುದು ಮತ್ತು ದೈನಂದಿನ ಜೀವನದಲ್ಲಿ ಆಚರಿಸುವುದು ಜಿನ ಧರ್ಮೀಯರ ಆದ್ಯ ಕರ್ತವ್ಯವಾಗಿದ್ದು, ನಾವು ಶೃದ್ಧಾ ಭಕ್ತಿಗಳಿಂದ ಧರ್ಮವನ್ನು ಆಚರಿಸಬೇಕೆಂದರು.
    ಮುಂಜಾನೆ ಭಗವಂತನ ಜನ್ಮ ಕಲ್ಯಾಣ, ಮಂಗಲಕುಂಭ ತರುವುದು, ಪಂಚಾಮೃತ ಹಾಗೂ 108 ಕಲಶಾಭಿಷೇಕ, ಲಘುಶಾಂತಿ, ಜನ್ಮಕಲ್ಯಾಣ ವಿಧಾನ, ಮಧ್ಯಾನ್ಹ ಮುನಿಗಳ ಆಗಮನ, ಪ್ರವಚನ, ವ್ಯಾಖ್ಯಾನ, ಸವಾಲ ಮತ್ತು ಸಂಜೆ ಐರಾವತ ಆನೆಯಿಂದ ಪಾಂಡುಶಿಲೆ ಮೇಲೆ ಜನ್ಮಾಭಿಷೇಕ, ರಾತ್ರಿ ನಾಮಕರಣ, ಬಾಲಲೀಲಾ ಕುಮಾರಕ್ರೀಡಾ, ಧೋಲಾರೂಹಣ, ಸಾಂಸ್ಕøತಿಕ ಕಾರ್ಯಕ್ರಮಗಳು, ಭಾಷ್ಯ ಆರತಿ ಜರುಗಿದವು.
    ವೇದಿಕೆಯಲ್ಲಿ ಡಿ.ಸಿ.ಪಾಟೀಲ, ಡಿ.ಆರ್.ಪಾಟೀಲ, ಪ್ರವೀಣ ನಾಡಗೌಡ, ಮಹಾವೀರ ಕೊಕಟನೂರ, ಅಶೋಕ ಆಳಗೊಂಡ, ಡಾ.ಜೆ.ಬಿ.ಆಲಗೂರ, ಡಾ.ಶೀತಲ ಸದಲಗಿ, ಭುಜಬಲಿ ಕೆಂಗಾಲಿ, ಸುಶೀಲಕುಮಾರ ಬೆಳಗಲಿ, ನಿಲೇಶ ದೇಸಾಯಿ, ಮಹಾವೀರ ಭಿಲವಡಿ, ಶಾಂತಿನಾಥ ಕೋರಿಗೇರಿ, ಸದಾಶಿವ ಹೊಸಮನಿ, ಅಲ್ಲಪ್ಪ ಬಾಬಗೊಂಡ ಮುಂತಾದವರಿದ್ದರು.