ಬೆಳಗಾವಿ: ನಿನ್ನೆ ಸುರಿದ ಮಳೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹುಲಿಕೊತ್ತಲ ಗ್ರಾಮದಲ್ಲಿ ಮತ್ತೊಂದು ಮನೆ ಗೋಡೆ ಕುಸಿತ ಸಂಭವಿಸಿದ್ದು, ಕಲ್ಲಪ್ಪ ಮುದಕಪ್ಪ ಬಿಳಕಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಬೆಳಗಾವಿಯಲ್ಲಿ ಕೆಲವೆ ದಿನಗಳ ಅಂತರದಲ್ಲಿ ಒಟ್ಟು ಮೂರು ಮನೆಗಳು ಕುಸಿತಗೊಂಡಿವೆ. ಅಕ್ಟೋಬರ್ 6ರಂದು ಬಡಾಲ ಅಂಕಲಗಿಯಲ್ಲಿ ಮನೆಗೋಡೆ ಕುಸಿದು ಬಿದ್ದು 7 ಜನ ದುರ್ಮರಣ ಹೊಂದಿದ್ದರು. ಅಕ್ಟೋಬರ್ 10ರಂದು ದೇಸೂರು ಬಳಿ ತಗಡಿನ ಶೆಡ್ ಕುಸಿದು ಇಬ್ಬರು ಸಾವನ್ನಪ್ಪಿದ್ದರು. ಅಕ್ಟೋಬರ್ 10 ರ ರಾತ್ರಿ ಅಗಸಗಿಯಲ್ಲಿಯೂ ಮನೆ ಗೋಡೆ ಕುಸಿಯಿತು. ಒಂದು ವಾರದ ಅಂತರದಲ್ಲಿ ಮೂರು ಮನೆ ಗೋಡೆ, ಒಂದು ತಗಡಿನ ಶೆಡ್ ಕುಸಿದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.