ತೇರದಾಳ ಪಟ್ಟಣದ ಲಕ್ಕವ್ವನ ದೇವಸ್ಥಾನದ ಹತ್ತಿರವಿರುವ ಕುಸ್ತಿ ಮೈದಾನವನ್ನು ಪಟ್ಟಣದ ಹಿರಿಯರು ಪೂಜೆಗೈದರು.

ತೇರದಾಳ ಪಟ್ಟಣದ ಲಕ್ಕವ್ವನ ದೇವಸ್ಥಾನದ ಹತ್ತಿರವಿರುವ ಕುಸ್ತಿ ಮೈದಾನದಲ್ಲಿ ಸಾಂಕೇತಿಕವಾಗಿ ಕುಸ್ತಿ ಆಡುತ್ತಿರುವ ಕುಸ್ತಿ ಪಟುಗಳು.

ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಸಾಂಕೇತಿಕ ಕುಸ್ತಿ

ತೇರದಾಳ : ಪಟ್ಟಣದ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಸಂಪ್ರದಾಯದಂತೆ ಕುಸ್ತಿ ಕಮೀಟಿಯವರು ಲಕ್ಕವ್ವನ ದೇವಸ್ಥಾನದ ಹತ್ತಿರವಿರುವ ಕುಸ್ತಿ ಮೈದಾನದಲ್ಲಿ ಸಾಂಕೇತಿಕ ಕುಸ್ತಿಯನ್ನು ಆಡಿಸಿದರು.

   ದೇಶಾದ್ಯಂತ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸರಕಾರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಜನರು ಗುಂಪುಗೂಡದಂತೆ ಜಾತ್ರೆ, ಸಂತೆ, ಮದುವೆಗಳಂತವುಗಳನ್ನು ನಿಷೇಧ ಮಾಡಿದೆ. ಅದರಂತೆ ಸರಕಾರದ ಆದೇಶವನ್ನು ಪಾಲಿಸಲು ಶ್ರೀಅಲ್ಲಮಪ್ರಭುದೇವರ ಜಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಈ ವರ್ಷದ ಜಾತ್ರೆಯನ್ನು ಸಂಪ್ರದಾಯದಂತೆ ಸರಳವಾಗಿ ಅರ್ಚಕರು ಮಾತ್ರ ಸೇರಿಕೊಂಡು ಮಾಡಲಾಗಿತ್ತು. ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ನಿಲ್ಲಿಸಬಾರದು ಎಂದು ಕುಸ್ತಿ ಕಮೀಟಿಯ ಹಿರಿಯರು ಕುಸ್ತಿ ಮೈದಾನವನ್ನು ಪೂಜೆಗೈದು ಸಾಂಕೇತಿಕವಾಗಿ ಐದು ಜೋಡಿಯನ್ನು ಕುಸ್ತಿ ಆಡಲು ಹಚ್ಚಿ ಬಿಡಿಸಿದರು.

    ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರ ಜಾತ್ರೆಯ ನಂತರ ಮಂಗಳವಾರ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಹಮ್ಮಿಕೊಂಡ ಕುಸ್ತಿಗಳು ಪ್ರಸಿದ್ಧ. ಕುಸ್ತಿಯನ್ನು ನೋಡಲು ದೂರದ ಊರಿನಿಂದ ಕುಸ್ತಿ ಪ್ರೇಮಿಗಳು ಬಂದು ಕುಸ್ತಿ ವೀಕ್ಷಣೆ ಮಾಡಿ ಸಂತೋಷ ಪಡುತ್ತಿದ್ದರು. ದೇಶ ಹೊರ ದೇಶದಿಂದ ಕುಸ್ತಿ ಪಟುಗಳು ಬಂದು ತಮ್ಮ ಕೈಚಳಕವನ್ನು ತೋರಿಸಿ ಕುಸ್ತಿ ಪ್ರೇಮಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಿದ್ದರು ಅಲ್ಲದೇ ಕಮೀಟಿಯವರು ಕೊಡುವ ಬಹುಮಾನವನ್ನು ಪಡೆದುಕೊಳ್ಳುತ್ತಿದ್ದರು. ಕಳೆದ ವರ್ಷ ಹಾಗೂ  ಈ ವರ್ಷ ಮಾತ್ರ ಮಹಾಮಾರಿ ಕೊರೊನಾ ವೈರಾಣುವಿನದಿಂದಾಗಿ ಕುಸ್ತಿ ಪ್ರೇಮಿಗಳಿಗೆ ನಿರಾಶೆಯನ್ನುಂಟು ಮಾಡಿದೆ. ಸಂಪ್ರದಾಯದಂತೆ ಐದು ಜೋಡಿಗಳನ್ನು ಮಾತ್ರ ಕುಸ್ತಿ ಆಡಿಸಿದರು. 

   ಈ ಸಂದರ್ಭದಲ್ಲಿ ಸ್ಥಳೀಯ ಹಿರೇಮಠದ ಗಂಗಾಧರ ದೇವರು ಕುಸ್ತಿ ಮೈದಾನವನ್ನು ಪೂಜೆಗೈದರು. ವಿಜಯಮಹಾಂತ ನಾಡಗೌಡ, ವಸ್ತಾದ ಕಲ್ಲಪ್ಪ ಶಿರೋಳ, ಬಸಪ್ಪ ಮುಕರಿ, ಜಿನ್ನಪ್ಪ ಸವದತ್ತಿ, ಬುಜಬಲಿ ಕೆಂಗಾಲಿ, ನಿಂಗಪ್ಪ ಮಾಲಗಾವಿ, ಮಲ್ಲಪ್ಪ ಮುಕರಿ, ರಮೇಶ ಮುಕರಿ, ಹನಮಂತ ಪುರಾಣಿಕ, ಷಣ್ಮುಖ ಗಾಡದಿ, ಪ್ರಭು ಬಾಗಿ ಸೇರಿದಂತೆ ಪಟ್ಟಣದ ಪ್ರಮುಖರು, ಇನ್ನಿತರರು ಇದ್ದರು.

-----------------------