ತೇರದಾಳ ಪಟ್ಟಣದ 4 ನೇ ಕೆನಾಲ ವಸತಿಯ ರೈತ ಭೀಮಪ್ಪ ಸಿದ್ಧಪ್ಪ ಬರಡಗಿಯವರು 3.25 ಲಕ್ಷಗಳಿಗೆ ಮಾರಾಟ ಮಾಡಿದ ಕಿಲಾರಿ ಹೋರಿ. 

3.25 ಲಕ್ಷಕ್ಕೆ ಮಾರಾಟವಾದ ಕಿಲಾರಿ ಹೋರಿ

ತೇರದಾಳ : ಪಟ್ಟಣದ ಪ್ರಗತಿಪರ ರೈತ ಭೀಮಪ್ಪ ಸಿದ್ಧಪ್ಪ ಬರಡಗಿಯವರ ಕಿಲಾರಿ ಹೋರಿ ಬರೋಬ್ಬರಿ 3 ಲಕ್ಷ 25 ಸಾವಿರಕ್ಕೆ ಮಾರಾಟವಾಗುವುದರ ಮೂಲಕ ದಾಖಲೆ ನಿರ್ಮಿಸಿದೆ.

     ಪಟ್ಟಣದ ನಾಲ್ಕನೇಯ ಕೆನಾಲ ವಸತಿಯಲ್ಲಿ ವಾಸವಾಗಿರುವ ರೈತ ಭೀಮಪ್ಪ ಸಿದ್ಧಪ್ಪ ಬರಡಗಿಯವರು 1 ವರ್ಷದ ಹಿಂದೆ 6 ತಿಂಗಳ ಕರುವಿದ್ದಾಗ 1.25 ಲಕ್ಷಕೊಟ್ಟು ಖರೀದಿಸಿ ಮನೆ ಮಗನಂತೆ ಸಾಕಿ ಬೆಳೆಸಿದ ಕಿಲಾರಿ ಹೋರಿ 3.25 ಲಕ್ಷಗಳಿಗೆ ಮಾರಾಠವಾಗುವ ಮೂಲಕ ಕೇವಲ ಒಂದೇ ವರ್ಷದಲ್ಲಿ ರೈತನಿಗೆ 2.00 ಲಕ್ಷಗಳ ಆದಾಯವನ್ನು ನೀಡಿದ್ದು ರೈತನ ಮೊಗದಲ್ಲಿ ಹರ್ಷದ ಹೊನಲು ಮೂಡಿದೆ.

     ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ವ್ಯಾಪಾರಸ್ಥ ಅಶೋಕ ಶ್ರೀಮಂತ ಕುರಿ ಈ ಹೋರಿಯನ್ನು 3.25 ಲಕ್ಷಗಳಿಗೆ ಖರೀದಿಸಿದ್ದು, ನೆರೆಯ ಮಹಾರಾಷ್ಟ್ರದ ಪಂಡರಪೂರದವರಿಗೆ 4.25 ಲಕ್ಷಗಳಿಗೆ ಮರು ಮಾರಾಟಮಾಡಿದ್ದು ಕಾರಿನ ಬೆಲೆಗೆ ಸರಿಸಮನಾಗಿ ಮಾರಾಟವಾಗಿರುವ ಹೋರಿಯ ಲೀಲೆಯನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ.

    ಈ ಸಂಧರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ 60 ವರ್ಷದ ರೈತ ಭೀಮಪ್ಪ ಬರಡಗಿ ನಾನು 31 ಎಕರೆ ಕೃಷಿ ಜಮೀನನ್ನು ಹೊಂದಿದ್ದು,ಕೃಷಿ ಕಾಯಕದೊಂದಿಗೆ ಉಪಕಸುಬಾಗಿ ಸುಮಾರು 40 ವರ್ಷಗಳಿಂದ ಸಣ್ಣ ಕರುಗಳನ್ನು ಖರೀದಿಸಿ ಒಂದು ವರ್ಷದವರೆಗೆ ಸಾಕಿ ಉತ್ತಮ ಬೆಲೆಗೆ ಮಾರಾಟಮಾಡುತ್ತಿದ್ದು, ಅಷ್ಟೇ ಅಲ್ಲದೇ ಜಾತಿವಂತ ಹೋರಿಗಳನ್ನು ಪ್ರದರ್ಶನಕ್ಕಿಟ್ಟು ಹಲವಾರು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದು,ಇಲ್ಲಿಯವರೆಗೆ ಸುಮಾರು ಮೂವತ್ತು ಪ್ರಶಸ್ತಿಗಳನ್ನು ಪಡೆದಿರುವುದಾಗಿ ತಿಳಿಸಿದ ಅವರು ರೈತರು ಕೃಷಿಯೊಂದಿಗೆ ಹೋರಿ,ಕುರಿ,ಟಗರು,ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಹೀಗೆ ಹತ್ತು ಹಲವು ಉಪಕಸುಬುಗಳನ್ನು ಮಾಡಿದಾಗ ಮಾತ್ರ ಉತ್ತಮ ಆದಾಯವನ್ನು ಗಳಿಸಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿ ರೈತರು ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸಲು ಬಹುಮುಖ ಪ್ರತಿಭೆಗಳಾಗಬೇಕೆಂದು ತಿಳಿಸಿದ ಅವರು ಸಲಹೆ ಹಾಗೂ ಮಾಹಿತಿಗಾಗಿ ತಮ್ಮ ದೂರವಾಣಿ ಸಂಖ್ಯೆ: 9741273640 ಗೆ ಸಂಪರ್ಕಿಸಲು ತಿಳಿಸಿದರು.