ನಿಯೋಜಿತ ತೇರದಾಳ ತಾಲೂಕಾ ನಕ್ಷೆ

ತೇರದಾಳ : ನಲವತ್ತೆಂಟು ವರ್ಷಗಳ ಕಾಲ ಹೋರಾಟದ ಫಲವಾಗಿ 2019-20 ಸಾಲಿನ ಬಜೆಟ್‍ದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೆ.8ರಂದು ಅಧಿಕೃತವಾಗಿ ತೇರದಾಳ ಪಟ್ಟಣವನ್ನು ನೂತನ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ ಬಹಳಷ್ಟು ವರ್ಷಗಳ ಹೋರಾಟಕ್ಕೆ ಬೆಲೆ ನೀಡಿ ಪಟ್ಟಣದ ಜನತೆಗೆ ಖುಷಿ ನೀಡಿದರೆ, ಆ ಸಂದರ್ಭದಲ್ಲಿ ಘೋಷಣೆಯಾದ ನೂತನ ಹನ್ನೆರಡು ತಾಲೂಕಾ ಕೇಂದ್ರಗಳ ಪೈಕಿ ತೇರದಾಳ ತಾಲೂಕಿಗೆ ಮಾತ್ರ ಹಳ್ಳಿಗಳ ಹಂಚಿಕೆಯಾಗಿರುವುದಿಲ್ಲವೆಂಬುದು ವಿಷಾಧನೀಯ ಸಂಗತಿ. 

  1973ರಲ್ಲಿ ವಾಸುದೇವರೆಡ್ಡಿ ನೇತೃತ್ವದಲ್ಲಿ ರಚನೆಯಾಗಿದ್ದ ತಾಲೂಕಾ ಪುನರ್ವಿಂಗಡನಾ ಸಮೀತಿಯನ್ನು ತೇರದಾಳಕ್ಕೆ ಆಹ್ವಾನಿಸಿ ತೇರದಾಳ ನಗರವನ್ನು ತಾಲೂಕವೆಂದು ಘೋಷಿಸಬೇಕೆಂದು ಪಟ್ಟಣದ ಹಿರಿಯರು ಮನವಿ ಸಲ್ಲಿಸಿದರು. ಆದರೆ ವಾಸುದೇವರೆಡ್ಡಿಯವರು ಆ ಮನವಿಯನ್ನು ಪುರಸ್ಕರಿಸಲಿಲ್ಲ ನಂತರದಲ್ಲಿ ಹುಂಡೇಕರ ಆಯೋಗ, ಗದ್ದಿಗೌಡರ ಆಯೋಗ, ಎಂ.ಬಿ.ಪ್ರಕಾಶ ಆಯೋಗ ಖುದ್ದು ಭೇಟಿಯಾಗಿ ಮನವಚಿ ಮಾಡಿದರು ಯಾವುದೇ ಆಯೋಗಗಳು ತೇರದಾಳ ಪಟ್ಟಣ ನ್ಯಾಯುತವಾದ ಬೇಡಿಕೆಯನ್ನು ಪೂರೈಸದೆ ದಿವ್ಯ ನಿರ್ಲಕ್ಷ್ಯ ಧೋರಣೆ ತಾಳಿದರು. ಇದರಿಂದ ಪಟ್ಟಣದ ಜನತೆ ಆಕ್ರೋಶಗೊಂಡು ಹೋರಾಟದ ಸ್ವರೂಪವನ್ನು ಬದಲಿಸಿದರು. ನಲವತ್ತೆಂಟು ವರ್ಷಗಳಿಂದ ಪಟ್ಟಣದ ಜನತೆಯ ಹೋರಾಟದ ಫಲವಾಗಿ 2008ರಲ್ಲಿ ನ್ಯಾಯಮೂರ್ತಿ ಕುಲದೀಪಸಿಂಗ್ ನೇತೃತ್ವದ ಮತಕ್ಷೇತ್ರಗಳ ಪುನರ್ವಿಂಗಡನಾ ಆಯೋಗವು ತೇರದಾಳಕ್ಕೆ ವಿಧಾನ ಸಭಾ ಮತಕ್ಷೇತ್ರದ ಮಾನ್ಯತೆ ನೀಡಿ ಘೋಷಣೆ ಮಾಡಿದಾಗ ತೇರದಾಳ ತಾಲೂಕಾ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಯಿತು. ನಂತರ ಮುಂದುವರೆಸಿದ ಜನತೆಯ ಹೋರಾಟದ ಫಲವಾಗಿ 2019-20 ಸಾಲಿನ ಬಜೆಟ್‍ದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೆ.8ರಂದು ಅಧಿಕೃತವಾಗಿ ತೇರದಾಳ ಪಟ್ಟಣವನ್ನು ನೂತನ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ ಬಹಳಷ್ಟು ವರ್ಷಗಳ ಹೋರಾಟಕ್ಕೆ ಬೆಲೆ ನೀಡಿ ಪಟ್ಟಣದ ಜನತೆಗೆ ಖುಷಿ ನೀಡಿದರು.

  ಆದರೆ ತೇರದಾಳ ಪಟ್ಟಣವು ನೂತನ ತಾಲೂಕವೆಂದು ಘೋಷಣೆಯಾದರೂ ಈವರೆಗೆ ತಾಲೂಕಾ ಕುರಿತು ಯಾವುದೇ ಚಟುವಟಿಕೆಯನ್ನು ಸರಕಾರ ಕೈಗೊಂಡಿಲ್ಲ. ತಾಲೂಕ ಕೇಂದ್ರವಾಗಿ ಎರಡು ವರ್ಷಗಳು ಕಳೆದರೂ ಈವರೆಗೆ ಹಳ್ಳಿಗಳ ಹಂಚಿಕೆಯಾಗಿರುವುದಿಲ್ಲ. ಇದಕ್ಕಾಗಿ ತಾಲೂಕಾ ಹೋರಾಟ ಸಮೀತಿಯವರು ಪ್ರತಿ ಶುಕ್ರವಾರದಂದು ತೇರದಾಳ ವಿಶೇಷ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಳ್ಳಿಗಳ ಹಂಚಿಕೆ ಮಾಡಲು ಮನವಿ ಸಲ್ಲಿಸುತ್ತಾ ಬರುತ್ತಿದ್ದಾರೆ. ಸ್ಥಳೀಯ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸರಕಾರದ ಹಲವಾರು ಸಚಿವರಿಗೆ ಮನವಿ ಕೊಡುತ್ತಾ ಬಂದರೂ ಈವರೆಗೆ ಯಾವುದೇ ಕಾರ್ಯ ಪೂರ್ಣಗೊಂಡಿಲ್ಲ.       

    ಈ ಹಿಂದೆ ಸಾಂಗ್ಲಿ ಸಂಸ್ಥಾನದಲ್ಲಿ ತೇರದಾಳ ಪಟ್ಟಣವು ತಾಲೂಕಾ ಕೇಂದ್ರವಾಗಿತ್ತು ಆಗಿನ ಕಟ್ಟಡಗಳು ಇನ್ನೂ ಹಾಗೆಯೇ ಇವೆ. ಅವುಗಳಲ್ಲಿ ನೂತನ ತಾಲೂಕ ಕಚೇರಿಗಳನ್ನು ನಡೆಸಬಹುದು. ಈಗಾಗಲೇ ವಿಶೇಷ ತಹಶೀಲ್ದಾರ ಕಚೇರಿ ಹಾಗೂ ಸಬ್‍ರಿಜಿಸ್ಟರ್ ಕಚೇರಿಗಳು ಕೆಲಸ ಮಾಡುತ್ತಿದೆ.  ಕಚೇರಿಗಳಿಗೆ ಸ್ಥಳಾವಕಾಶವಿದ್ದು, ಹಲವಾರು ಸರಕಾರಿ ಕಟ್ಟಡಗಳು ಖಾಲಿ ಇವೆ. ನೂತನ ತಾಲೂಕಿಗೆ ಕಚೇರಿಗಳಿಗಾಗಿ ಯಾವುದೇ ರೀತಿಯ ಖರ್ಚು ವೆಚ್ಚವಾಗುವುದಿಲ್ಲ. ಆದರೆ ಬಸವರಾಜ ಬೊಮ್ಮಾಯಿಯವರ ಆಡಳಿತದ ಸರಕಾರ ತೇರದಾಳ ನೂತನ ತಾಲೂಕಿಗೆ ಹಳ್ಳಿಗಳ ಹಂಚಿಕೆ ಸೇರಿದಂತೆ ಕಚೇರಿಗಳನ್ನು ಶೀಘ್ರವಾಗಿ ಕೊಟ್ಟು ಕಚೇರಿಗಳು ತಮ್ಮ ಕಾರ್ಯವನ್ನು ಪ್ರಾರಂಭಿಸುವವುದೇ ಕಾದು ನೋಡಬೇಕಾಗಿದೆ.