ತೇರದಾಳ ವಿರಕ್ತಮಠದ ಲಿಂ.ಶಿವಲಿಂಗೇಶ್ವರಶ್ರೀಗಳ 19ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡುತ್ತಿರುವ ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರಶ್ರೀಗಳು.
ಮಹಾತ್ಮರು ಸಮಾಜದ ಕಣ್ಣು : ಗುರುಸಿದ್ದೇಶ್ವರ ಮಹಾಸ್ವಾಮಿಗಳು
ತೇರದಾಳ : ಸಂತನಾದವನು ತನ್ನ ತನು-ಮನ-ಧನಗಳ ಜೊತೆಗೆ ಸಂಪೂರ್ಣವಾಗಿ ತನ್ನತನವನ್ನು ಭಗವಂತನ ಪಾದಗಳಿಗೆ ಸಮರ್ಪಿಸಿ ಮಹಾಂತನಾಗುತ್ತಾನೆ. ಕಾಯ ಕಳೆದ ಮೇಲೂ ತಾನು ಮಾಡಿರುವ ಸಾಮಾಜಿಕ, ಧಾರ್ಮಿಕ ಕಾಯಕಗಳಿಂದಾಗಿ ಎಂದೆಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುತ್ತಾನೆಂದು ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ನುಡಿದರು.
ಪಟ್ಟಣದ ವಿರಕ್ತಮಠದಲ್ಲಿ ಜರುಗಿದ ಲಿಂ.ಶಿವಲಿಂಗೇಶ್ವರಶ್ರೀಗಳ 19ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಆಯೋಜನೆಗೊಂಡಿದ್ದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಂತರು ತಮ್ಮ ಅಂತರಂಗದ ಅರಿವು ಕಂಡಿರುತ್ತಾರೆ. ಆಧ್ಯಾತ್ಮಿಕ ಬೆಳಕು ನೀಡುವ ಸ್ವಾಮಿ ಸಮಾಜದಲ್ಲಿ ಕಣ್ಣು ಆಗಿದ್ದರೆ ಭಕ್ತ ಹೃದಯವಾಗಿರುತ್ತಾನೆ ಎಂದರು.
ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಮಠ-ಮಾನ್ಯಗಳು ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಅನ್ನ ದಾಸೋಹದ ಕೇಂದ್ರಗಳಾಗಿವೆ. ಜನತೆ ಶ್ರೀಮಠಗಳಿಂದ ಆಧ್ಯಾತ್ಮಿಕತೆಯ ನೆಮ್ಮದಿ ಬಯಸುತ್ತಾರೆ. ಹೊಟ್ಟೆಗೆ ಅನ್ನ, ನೆತ್ತಿಗೆ ಜ್ಞಾನ ನೀಡುವ ಶೃದ್ಧಾ-ಭಕ್ತಿಯ ಕೇಮದ್ರಗಳಾಗಿರುವ ಶ್ರೀಮಠಗಳು ನಾಡಿನ ಜನತೆಯ ನೆಮ್ಮದಿಯ ಬದುಕಿಗೆ ಕಾರಣವಾಗಿವೆ ಎಂದರು.
ಹಂದಿಗುಂದ ಸಿದ್ದೇಶ್ವರಮಠದ ಶಿವಾನಂದ ಮಹಾಸ್ವಾಮಿಗಳು ದುಡ್ಡಿನ ಹಪಾಹಪಿಗೆ ಬಿದ್ದಿರುವ ಇಂದಿನ ಜನತೆ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ನೆಮ್ಮದಿ ಮತ್ತು ಧಾರ್ಮಿಕತೆಯ ಜ್ಞಾನದ ಸೆಲೆಯುಣಿಸುತ್ತಿರುವ ಮಠಾಧೀಶರು ಬಸವಾದಿ ಪ್ರಮಥರ ಕಾಯಕದ ಮಹತ್ತತೆಯನ್ನು ಸಾರಬೇಕಿದೆ. ಭಕ್ತಿ ಮತ್ತು ಶೃದ್ಧೆಗಳು ಭಕ್ತನಲ್ಲಿ ಭರವಸೆ ಮೂಡಿಸುವ ಜೊತೆಗೆ ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತವೆಂದರು.
ವೇದಿಕೆಯಲ್ಲಿ ಘಟಪ್ರಭಾದ ಮಲ್ಲಿಕಾರ್ಜುನ ಶ್ರೀ, ತೇರದಾಳ ಹಿರೇಮಠದ ಗಂಗಾಧರ ದೇವರು, ಪರಪ್ಪ ಅಥಣಿ, ಮಲ್ಲಪ್ಪ ಜಮಖಂಡಿ, ಪ್ರವೀಣ ನಾಡಗೌಡ, ಅಶೋಕ ಮಹಾಬಳಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಅಲ್ಲಯ್ಯ ದೊಡಮನಿ, ಮಗೆಯ್ಯಸ್ವಾಮಿ ತೆಳಗಿನಮನಿ, ಕಾಂತಯ್ಯಾ ಹಿರೇಮಠ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಮಾಲಗಾಂವಿ ಅಧ್ಯಕ್ಷತೆ ವಹಿಸಿದ್ದರು.
ಮನೋಜ್ ಯಾದವಾಡ ಸ್ವಾಗತಿಸಿದರು. ಉದಯಕುಮಾರ ಪಂಚಾಕ್ಷರಿ ನಿರೂಪಿಸಿದರು. ಜೀವಿಕಾ ಡೊಂಬರ ಭರತನಾಟ್ಯ ಪ್ರದರ್ಶಿಸಿದಳು. ಎಮ್.ಸಿ ಕುಂಚಗನೂರ ಗುರುಗಳು ವಂದಿಸಿದರು.
ಸಮಾರಂಭದಲ್ಲಿ ಮಹಾದೇವ ಬಿಜ್ಜರಗಿ, ಅಪ್ಪು ಮಂಗಸೂಳಿ, ಬಾಲಚಂದ್ರ ಯಾದವಾಡ, ರಮೆಶ ಪಟ್ಟಣಶೆಟ್ಟಿ, ಸಿದ್ದು ಅಮ್ಮಣಗಿ, ಡಿ.ಆರ್.ಪಾಟೀಲ, ಶ್ರೀಅಲ್ಲಮಪ್ರಭು ಅನ್ನಪ್ರಸಾದ ಸಮಿತಿಯ ಸಿದ್ದಪ್ಪ ಗುಡ್ಡಿ, ರೇವಪ್ಪ ತುಕ್ಕಪ್ಪನವರ, ಪರಪ್ಪ ಬಾಳಿಕಾಯಿ, ಮಲ್ಲಪ್ಪ ಬಾಳಿಕಾಯಿ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

Social Plugin