ವೃತ್ತಿಪರತೆಯ ಈ ವಿಕಾರಕ್ಕೆ ಏನು ಶಿಕ್ಷೆ?
90ರ ದಶಕದ ಆದಿಭಾಗದಲ್ಲಿ “ಕಿಸೆತುಂಬಾ ಸಂಬಳ” ಎಸೆಯುತ್ತಿದ್ದೇವೆ ಎಂಬ ಕಾರಣಕ್ಕೆ ಈ ಸಂಸ್ಥೆ ತೋರಿಸುತ್ತಿದ್ದ ವೃತ್ತಿಪರ ಅಹಂಕಾರದ ದೊಡ್ಡ ಪುರಾಣವೇ ಇದೆ. ಒಂದೇ ಒಂದು ಸ್ಯಾಂಪಲ್ ಎಂದರೆ - ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಸಾಫ್ಟ್‌ವೇರ್ ಇಂಜಿನಿಯರ್ ಸಿಬ್ಬಂದಿಗೆ ಸಂಜೆ ಐದೂವರೆ ಹೊತ್ತಿಗೆ ವೀಸಾ, ವಿಮಾನ ಟಿಕೇಟು ಕೊಟ್ಟು ಬೆಳಗಿನ ಜಾವದ ವಿಮಾನದಲ್ಲಿ ನ್ಯೂಯಾರ್ಕ್ ತಲುಪು-ಅಲ್ಲಿ ತಲುಪಿ ನಾಲ್ಕೈದು ಗಂಟೆಗಳಲ್ಲೇ ಡ್ಯೂಟಿ ರಿಪೋರ್ಟ್ ಮಾಡು ಎನ್ನುವುದು! ಆ ಗಡಿಬಿಡಿ ಯಾಕೆ ಎಂದರೆ, ಅದೇ “ವೃತ್ತಿಪರತೆ” ಎಂದು ಉಪದೇಶ ಮಾಡುವುದು!!
ಇಂದು ಐಟಿ ಇಂಡಸ್ಟ್ರಿಗೆ ಅಂತಂತಹಾ “ಮಹಾತ್ಮ”ರನ್ನೆಲ್ಲ ಕೊಟ್ಟ ಸಂಸ್ಥೆಯು, "ನೀವೇ ತಯಾರಿಸಿದ GST ಪ್ಲಾಟ್‌ಫಾರಂ ಸಮರ್ಪಕ ಕೆಲಸ ಮಾಡುವಂತೆ ರಿಪೇರಿ ಮಾಡಿಕೊಡಿ" ಎಂಬ ಒಕ್ಕೂಟ ಸರ್ಕಾರದ ಹಣಕಾಸು ಸಚಿವರ ಫರ್ಮಾನಿನ ಹದಿನೈದು ದಿನಗಳ ಗಡುವು ದಾಟಿದರೂ ಕೆಲಸ ಪೂರೈಸದೆ ಹದಿನೇಳನೇ ದಿನದಲ್ಲಿ ಬಂದು ನಿಂತಿದೆ. GST ವೆಬ್‌ಸೈಟು ಇನ್ನೂ ರಿಪೇರಿ ಆಗಿಲ್ಲ. ಈ ವೃತ್ತಿಪರತೆಗೆ ಏನು ಶಿಕ್ಷೆ ಆಗಬೇಕು? ಅಥವಾ ಅವರ ತೊಟ್ಟಿಲನ್ನು ಮೇಲೆ ಕಟ್ಟಲಾಗಿದೆಯೆ?
ಸಾಮಾನ್ಯವಾಗಿ ಈ ತರಹದ ಯೋಜನೆಗಳಲ್ಲಿ ಪ್ಲಾಟ್‌ಫಾರಂನ ಪ್ರತೀ ಇಂಚಿಂಚೂ ದಾಖಲೀಕರಣ ಆಗಿರಬೇಕು. ಇದೇನೂ ಗೊತ್ತಿಲ್ಲದ ಸಂಗತಿ ಅಲ್ಲ. ಈಗ ಮುಖೇಡಿಗಳಂತೆ ಒಂದು ರಿಪೇರಿ ಮಾಡಿದರೆ ಇನ್ನೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ, ಹಾಗಾಗಿ ಉದ್ದಕ್ಕೆಳೆಯುತ್ತಿದೆ ಎನ್ನುತ್ತಿದೆ ಆ ಮಹಾನ್ ಸಂಸ್ಥೆ!
1380 ಕೋಟಿ ರೂಪಾಯಿಗಳ ಗುತ್ತಿಗೆ ಇದು. GST ನಿರ್ವಹಣೆಗೆ ಪಾಟ್‌ಫಾರಂ ತಯಾರಿಸಿ, ಐದು ವರ್ಷಗಳ ಕಾಲ ಅದನ್ನು ನಿರ್ವಹಿಸುವ ಗುತ್ತಿಗೆ ಇದು. GST ಗೆ ಸಂಬಂಧಿಸಿದ ನೋಂದಣಿ, ಪಾವತಿ ಮತ್ತು ರಿಟರ್ನ್ಸ್‌ಗಳು ಸುಸೂತ್ರವಾಗಿ ಆನ್‌ಲೈನ್ ನಡೆಯುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ ಆಗಿತ್ತು. 2017ರಲ್ಲೇ ಬೀಟಾ ಆವೃತ್ತಿ ಬಂದ ಈ ಪ್ಲಾಟ್‌ಫಾರಂ ಇನ್ನೂ ಸಲೀಸಾಗಿ ಕಾರ್ಯಾಚರಿಸುತ್ತಿಲ್ಲ.
ಸಾಮಾನ್ಯವಾಗಿ ಸರ್ಕಾರಿ ಟೆಂಡರ್‌ಗಳಲ್ಲಿ ಈ ರೀತಿ ಗುತ್ತಿಗೆದಾರರು ವಿಫಲರಾದರೆ ಅವರಿಗೆ ದಂಡನೆ ಶುಲ್ಕ ವಿಧಿಸುವುದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಶಿಸ್ತುಕ್ರಮ ಜರುಗಿಸುವುದು ಇತ್ಯಾದಿಗಳೆಲ್ಲ ನಡೆಯುವುದು ಕ್ರಮ. ಆದರೆ ಈ ಪ್ರಕರಣದಲ್ಲಿ ಈ ಮಹಾತ್ಮರಿಗೆ ಇನ್‌ಕಂ ಟ್ಯಾಕ್ಸಿನ ಪ್ಲಾಟ್‌ಫಾರಂ ಅನ್ನೂ ಸಿದ್ಧಪಡಿಸುವ “ಗಿಫ್ಟ್” ಕೊಡಲಾಗಿದೆಯಂತೆ. ಈಗ ಹದಿನೈದು ದಿನದ ಗಡುವು ಕಳೆದು ಹದಿನೇಳನೇ ದಿನ ಬಂದಿದ್ದರೂ ಸರ್ಕಾರದ ಕಡೆಯಿಂದ ಚಕಾರ ಇಲ್ಲ. ಬಡ ವ್ಯಾಪಾರಿ, ಐಟಿ ಕಂಪನಿಯ ತಪ್ಪಿಗೆ ಸಕಾಲದಲ್ಲಿ ಫೈಲಿಂಗ್, ರಿಪೋರ್ಟಿಂಗ್ ಸಾಧ್ಯವಾಗದೇ ವಿಳಂಬ ಶುಲ್ಕ ಕಟ್ಟುವ ಪರಿಸ್ಥಿತಿ ಬಂದಿದ್ದರೂ ಯಾರೂ ಧ್ವನಿ ಎತ್ತುತ್ತಿಲ್ಲ.
ಕಂಪನಿಯಲ್ಲಿ ಕೇಳಿದರೆ ಏಳ್ನೂರು ಜನ ರಿಪೇರಿ ಕೆಲಸ ಮಾಡ್ತಿದ್ದಾರೆ ಅಂತಿದೆ. ಮೂರೂವರೆ ವರ್ಷದಲ್ಲಿ ಫಲಿತಾಂಶ ಸೊನ್ನೆ.
ಗಮನಿಸಿ, GST ಬಂದಿರುವುದೇ ಮಾರಾಟ ತೆರಿಗೆಯಲ್ಲಿ ವ್ಯಾಪಾರಿ ವರ್ಗದ ಗೋಲ್‌ಮಾಲ್‌ಗಳನ್ನು ತಡೆಯುವುದಕ್ಕಾಗಿ. ಖರೀದಿ ಮತ್ತು ಮಾರಾಟದ ನಡುವೆ ಅಂತರದ ಲೆಕ್ಕಾಚಾರದ ಮೇಲಿನ ಹಿಡಿತ ಸರ್ಕಾರಗಳಿಗೆ ಇರಲಿಲ್ಲ. GST ಆ ಹಿಡಿತವನ್ನು ಸರ್ಕಾರಕ್ಕೆ ಕೊಡುತ್ತದೆ. ಹಾಗಾಗಿ GST ಪ್ಲಾಟ್‌ಫಾರಂ ಪರಿಪೂರ್ಣ ಕಾರ್ಯಾಚರಣೆ ಆರಂಭಿಸಿದರೆ ಅದರ ಮೊದಲ ಹೊಡೆತ ಬೀಳುವುದು, ಇಂದಿನ ಸರ್ಕಾರದ ದೊಡ್ಡ ಸಮರ್ಥಕರಾಗಿರುವ ವಣಿಕ ವರ್ಗಕ್ಕೆ. ಈಗ ಐದು ವರ್ಷಗಳ ಬಳಿಕವೂ ಪ್ಲಾಟ್‌ಫಾರಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ, ಮೊದಲ ಶಂಕೆ ಬರಬೇಕಾದುದೇ ಈ ಷಡ್ಯಂತ್ರದ ಮೇಲೆ.
ಮೊನ್ನೆ ಆಳುವ ಪರಿವಾರದ ಮುಖವಾಣಿ ಪತ್ರಿಕೆ ಈ ಪ್ಲಾಟ್‌ಫಾರಂ ವಿಳಂಬ ದೇಶದ್ರೋಹಿಗಳ ಸಂಚು ಎಂದಿತ್ತು. GST ಪ್ಲಾಟ್‌ಫಾರಂ ದುರಸ್ತಿ ವಿಳಂಬದಿಂದ ಯಾರಿಗೆ ಲಾಭ ಎಂದು ಯೋಚಿಸಿದರೆ, ಆ ಪತ್ರಿಕೆ ಬೊಟ್ಟುಮಾಡಿದ್ದು ಯಾರನ್ನು ಎಂಬುದು ಸ್ಪಷ್ಟವಾದೀತು.
#GST #Infosys

Social Plugin