^^^^^^^^^^^^^^^^^^^^^^^^^^^^^^^^^^^^^^^^^
● ಜಿದ್ದಿಗೆ ಬಿದ್ದು ಮಗಳ ಜತೆ ಕ್ಯಾತೆ ತೆಗೆದು ಜಗಳವಾಡಿದ್ದ ಸತ್ಯಜಿತ್ ಬದುಕಿನ ಅನಿಶ್ಚಿತತೆಯ ಅರಿವಾಗಿ ಕ್ಷಮೆ ಕೇಳಲು ಸಿದ್ದರಾಗಿದ್ದರಾ? ●
^^^^^^^^^^^^^^^^^^^^^^^^^^^^^^^^^^^^^^^^^^
◆ ಇದ್ದಕ್ಕಿದ್ದಂತೆಯೇ ಸತ್ಯಜಿತ್ ನೆನಪಾದರು, ಅದೇ ಸಯ್ಯದ್! ಗ್ಯಾಂಗ್ರೀನ್ ಕಾರಣಕ್ಕಾಗಿ ಎಡಗಾಲು ಕಳೆದುಕೊಂಡು ಗೃಹವಾಸಿಯಾಗಿದ್ದ ಸತ್ಯಜಿತ್ ಈಗ ಅಕ್ಷರಶಃ ಗೃಹಬಂಧನದಲ್ಲಿರುವಂತಾಗಿದೆ! ಕಾರಣ : ಕೊರೊನಾ. ನನ್ನ ಮತ್ತು ಅವರ ಫೋನ್ ಸಂಭಾಷಣೆ ಹೀಗಿತ್ತು :
◆ ಹೇಗಿದ್ದೀರಿ ಸರ್? ಆರೋಗ್ಯ ಓಕೆನಾ?
- ಫಸ್ಟ್ ಕ್ಲಾಸ್ ಗುರುಗಳೇ. ಆರಾಮಾಗಿ ಮನೆಲಿದ್ದೇನೆ...
◆ ಇಂಡಸ್ಟ್ರೀಯಿಂದ ಯಾರಾದ್ರೂ ಫೋನ್ ಮಾಡಿದ್ರಾ?
- ಯಾಕೆ ಮಾಡ್ತಾರೆ ಬಾಸ್? ಅವರವರ ಕೆಲಸ ಮುಗಿದಾಕ್ಷಣ ಎಲ್ಲವನ್ನೂ ಮರ್ತು ಬಿಡ್ತಾರೆ. ನಿಮ್ಗೆ ಗೊತ್ತಿಲ್ಲದಿರೋದಾ?
◆ ಮಗ, ಮಗಳು ಹೇಗಿದ್ದಾರೆ?
- ಮಗ ನಟ ಆಗ್ಬೇಕು ಅಂತ ಹೊರಟಿದ್ದ, ಹೀಗಾಗೋಯ್ತು. ಏನೋ ವ್ಯವಹಾರ ಮಾಡಿಕೊಂಡಿದ್ದಾನೆ. ಮಗಳು ಗಂಡನ ಮನೇಲಿದ್ದಾಳೆ...
- ಖಂಡಿತಾ ಗುರುಗಳೇ...ತುಂಬಾ ಥ್ಯಾಂಕ್ಸ್, ಫೋನ್ ಮಾಡಿ ನೀವಾದ್ರೂ ವಿಚಾರಿಸಿದರಲ್ಲಾ? ಹ್ಯಾಪ್ಪಿ ಗಣೇಶ್'ಜೀ...ಥ್ಯಾಂಕ್ಯೂ...
- ನಡೆದದ್ದು ಇಷ್ಟೇ ಸಂಭಾಷಣೆ. ಆದ್ರೆ ಅವ್ರು ಮತ್ತು ನಾನು ಪರಸ್ಪರ ಪಡೆದುಕೊಂಡ ಸಂತೃಪ್ತಿ ಇದೆಯಲ್ಲಾ, ಅದಕ್ಕೆ ಬೆಲೆ ಕಟ್ಟಲಾಗದು...ಇಷ್ಟಕ್ಕೂ ಸತ್ಯಜಿತ್ ಅವರ ನೆನಪಾಗಲು ಕಾರಣವಾದದ್ದು ನನ್ನ ಮೊಬೈಲ್ ಆಲ್ಬಮ್'ನಲ್ಲಿದ್ದ ಫೋಟೋಗಳು. ಒಮ್ಮೆ 'ದ್ರೋಣ' ಟಿವಿ ಸಂದರ್ಶನಕ್ಕಾಗಿ ಮೀರಾ ಅನುರಾಧಾ ಜತೆ ಕ್ಯಾಮೆರಾ ಸಮೇತ ಹೋಗಿದ್ದೆ. ಬೇರೆ ಯಾರಿಗೂ ಸಂದರ್ಶನಕ್ಕೆ ಅವಕಾಶ ಕೊಡದ ಸತ್ಯಜಿತ್ ನನ್ನನ್ನು ಮಾತ್ರ ಕರೆಸಿಕೊಂಡಿದ್ದರು.
ಹಾಗೆ ನೋಡಿದರೆ ನಮ್ಮದು ಕೌಟುಂಬಿಕ ಸಂಬಂಧ! ಆ ಕಾಲದಲ್ಲಿ ಸರ್ಕಾರೀ ಬಸ್ ಡ್ರೈವರ್ ಆಗಿದ್ದಾಗ ನಾನು ಹುಬ್ಬಳ್ಳಿಯ 'ಸಂಯುಕ್ತ ಕರ್ನಾಟಕ'ಕ್ಕೆ ಸಿನಿಮಾ ಐಟಮ್ ಕಳಿಸಿಕೊಡುತ್ತಿದ್ದುದು ಇದೇ ಸಯ್ಯದ್ ಕೈಲಿ. ಆಗ 'ಸಯ್ಯದ್' ಆಗಿದ್ದ ಇವರು ಚಿತ್ರರಂಗ ಪ್ರವೇಶದ ನಂತರ 'ಸತ್ಯಜಿತ್' ಆಗಿದ್ದರು. ಏನಿಲ್ಲವೆಂದರೂ ನಾನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸತ್ಯಜಿತ್ ಅಭಿನಯವನ್ನು ನೋಡಿಯೇ ಆಸ್ವಾದಿಸಬೇಕು...
ಇಂಥಾ ಮುಸಲ್ಮಾನ ಗೆಳೆಯ ಸತ್ಯಜಿತ್ ಪ್ರೀತಿಸಿ ಮದುವೆಯಾದದ್ದು ಹಿಂದೂ ಹುಡುಗಿಯನ್ನು. ಎರಡೂ ಹಬ್ಬಗಳನ್ನು ಈಗಲೂ ಒಟ್ಟುಗೂಡಿ ಆಚರಿಸುವ ಈ ಕುಟುಂಬದ ನೆಮ್ಮದಿಗೆ ಭಂಗ ತಂದದ್ದು ಗ್ಯಾಂಗ್ರೀನ್ ಕಾಯಿಲೆ. ಕೊನೆಗೂ ಎಡಗಾಲನ್ನು ಕತ್ತರಿಸಿ ಹಾಕಲಾಯಿತು. ಅಲ್ಲಿಗೆ ಅವರ ಬದುಕು ಮುಗಿಯಿತೆಂದೇ ಎಲ್ಲರೂ ಭಾವಿಸಿದರು. ಆದರೆ ಅವರ ನಿಜವಾದ ಬದುಕು ಆರಂಭವಾದದ್ದೇ ಆಮೇಲೆ! ಕೃತಕ ಕಾಲು ಅಳವಡಿಸಿಕೊಂಡರು. ತಾವೇ ಕೂತು ರೈಡ್ ಮಾಡುವಂಥಾ ವಾಹನ ತರಿಸಿಕೊಂಡರು. ಹೆಂಡತಿ ಪರ್ಮಿಷನ್ ಕೊಟ್ಟರೆ ಈ ವಾಹನದಲ್ಲೇ ಹುಬ್ಬಳ್ಳಿಗೆ ಹೋಗಿ ಬರುವಷ್ಟು ಆತ್ಮಸ್ಥೈರ್ಯ ಬೆಳೆಸಿಕೊಂಡರು! ಇವರದ್ದೊಂದೇ ಮಾತು : 'ಆರೋಗ್ಯದಿಂದಿರುವಾಗ ನಾನು ಅದರ ಜತೆ ಬದುಕಲಿಲ್ಲವೇ? ಈಗ ಈ ಸ್ಥಿತಿಯಲ್ಲಿದ್ದೇನೆ, ಇದರ ಜತೆ ಬದುಕು ನಡೆಸುವುದು ಕಷ್ಟವೇನಲ್ಲ. ಮಗ ಸಮರ್ಥನಿದ್ದಾನೆ. ಮಗಳು ಪೈಲೆಟ್. ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿದ್ದಾಳೆ. ಮನೆಯಾಕೆ ನನ್ನ ಇಚ್ಛೆಯನ್ನರಿತು ಬಾಳ್ವೆ ನಡೆಸಿದ್ದಾಳೆ. ದೇವರು ದೊಡ್ಡವನು. ದೊಡ್ಡ ಆತ್ಮಸ್ಥೈರ್ಯ ಕೊಟ್ಟಿದ್ದಾನೆ. ಸ್ವಂತ ಮನೆಯಲ್ಲಿ ಆರಾಮವಾಗಿ ಕೊರೊನಾ ರಜೆ ಕಳೀತಿದ್ದೇನೆ...ನಿಮಗೊಂದು ದೊಡ್ಡ ನಮಸ್ಕಾರ ಗಣೇಶ್'ಜೀ. ಉದ್ಯಮದ ಎಲ್ಲರೂ ಮರೆತಿರುವಾಗ ಒಂದು ಕಾಲ್ ಮಾಡಿ ಆರೋಗ್ಯ ವಿಚಾರಿಸಿದರಲ್ಲಾ? ಥ್ಯಾಂಕ್ಯೂ ಥ್ಯಾಂಕ್ಯೂ ಥ್ಯಾಂಕ್ಯೂ...'
- ಎಂದು ಹೇಳಿದ್ದ ಸತ್ಯಜಿತ್ ಇಂದಿಲ್ಲ ಅಂದರೆ ನಂಬೋದಿಕ್ಕಾಗಲ್ಲ. ಆವರೆಗೆ ಸ್ನೇಹದಿಂದಿದ್ದ ನಾನು ಸತ್ಯಜಿತ್ ಅವರನ್ನು ಕೊನೇಗಾಲದಲ್ಲಿ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡದ್ದು ನೆನಪಾಗುತ್ತದೆ. ಇದು ಅವರ ಮಗಳಿಗೆ ಸಂಬಂಧಿಸಿದ ವಿಚಾರ. ಕುಟುಂಬದ ಒಳಗೆ ನಡೆಯ ಬೇಕಿದ್ದ ವ್ಯಾಜ್ಯವನ್ನು ಬೀದಿಗೆ ತಂದು ಬಿಟ್ಟಿದ್ದರು ಸತ್ಯಜಿತ್. ಮಗಳು ಮತ್ತು ಅಳಿಯನ ಬಗ್ಗೆ ಸತ್ಯಜಿತ್'ಗೆ ಅಸಾಧ್ಯ ಅಸಮಾಧಾನವಿತ್ತು. ಇದನ್ನು ಬೀದಿಗೆ ತಂದಿರುವುದಕ್ಕೆ ನನ್ನ ತಕರಾರು. ಆಲ್'ಮೋಸ್ಟ್ ದೊಡ್ಡ ಜಗಳವನ್ನೇ ಆಡಿದ್ದೆ. ನೀವು ಮಾಡಿದ್ದು ತಪ್ಪೆಂದು ಜೋರಾಗಿ ವಾದಿಸಿದ್ದೆ. ನನ್ನ ಆವೇಶದ ಮಾತು ಕೇಳಿ ಅವರೇನಂದ್ರು ಗೊತ್ತಾ?
'ಗುರುಗಳೇ, ಗೊತ್ತಾಗಲಿಲ್ಲ. ಮಗಳೆನ್ನುವ ಮಮಕಾರ ಬಿಟ್ಟು ಜಗಳವಾಡಿ ಬಿಟ್ಟೆ. ನಿಮ್ಮಂಥೋರು ನಾಲ್ಕು ಬುದ್ದಿ ಮಾತು ಮೊದಲೇ ಹೇಳಿದ್ರೆ ಚೆನ್ನಾಗಿತ್ತು. ಆದ್ರೂ ಕಾಲ ಮಿಂಚಿಲ್ಲ, ಮಗಳು ಮತ್ತು ಅಳಿಯನ ಕ್ಷಮೆ ಕೇಳಿ ಮನೆಗೆ ಆಹ್ವಾನಿಸುತ್ತೇನೆ...' - ಹೀಗೆಂದು ಹೇಳಿ ಪಶ್ಚಾತ್ತಾಪ ಪಟ್ಟಿದ್ದರು ಸತ್ಯಜಿತ್. ಆದರೆ ಆಮೇಲೆ ಏನಾಯಿತೋ ಗೊತ್ತಿಲ್ಲ. ಈಗ ಕಾಲ ಮಿಂಚಿದೆ. ಅದೇ ಕಾಲನ ಕರೆಗೆ ಓಗೊಟ್ಟು ಹೊರಟು ಬಿಟ್ಟಿದ್ದಾರೆ ಗೆಳೆಯರು....
◆ ಓಂ ಶಾಂತಿ ◆

Social Plugin