ತೇರದಾಳ ಸಮೀಪದ ಸಸಾಲಟ್ಟಿ ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನವನ್ನು ಡ್ರೈವಿಂಗ್ ಮಾಡುವ ಮೂಲಕ ಕ್ಷೇತ್ರದ ಶಾಸಕ ಸಿದ್ದು ಸವದಿ ಚಾಲನೆ ನೀಡಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು.  
ಸಸಾಲಟ್ಟಿ ಏತ ನೀರಾವರಿ ಯೋಜನೆ ಶೀಘ್ರ ಕಾಯಕಲ್ಪ : ಸಿದ್ದು ಸವದಿ
ತೇರದಾಳ : ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇದ್ದರೆ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಮೂಲಕ ಗ್ರಾಮವನ್ನು ಆರೋಗ್ಯವಾಗಿಡಬಹುದು ಎಂದು ತೇರದಾಳ ಶಾಸಕ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು. 
     ಸಮೀಪದ ಸಸಾಲಟ್ಟಿ ಗ್ರಾಮದ ಗ್ರಾಮ ಪಂಚಾಯತ ಕಸವಿಲೇವಾರಿ ನೂತನ ವಾಹನವನ್ನು ಡ್ರೈವಿಂಗ್ ಮಾಡುವ ಮೂಲಕ ಚಾಲನೆ ನೀಡಿ, ಭಾಗ್ಯ ಲಕ್ಷ್ಮೀ ಬಾಂಡ್ ವಿತರಿಸಿ ಅವರು ಮಾತನಾಡಿದರು. ಜನಸಾಮಾನ್ಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದಿಂದ ಶೀಘ್ರವೇ ಪಡಿತರ ಧಾನ್ಯವನ್ನು ಮನೆಗೆ ತಲುಪಿಸುವ ಯೋಜನೆ ಜಾರಿಗೊಳ್ಳಲಿದೆ. ಇದರ ಜೊತೆಗೆ ಕೆಲವೇ ದಿನಗಳಲ್ಲಿ ನೂರು ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆ ನೀಡುವುದರ ಮೂಲಕ ಭಾರತ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಲಿದೆ. ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಸರ್ಕಾರ ಆರು ನೂರು ಕೋಟಿ ರೂ. ಅಂದಾಜು ಮೊತ್ತವನ್ನು ಮೀಸಲಿಟ್ಟು ಯೋಜನೆ ಜಾರಿಗೊಳ್ಳಲಿದೆ ಎಂದರು. 
     ಮಹೇಶ ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ರಬಕವಿ-ಬನಹಟ್ಟಿ ತಾಲ್ಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಸಂಜಯ ಹಿಪ್ಪರಗಿ, ಪಿಡಿಒ ಸಂತೋಷ ಪೂಜಾರಿ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ರಾಘವೇಂದ್ರ ಕೋಲಾರ ಅಂಗನವಾಡಿ ಮೇಲ್ವಿಚಾರಕಿ ಬಿ.ಜಿ.ಹಿರೇಮಠ, ಜಿ.ಆರ್.ಶೇಗುಣಸಿ, ಶಿವಲಿಂಗ ನಿರ್ವಾಣಿ, ಗುರುಬಸು ಹುಕ್ಕೇರಿ, ಪರಪ್ಪ ಮದಲಮಟ್ಟಿ, ವೇದಿಕೆಯಲ್ಲಿದ್ದರು. ಆಶಾ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
 ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು.