ತೇರದಾಳದ ಶ್ರೀಅಲ್ಲಮಪ್ರಭು ದೇವರ ಪಾಲಕಿ ಉತ್ಸವ ಸರಳವಾಗಿ ನಡೆಯಿತು.
ತೇರದಾಳ : ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಕೊನೆಯ ಸೋಮವಾರ ಶ್ರೀಅಲ್ಲಮಪ್ರಭು ದೇವರ ಪಾಲಕಿ ಉತ್ಸವ ಹಾಗೂ ಕಂಬಿ ಉತ್ಸವ ಸರಳವಾಗಿ ನಡೆಯಿತು.
ಶ್ರಾವಣ ಮಾಸದ ಕೊನೆಯ ಸೋಮವಾರ ಶ್ರೀಅಲ್ಲಮಪ್ರಭು ದೇವರ ಜಾತ್ರೆಯು ಅತಿ ವಿಜೃಂಭಣೆಯಿಂದ ನಡೆಯುತಿತ್ತು. ಆದರೆ ಈ ವರ್ಷ ಮಾತ್ರ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಯಲು ಸರಕಾರ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿರುವುದರಿಂದ ಜಾತ್ರೆಯು ಮಾತ್ರ ಸಮಸ್ತ ಅರ್ಚಕರ ನೇತೃತ್ವದಲ್ಲಿ ಸರಳವಾಗಿ ನಡೆಯಿತು. ಸರಕಾರದ ಆದೇಶ ಪಾಲಿಸುವುದಕ್ಕಾಗಿ ಅರ್ಚಕರು ಜಾತ್ರೆಯನ್ನು ರದ್ದು ಪಡಿಸಿದ್ದರು. ಆದರೆ ಅನಾದಿ ಕಾಲದಿಂದಲೂ ನಡೆದು ಬಂದಿರುವ ಪಾಲಕಿ ಉತ್ಸವ ಹಾಗೂ ಕಂಬಿ ಉತ್ಸವವನ್ನು ನಡೆಸಬೇಕಾಗಿರುವುದರಿಂದ ಸರಳವಾಗಿ ಅರ್ಚಕರು ಮತ್ತು ಆಡಳಿತ ಮಂಡಳಿಯವರು ಸೇರಿ ಸರಳವಾಗಿ ನಡೆಸಿದರು.
ಶ್ರೀಅಲ್ಲಮ ಪ್ರಭು ದೇವಾಲಯದಲ್ಲಿ ಪ್ರಾತಃಕಾಲ ಜಾಗಟೆ, ನಗಾರಿ, ತಾಳ, ಸಂಭಾಳವಾದನದೊಂದಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು. ನಂತರ ಹೂಗಳಿಂದ ಅಲಂಕೃತ ಪಾಲಕಿಯಲ್ಲಿ ಶ್ರೀಪ್ರಭುದೇವರ ಉತ್ಸವ, ನಂದಿಕೋಲು ಉತ್ಸವ ಸರಳವಾಗಿ ಜರುಗಿತು. ಪ್ರವೀಣ ನಾಡಗೌಡ ಹಾಗೂ ಅವರ ಕುಟುಂಬ ವರ್ಗದವರು, ಉದ್ಯಮಿ ಜಗದೀಶ ಗುಡಗುಂಟಿ, ಸಂಬಾಳ ವಾದನ, ಗಾಯನ ಕಲಾವಿದರು, ತಬಲಾ ಕಲಾವಿದರು, ದೇವಾಲಯದ ಅರ್ಚಕವೃಂದ, ಶ್ರೀಅಲ್ಲಮಪ್ರಭು ಚಲನಚಿತ್ರದ ಕಥೆಗಾರ ಹಾಗೂ ನಿರ್ಮಾಪಕ ಮಾಧವಾನಂದ ಶೇಗುಣಸಿ ಸೇರಿದಂತೆ ತಂಡದವರು, ಪಟ್ಟಣದ ಪ್ರಮುಖರು, ಸಕಲಸದ್ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.
ತಹಶೀಲ್ದಾರ ಭೇಟಿ : ಜಮಖಂಡಿ ತಹಶೀಲ್ದಾರ ಪ್ರಶಾಂತ ಚನಗೊಂಡ ಹಾಗೂ ಕುಟುಂಬ ವರ್ಗದವರು ನಸುಕಿನ ಜಾವದಲ್ಲಿ ದೇವಸ್ಥಾನಕ್ಕೆ ಆಗಮಿಸಿ ಶ್ರೀಅಲ್ಲಮಪ್ರಭುದೇವರ ದರ್ಶನಾಶೀರ್ವಾದ ಪಡೆದರು.
_________

Social Plugin