ಧಾರವಾಡ ಪುಡಕಲಕಟ್ಟಿ ಗ್ರಾಮದ ಶ್ರೀ ಗಿರೀಶ ಆಶ್ರಮದಲ್ಲಿ ಭಕ್ತರು ಶ್ರಾವಣ ಮಾಸದ ಕೊನೆಯ ದಿನವಾದ ಮಂಗಳವಾರ ಶ್ರೀ ಮಾಧವಾನಂದರ ಭಾವಚಿತ್ರವನ್ನು ಶೃಂಗರಿಸಿದ್ದ ಪಲ್ಲಕ್ಕಿಯಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. 

ಉಪ್ಪಿನಬೆಟಗೇರಿ: ಶ್ರಾವಣ ಮಾಸದ ಅಂಗವಾಗಿ ಕಳೆದ ಒಂದು ತಿಂಗಳಿಂದ ಧಾರವಾಡ ತಾಲೂಕಿನ ಪುಡಕಲಕಟ್ಟಿ ಶ್ರೀ ಮಾಧವಾನಂದ ಆಶ್ರಮದಲ್ಲಿ ಪ್ರತಿದಿನ ಬೆಳ್ಳಿಗ್ಗೆ 5 ಘಂಟೆಗೆ ಕಾಕಡಾರತಿ, ಮಧ್ಯಾನ್ಹ ಭಜನೆ, ರಾತ್ರಿ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋಧ ಪಠಣ ನಂತರ ಬಾರಾ ಅಭಂಗ ಸೇರಿದಂತೆ ನಿತ್ಯನೇಮ ಉಪಾಸನೆ ಹಾಗೂ ಧ್ಯಾನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬಂದಿದ್ದವು.

ಪಾಡ್ಯಮಿ ದಿನವಾದ ಮಂಗಳವಾರ ಮುಂಜಾನೆ ಆಶ್ರಮದಲ್ಲಿ ಸೇರಿದ ಭಕ್ತರು ಹುಬ್ಬಳ್ಳಿಯ ವಿದ್ಯಾನಗರದ ಶ್ರೀ ಗಿರೀಶ ಆಶ್ರಮದ ಶ್ರೀ ಗೋಪಾಲ ಮಹಾರಾಜರ ನೇತೃತ್ವದಲ್ಲಿ ಶ್ರೀ ಮಾಧವಾನಂದ ಪ್ರಭೂಜಿಯವರ ಕತೃ ಗದ್ದುಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ನಂತರ ಶೃಂಗರಿಸಿದ್ದ ಪಲ್ಲಕ್ಕಿಯಲ್ಲಿ ಶ್ರೀ ಮಾಧವಾನಂದ ಪ್ರಭೂಜಿಯವರ ಭಾವಚಿತ್ರವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಕ್ಷೇತ್ರ ಇಂಚಗೇರಿ ಸಾಂಪ್ರದಾಯದ 'ಹರಿ ಮಾಧವಾ ಗುರು ಮಾಧವಾ" ಎಂಬ ನಾಮಸ್ಮರಣೆ ಮಾಡುತ್ತ ಸಾಗಿದರು. ಇವರ ಜೊತೆಗೆ ವೀಣೆಯನ್ನು ಹೊತ್ತುಕೊಂಡ ಭಕ್ತರು ಸಾಥ ನೀಡಿದರು. ನಂತರ ಮರಳಿ

ಆಶ್ರಮಕ್ಕೆ ಆಗಮಿಸಿದರು. ಶ್ರೀ ಗೋಪಾಲ ಮಹಾರಾಜರಿಂದ ಆಧ್ಯಾತ್ಮಿಕ ಪ್ರವಚನ ಜರುಗಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಇಂಚಗೇರಿ ಮಠದ ವಿವೇಕಾನಂದ ಮುರಗೋಡ ದಾಸಭೋಧ ಪಠಣ ಮಾಡಿದರು. ಭಕ್ತರಾದ ಮಲ್ಲಿಕಾರ್ಜುನ ಬಡಿಗೇರ, ಮಂಜುನಾಥ ಹೂಗಾರ, ರಾಮಣ್ಣ ಗೆದ್ದಿಕೇರಿ, ಆತ್ಮಾನಂದ ಹೂಗಾರ, ಶಿವಾನಂದ ಮಾಳಗಿಮನಿ, ಸುರೇಶ ಚಂದರಗಿ, ಈರಣ್ಣ ಬುಡ್ರಕಟ್ಟಿ, ನಿರಂಜನ ಚಂದರಗಿ, ಮಹಾದೇವ ತೇಗೂರ, ಸಂತೋಷ ಚಂದರಗಿ, ಸಂಜು ಚಂದರಗಿ ಸೇರಿದಂತೆ ಗ್ರಾಮ ಹಾಗೂ ಉಪ್ಪಿನಬೆಟಗೇರಿ ಗ್ರಾಮಗಳ ನೂರಾರು ಭಕ್ತರು ಉಪಸ್ಥಿತರಿದ್ದರು.

------------------------