◆ ಅಣ್ಣಾವ್ರು ಸೆಲ್ಯೂಟ್ ಹೊಡೆಯುತ್ತಿದ್ದ ಒಬ್ಬೇ ಒಬ್ಬ ಛಾಯಾಗ್ರಾಹಕ : ಕೆ.ಎನ್. ನಾಗೇಶ್ ಕುಮಾರ್! ◆
^^^^^^^^^^^^^^^^^^^^^^^^^^^^^^^^^^^^^^^^^
            ● ಹ್ಯಾಪ್ಪಿ ಬರ್ತ್ ಡೇ ಗೆಳೆಯರೇ...
^^^^^^^^^^^^^^^^^^^^^^^^^^^^^^^^^^^^^^^^^^
ಲೇಖನ : ಶ್ರೀ ಗಣೇಶ ಕಾಸರಗೋಡು ಹಿರಿಯ ಸಿನಿಮಾ ಪತ್ರಕರ್ತರು.
  ಅಣ್ಣಾವ್ರಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ನೀವು ನೋಡಿರಬಹುದು. ಆದರೆ ಅಣ್ಣಾವ್ರು ಸೆಲ್ಯೂಟ್ ಹೊಡೆಯುತ್ತಿದ್ದ ಒಬ್ಬೇ ಒಬ್ಬ ವ್ಯಕ್ತಿಯೆಂದರೆ ಕೆ.ಎನ್. ನಾಗೇಶ್ ಕುಮಾರ್! ಹೌದು, ಇದು ನಿಜ. ಕಳೆದ 40 ವರ್ಷಗಳಿಂದ ಕನ್ನಡ ಚಿತ್ರ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಹಕರಾಗಿ ಸೇವೆ ಸಲ್ಲಿಸುತ್ತಿರುವ KNN ಕ್ಯಾಮೆರಾ ಸೆರೆ ಹಿಡಿಯದ ತಾರೆಗಳಿಲ್ಲ! ಕನ್ನಡದ ಎಲ್ಲಾ ಪತ್ರಿಕೆಗಳಿಗಾಗಿ ಕೆಲಸ ಮಾಡಿರುವ KNN ಬಳಿ ಇರುವ ಮಾಹಿತಿ ಅಪೂರ್ವವಾದದ್ದು. ಒಬ್ಬೊಬ್ಬ ತಾರೆಯರ ಜತೆಗಿನ ಒಡನಾಟವೂ ಒಂದೊಂದು ವಿಧ. ಸಂಗ್ರಹಿಸಿದರೆ ಅದೊಂದು ಬೃಹತ್ ಗ್ರಂಥವಾದೀತು...
  ಇಂಥಾ ನಾಗೇಶ್ ಕುಮಾರ್ ಎದುರಾಬದುರು ಕಂಡ ತಕ್ಷಣವೇ ವರನಟ ಡಾ|ರಾಜಕುಮಾರ್ ಬಲಗೈಯೆತ್ತಿ ಸೆಲ್ಯೂಟ್ ಹೊಡೆಯುತ್ತಿದ್ದ ಶೈಲಿಯನ್ನು ಕಂಡು ಕನ್ನಡದ ಬಹಳಷ್ಟು ಮಂದಿ ತಾರೆಯರು ಅಚ್ಚರಿ ವ್ಯಕ್ತಪಡಿಸಿದ್ದಿದೆ! ಉಳಿದೆಲ್ಲರಿಗೂ ಕೈ ಮುಗಿದು ನಮಸ್ಕಾರ ಮಾಡುವ ರಾಜಣ್ಣ ಈ ನಾಗೇಶ್ ಕುಮಾರ್ ಅವರಿಗೆ ಮಾತ್ರ ಏಕೆ ಸೆಲ್ಯೂಟ್ ಹೊಡೆಯುತ್ತಾರೆ? - ಇದು ಚಿದಂಬರ ರಹಸ್ಯವೇನಲ್ಲ. ಈ ಬಗ್ಗೆ ಸ್ವತಃ ನಾಗೇಶ್ ಕುಮಾರ್ ಅವರೇ ರಾಜಣ್ಣನನ್ನು ಭೇಟಿಯಾಗಿ ಸ್ಪಷ್ಟೀಕರಣ ಕೇಳಿರುವ ಘಟನೆಯೂ ನಡೆಯಿತು. ಆಗ ರಾಜಕುಮಾರ್ ಏನು ಹೇಳಿದ್ದಾರೆ ಎನ್ನುವುದನ್ನು ನೀವೇ ಓದಿ. ಇದನ್ನು ಖುದ್ದು ನಾಗೇಶ್ ಕುಮಾರ್ ಅವರೇ ಹೀಗೆ ಹೇಳಿಕೊಂಡಿದ್ದಾರೆ :
      'ತಲೆ ತಗ್ಗಿಸಿ, ಮೈ ಬಗ್ಗಿಸಿ ದುಡಿಯುವುದಷ್ಟೇ ನನಗೆ ಗೊತ್ತಿತ್ತು. ಬೆಳಗಾದರೆ ಸಾಕು ಕ್ಯಾಮೆರಾ ಕೈಗೆತ್ತಿಕೊಂಡು ಹೊರಟರೆ ಸಂಜೆಯ ಹೊತ್ತಿಗೆ ತುತ್ತಿಗಾಗುವಷ್ಟು ಕೆಲಸ. ಕ್ಯಾಮೆರಾ ಕಿವಿ ಹಿಂಡಿದರೆ ಮಾತ್ರ ಹೊಟ್ಟೆಗೆ ತುತ್ತು. ನನ್ನ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ನನ್ನ ಕಾಯಕಕ್ಕೆ ಮಾತ್ರ ತಲೆ ತಗ್ಗಿಸಿದ್ದೇನೆ, ಮೈ ಬಗ್ಗಿಸಿದ್ದೇನೆಯೇ ಹೊರತು ಮತ್ತೊಬ್ಬರ ಮುಲಾಜಿಗೆ ಬಿದ್ದು ದೈನೇಶಿಯಾಗಿ ಬದುಕಿದವನಲ್ಲ. ಇದು ಸ್ವಾಭಿಮಾನದ ಪ್ರಶ್ನೆ. ಸ್ವಾಭಿಮಾನ ನನ್ನ ರಕ್ತಕ್ಕಂಟಿದ ಗುಣ. ಅದನ್ನು ಬಿಟ್ಟು ನಾನಿಲ್ಲ, ನನ್ನನ್ನು ಬಿಟ್ಟು ಅದಿಲ್ಲ. ಇದನ್ನೇ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿಕೊಂಡರು : ಅಹಂಕಾರ, ದುರಹಂಕಾರ, ಪ್ರತಿಷ್ಠೆ...ಇತ್ಯಾದಿ ಇತ್ಯಾದಿ. ಇವೆಲ್ಲಾ ನನ್ನ ಪಾಲಿಗೆ ಅರ್ಥವಿಲ್ಲದ ಸವಕಲು ಪದಗಳು. ಸತ್ಯವಿದ್ದರೆ, ನ್ಯಾಯವಿದ್ದರೆ ಅಲ್ಲಿ ನಾನು ತಲೆ ತಗ್ಗಿಸಿಯೇನು, ನಡು ಬಗ್ಗಿಸಿಯೇನು. ಇದು ನನ್ನ ಹುಟ್ಟುಗುಣ. ಗುರುವಿನಂಥಾ ಅಮ್ಮ ಕೊಟ್ಟ ಕಾಣಿಕೆ. ಉಪವಾಸ ಬಿದ್ದೇನು, ದೈನೇಶಿಯಾಗಿ ಭಿಕ್ಷೆ ಎತ್ತಲಾರೆ. ಇದಕ್ಕೂ ಮೀರಿ ಆತ್ಮಹತ್ಯೆಯನ್ನಾದರೂ ಮಾಡಿಕೊಂಡೇನು, ಆತ್ಮಾಭಿಮಾನ ಮೀರಿ ಒಂದು ಕ್ಷಣವೂ ಬದುಕಿರಲಾರೆ...
   'ಇಂಥಾ ನನಗೆ ಕನ್ನಡಿಗರ ಕಣ್ಮಣಿ ವರನಟ ಡಾ| ರಾಜಕುಮಾರ್ ಬಲಗೈ ಎತ್ತಿ ಸೆಲ್ಯೂಟ್ ಹೊಡೆಯುವುದೆಂದರೆ ಸಾಮಾನ್ಯದ ಮಾತಾ? ಬಹಳಷ್ಟು ಸಮಯ ನಾನು ಈ ಬಗ್ಗೆ ನೆಗೆಟಿವ್ ಆಗಿ ಯೋಚಿಸಿದ್ದೂ ಇದೆ! ಇವರೇನು ಎಲ್ಲರೆದುರು ನನ್ನನ್ನು ಕಿಂಡಲ್ ಮಾಡುತ್ತಿದ್ದಾರಾ? ತಮಾಷೆ ಮಾಡಿ ಆನಂದ ಪಡುತ್ತಿದ್ದಾರಾ? ನನ್ನೊಳಗೆಯೇ ಕನ್ಫ್ಯೂಷನ್. ಈ ಹಿಂದೆ ಬೇರೆ ಯಾರಿಗಾದರೂ ರಾಜಣ್ಣ ಸೆಲ್ಯೂಟ್ ಹೊಡೆದದ್ದು ಇದೆಯಾ? ಹಿರಿಯ ಛಾಯಾಗ್ರಾಹಕ ಜಿ.ಎಸ್.ನಾರಾಯಣಸ್ವಾಮಿಯವರು ರಾಜಣ್ಣನಿಗೆ ತುಂಬಾ ಹತ್ತಿರದವರು ಅಂತ ಕೇಳಿದ್ದೇನೆ. ಆದರೆ ಅವರಿಗೆ ಸೆಲ್ಯೂಟ್ ಹೊಡೆದ ದಾಖಲೆಯಿಲ್ಲ! ಹಾಗಿದ್ದರೆ ಅಣ್ಣಾವ್ರ ಈ ಸೆಲ್ಯೂಟ್'ಗೆ ಕಾರಣವೇನು? - ತಲೆ ತಿನ್ನುತ್ತಿದ್ದ ಈ ಪ್ರಶ್ನೆಗೆ ಸಾಕ್ಷಾತ್ ಅಣ್ಣಾವ್ರೇ ಉತ್ತರಿಸ ಬೇಕಿತ್ತು. ಆದರೆ ಇದು ಹೇಗೆ ಸಾಧ್ಯ? ಒಮ್ಮೆ ಪಾರ್ವತಮ್ಮ ಒಂಟಿಯಾಗಿ ಸಿಕ್ಕಾಗ ನನ್ನ ಸಮಸ್ಯೆಯನ್ನು ಅವರ ಮುಂದಿಟ್ಟಿದ್ದೆ. ಅವರು 'ನನಗೇನು ಗೊತ್ತು? ನೀನುಂಟು, ಅವರುಂಟು...' - ಎಂದು ಹೇಳುತ್ತಾ ಹೊರಟು ಬಿಟ್ಟಿದ್ದರು. ಅಷ್ಟು ದೂರ ಹೋಗಿ, ತಿರುಗಿ ನೋಡಿ ಒಂದು ಅದ್ಭುತ ಸ್ಮೈಲ್ ಕೊಟ್ಟಿದ್ದರು ಪಾರ್ವತಮ್ಮ! ಇವೆಲ್ಲಾ ಈಗ ನೆನಪುಗಳು ಮಾತ್ರ...
     'ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದೆ : ಸ್ವತಃ ರಾಜಣ್ಣನವರನ್ನೇ ಕೇಳಿ ನನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು! ಆ ದಿನಕ್ಕಾಗಿ ಕಾದೆ. ಅದು ಬಂದೇ ಬಿಟ್ಟಿತು. ಅಂದು ಸದಾಶಿವನಗರದ ರಾಜಣ್ಣನ ಮನೆಯಲ್ಲೊಂದು ಮುಹೂರ್ತ ಸಮಾರಂಭ. ಪುನೀತ್ ಸಿನಿಮಾವಿರಬೇಕು. ಹೆಸರು ನೆನಪಿಲ್ಲ. ಆ ಮುಹೂರ್ತದಲ್ಲೇ ನನ್ನ ಸಮಸ್ಯೆಯನ್ನು ಪರಿಹರಿಕೊಳ್ಳುವ ಮುಹೂರ್ತವನ್ನು ನನಗೆ ನಾನೇ ಫಿಕ್ಸ್ ಮಾಡಿಕೊಂಡೆ. ಮಾನಸಿಕವಾಗಿ ಸಿದ್ಧನಾಗಿ ಸದಾಶಿವನಗರದ ಅವರ ಮನೆ ಗೇಟು ದಾಟಿ ಒಳಹೋದಾಗ ಸಾಕ್ಷಾತ್ ರಾಜಣ್ಣನೇ ಸ್ವಾಗತಿಸಬೇಕಾ? ಅವರ ಸೌಜನ್ಯಕ್ಕೆ ತಲೆಬಾಗಿ ವಂದಿಸುತ್ತಿರುವಂತೆಯೇ ಮುಗುಳ್ನಕ್ಕು ಸೆಲ್ಯೂಟ್ ಹೊಡೆದೇ ಬಿಟ್ಟರಲ್ಲಾ? 
     'ಬೆಳಗ್ಗಿನ ತಿಂಡಿ ಸಮಯ. ಮುಹೂರ್ತದ ಜತೆ ಪತ್ರಿಕಾಗೋಷ್ಠಿಯೂ ಇದ್ದುದರಿಂದ ಪತ್ರಕರ್ತರಲ್ಲದೇ ಸಾಕಷ್ಟು ಮಂದಿ ಛಾಯಾಗ್ರಾಹಕರೂ ಬಂದಿದ್ದರು. ಆ ಮನೆಯ ಪದ್ಧತಿಯಂತೆ ಮೊದಲು ತಿಂಡಿ, ಕಾಫಿ. ಆ ಮೇಲೆ ಮುಹೂರ್ತ. ನಂತರ ಪತ್ರಿಕಾಗೋಷ್ಠಿ. ನನ್ನ ಕೈಹಿಡಿದು ತಿಂಡಿಯ ಬಳಿ ಕರೆದುಕೊಂಡು ಹೋಗಿ ಸಾಕ್ಷಾತ್ ರಾಜಕುಮಾರ್ ಅವರೇ ಬಡಿಸಿದರು! ನಂಬುತ್ತೀರಾ? ಇದು ನಿಜ. ನಂತರ ನನ್ನ ಹತ್ತಿರವೇ ಬೆಂಚ್ ಮೇಲೆ ಕೂತು ತಿಂಡಿ ತಿಂದರು! ಇದುವೇ ಒಳ್ಳೇ ಮುಹೂರ್ತ, ನನ್ನ ಪ್ರಶ್ನೆಯನ್ನು ಕೇಳಿಯೇ ಬಿಡೋಣ ಅಂತಂದುಕೊಂಡೆ. ಇಡ್ಲಿ ತುಂಡೊಂದನ್ನು ಬಾಯಿಗಿಡುತ್ತಾ 
ಅಣ್ಣಾವ್ರನ್ನು ಕೇಳಿಯೇ ಬಿಟ್ಟೆ : 'ಅಣ್ಣಾ, ನೀವೇಕೆ ನನ್ಗೆ ಸೆಲ್ಯೂಟ್ ಹೊಡೆಯುತ್ತೀರಿ? ಬೇರೆಲ್ಲರಿಗೂ ಕೈಮುಗಿದು ವಿಶ್ ಮಾಡುವ ನೀವು ನನ್ನನ್ನು ಕಂಡಾಗ ಮಾತ್ರ ಯಾಕೆ ಸೈನಿಕನ ಥರಾ ಸೆಲ್ಯೂಟ್ ಹೊಡೆಯುತ್ತೀರಿ?' - ನನ್ನ ಪ್ರಶ್ನೆ ಕೇಳಿ ನಕ್ಕು ಬಿಟ್ಟರು ರಾಜಣ್ಣ! ತಕ್ಷಣವೇ ಅವರಂದರು : 'ನೋಡಿ ಕುಮಾರ್, ನಿಮ್ಮ ಪ್ರಶ್ನೆಯಲ್ಲೇ ಉತ್ತರವಿದೆ. 'ಸೈನಿಕ' ಅಂದ್ರಲ್ಲಾ? ಅದುವೇ ಉತ್ತರ...' - ರಾಜಣ್ಣನ ಉತ್ತರ ಕೇಳಿ ಮತ್ತೆ ವಿಚಲಿತನಾದೆ. ನನ್ನನ್ನೇ ದಿಟ್ಟಿಸುತ್ತಾ ರಾಜಣ್ಣ ಹೇಳಿದ್ದಿಷ್ಟು : 'ಕುಮಾರ್, ಸೆಲ್ಯೂಟ್ ಹೊಡೆಯುವುದು ಯಾರಿಗೆ ಹೇಳಿ? ಸೈನಿಕರಿಗೆ ತಾನೇ? ನೀವೇನು ಕಮ್ಮೀನಾ? ಸಾಕ್ಷಾತ್ ಸೈನಿಕ ಕಣ್ರೀ ನೀವು. ವೃತ್ತಿಯಲ್ಲಿ ನಿಮಗಿರುವ ನಿಷ್ಠೆ, ನಿಯಮ, ಗೌರವ, ಸಂಯಮ...ಎಲ್ಲವೂ ಸಾಕ್ಷಾತ್ ಸೈನಿಕನದ್ದೇ. ಆದರೆ ಒಂದೇ ವ್ಯತ್ಯಾಸ : ಅವರ ಕೈಲಿ ಬಂದೂಕು ಇರುತ್ತದೆ, ನಿಮ್ಮ ಕೈಲಿ ಕ್ಯಾಮರಾ. ಅಲ್ಲೂ ಕ್ಲಿಕ್ ಮಾಡಬೇಕು, ಇಲ್ಲೂ ಕ್ಲಿಕ್ ಮಾಡಬೇಕು! ಆಗಲೇ ಗುರಿ ಮುಟ್ಟುವುದು ಸಾಧ್ಯ! ನೀವು ಈಗಾಗಲೇ ಗುರಿ ಮುಟ್ಟಿರುವ ಕ್ಯಾಮೆರಾ ಸೈನಿಕ! ಈಗ ಹೇಳಿ, ನಾನು ನಿಮಗೆ ಸೆಲ್ಯೂಟ್ ಹೊಡೆಯೋದು ತಪ್ಪಾ?' - ಇಷ್ಟು ಹೇಳಿದ್ದೇ ತಡ, ನಾನು ಕೈಲಿದ್ದ ತಿಂಡಿಯ ಪ್ಲೇಟನ್ನು ಅಲ್ಲೇ ಬೆಂಚಿನ ಮೇಲಿರಿಸಿ ಅಣ್ಣಾವ್ರನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟೆ! ಅವರ ಕೈಲಿದ್ದ ಪ್ಲೇಟು ಢಮಾರ್! ಎಲ್ಲರೂ ಈ ಕಡೆ ನೋಡಿಕೊಂಡರು. ಅಲ್ಲೆಲ್ಲೋ ಅಲೆದಾಡಿಕೊಂಡಿದ್ದ ಅಣ್ಣಾವ್ರ ಸಹಾಯಕ ಓಡೋಡಿ ಬಂದ. ಕೆಲವು ಹಿರಿಯ ಪತ್ರಕರ್ತರು ಲೇವಡಿಯಾಡಿದರು. 'ನಾಗೇಶ್ ಕುಮಾರ್'ನ ಮಾಮೂಲಿ ವರಸೆ...' - ಅಂತ ಹೇಳಿ ಮುಸಿಮುಸಿ ನಕ್ಕರು. ಆದರೆ, ಆ ಕ್ಷಣದಲ್ಲಿ ನಾನು ಮತ್ತು ರಾಜಣ್ಣ ಇಬ್ಬರೇ ಇದ್ದ ಅಪರೂಪದ ಅನುಭವ! ಜಗತ್ತೇ ಶೂನ್ಯ. ಅಣ್ಣಾವ್ರ ಸೆಲ್ಯೂಟ್ ಹಿಂದಿನ ಭಾವನಾತ್ಮಕ ಅಂಶವನ್ನು ಅಲ್ಲಿದ್ದವರಿಗೆಲ್ಲಾ ಕೂಗಿ ಕೂಗಿ ಹೇಳಬೇಕೆನ್ನುವ ಬಯಕೆ ತೀವ್ರವಾಗುತ್ತಿರುವಂತೆಯೇ ವಾಸ್ತವವನ್ನರಿತು ಮೌನವಾದೆ. 
     'ಈ ವರೆಗೆ ಯಾರಲ್ಲೂ ಹೇಳದಿರುವ ಗುಟ್ಟನ್ನು ಇಲ್ಲಿ ಈಗ ರಟ್ಟು ಮಾಡಿರುವೆ. ನನಗೆ ಸಮಾಧಾನವಾಯಿತು. ನಾಳೆ, ನಾಡಿದ್ದರಲ್ಲಿ ಕಂಠೀರವಾ ಸ್ಟುಡಿಯೋಕ್ಕೆ ಹೋಗಿ ಅಣ್ಣಾವ್ರ ಸಮಾಧಿಗೊಂದು ಸೆಲ್ಯೂಟ್ ಹೊಡೆದು ಬರೋಣ ಅಂತಿದ್ದೇನೆ, ಏನು ಹೇಳ್ತೀರಿ?' - KNN ಇಷ್ಟು ಹೇಳಿ ಮೌನವಾದರು...ಇಂಥಾ ನಾಗೇಶ್ ಕುಮಾರ್ ಅವರಿಗೆ ಅರವತ್ತು! ಇನ್ನೂ ಮೂವತ್ತರ ಕಸುವು ಇಟ್ಟುಕೊಂಡಿರುವ ಈ ಗೆಳೆಯರಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ...