ತೇರದಾಳ ಸಮೀಪದ ಗೊಲಭಾವಿ ಗ್ರಾಮದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ಅತಿಥಿಗಳನ್ನು ಸತ್ಕರಿಸಲಾಯಿತು.

ಗೋಲಭಾವಿಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಉದ್ಘಾಟನೆ  

ಶಿಕ್ಷಣದ ಸಂಪದೀಕರಣದಲ್ಲಿ ಸಂಪನ್ಮೂಲ ಕೇಂದ್ರದ ಪಾತ್ರ ಮುಖ್ಯ: ಸಿದ್ದು ಸವದಿ 

ತೇರದಾಳ : ಗುಣಾತ್ಮಕ ಶಿಕ್ಷಣದ ತಳಹದಿಯನ್ನು ಭದ್ರಗೊಳಿಸಲು ಪೂರಕ ಸಂಪನ್ಮೂಲಗಳ ಕ್ರೂಢೀಕರಣ ಅತಿ ಮುಖ್ಯವಾಗಿದ್ದು, ಶಿಕ್ಷಣದ ಸಂಪದೀಕರಣದಲ್ಲಿ ಸಮಾಲೋಚನೆ ಹಾಗೂ ಸೃಜನಾತ್ಮಕ ಕೌಶಲ್ಯಗಳ ಬಳಕೆ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳು ಶಾಲೆ-ವಿದ್ಯಾರ್ಥಿ ಮತ್ತು ಶಿಕ್ಷಕ ಪರಸ್ಪರ ಸಂಯೋಜನೆಗೊಂಡು ಕಾರ್ಯನಿರ್ವಹಿಸಲು ಪ್ರೇರಕವಾಗಿವೆಯಂದು ಶಾಸಕ ಸಿದ್ದು ಸವದಿ ಹೇಳಿದರು.
   ಸಮೀಪದ ಗೋಲಭಾವಿ ಗ್ರಾಮದಲ್ಲಿ ನೂತನ ಸಮೂಹ ಸಂಪನ್ಮೂಲ ಕೇಂದದ ಕಛೇರಿಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೇಂದ್ರದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ದೇಶದ ಅಭಿವೃದ್ದಿಯ ಪಥವನ್ನು ನಿರ್ಧರಿಸುತ್ತದೆ. ಶಿಕ್ಷಣ ಪಡೆಯುವುದು ಎಲ್ಲರ ಹಕ್ಕು ಆದರೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಪ್ರೇರೇಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಇಂದು ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಪ್ರಥಮವಾಗಿ ನಿರ್ಮಿಸಿರುವ ಈ ವಿನೂತನ ಸಮೂಹ ಸಂಪನ್ಮೂಲ ಕೇಂದ್ರ ಶಿಕ್ಷಣಕ್ಕೆ ದಾರಿ ದೀಪವಾಗಲಿ ಇದರ ಶ್ರೇಯೋಭಿವೃದ್ಧಿಗಾಗಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ( ಅಭಿವೃದ್ಧಿ) ಬಿ.ಕೆ ನಂದನೂರ ಮಾತನಾಡಿ ಶಿಕ್ಷಣದ ಧೇಯೋಧ್ಧೇಶಗಳನ್ನು ಈಡೇರಿಸಲು ಪ್ರತಿಯೊಬ್ಬರಿಗೆ ತರಬೇತಿ ಅತಿ ಮುಖ್ಯವಾಗಿದ್ದು, ಶಿಕ್ಷಕರನ್ನು ಉತ್ತಮ ಕೌಶಲ್ಯ ಭರಿತರನ್ನಾಗಿಸಿದಾಗ ಮಾತ್ರ ಮಕ್ಕಳಲ್ಲಿ ನಿರೀಕ್ಷಿತ ಕಲಿಕಾ ಪ್ರಗತಿಯನ್ನು ಅಪೇಕ್ಷಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳು ಪ್ರಯೋಗಾಲಯಗಳಂತೆ ಕಾರ್ಯನಿರ್ವಹಿಸುತ್ತವೆಯಂದು ತಿಳಿಸಿದ ಅವರು ಸಮೂಹ ಸಂಪನ್ಮೂಲ ಕೇಂದ್ರ ಶಿಕ್ಷಕರಿಗೆ ಪ್ರೇರಣೆಯಾದರೆ ಶಾಲೆ ಹಾಗೂ ವರ್ಗ ಕೊಠಡಿಗಳು ಮಕ್ಕಳಿಗೆ ಮೂಲ ಪ್ರೇರಕಗಳಾಗಿರುವುದರಿಂದ ಇಂದು ಮದುವನಗಿತ್ತಿಯಂತೆ ಸಿಂಗಾರಗೊಂಡ ಸಂಪನ್ಮೂಲ ಕೇಂದ್ರದಂತೆ ಪ್ರತಿಯೊಂದು ಶಾಲೆ ಹಾಗೂ ವರ್ಗ ಕೊಠಡಿಗಳನ್ನು ನಿರ್ವಹಿಸಲು ತಿಳಿಸಿ ಮಕ್ಕಳಿಗೆ ಇನ್‍ಸ್ಪೈರ್ ಅವಾರ್ಡ ಕುರಿತು ಮಾರ್ಗದರ್ಶನ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಕರೆ ನೀಡಿದರು.
       ಅತಿಥಿಗಳಾಗಿ ಆಗಮಿಸಿದ ಬಾಗಲಕೋಟ ಜಿಲ್ಲಾ ಯೋಜನಾ ಡಿವೈಪಿಸಿ ಶ್ರೀಮತಿ ಜಾಸ್ಮೀನ್ ಕಿಲ್ಲೇದಾರ ಮಾತನಾಡಿ ಶಿಕ್ಷಣವನ್ನು ಬಹುಮುಖ ನಿಲುವಿನಲ್ಲಿ ಅಳವಡಿಸಿಲು ಸಮೂಹ ಮತ್ತು ಸಮುದಾಯ ಪ್ರಮುಖ ಆಯಾಮಗಳಾಗಿದ್ದು ವಿಕೇಂದ್ರಿಕೃತವಾಗಿ ಪ್ರತಿ ವಲಯಗಳಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವ ಅವಶ್ಯಕತೆಯನ್ನು ಒತ್ತಿ ಹೇಳಿದ ಅವರು ಇಂದು ಸಮುದಾಯ ಹಾಗೂ ಶಿಕ್ಷಕರ ಸ್ವಯಂ ಪ್ರೇರಣೆಯಿಂದ ಸರಕಾರದ ಯಾವುದೇ ಸಹಾಯಾನುದಾನವಿಲ್ಲದೇ ಸುಂದರವಾದ ಸಮೂಹ ಸಂಪನ್ಮೂಲ ಕೇಂದ್ರದ ಕಛೇರಿಯನ್ನು ತೆರೆದು ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ಕಲ್ಪಿಸಲು ಸಂಕಲ್ಪಿಸಿ ಇಡೀ ಜಿಲ್ಲೆಗೆ ಮಾದರಿಯಾಗುವಂತೆ ಮಾಡಿದ ಸಿಬ್ಬಂಧಿಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
   ಪ್ರಾಸ್ತಾವಿಕವಾಗಿ ಸಿಆರ್‍ಪಿ ಶ್ರೀ ಭರತೇಶ ಯಲ್ಲಟ್ಟಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಂಪಂ ಅಧ್ಯಕ್ಷ ಪರಪ್ಪ ಕರಿಗಾರ ಹಾಗೂ ಅತಿಥಿಗಳಾಗಿ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ ನೇಮಗೌಡ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಐನಾಪೂರ, ಪ್ರಾಥಮಿಕ ಶಾ ಶಿ ಸಂ ಜಿಲ್ಲಾಧ್ಯಕ್ಷ ಬಿ.ಪಿ ಬಾಗೆನ್ನವರ, ಶಿಕ್ಷಣ ಸಂಯೋಜಕರಾದ ಎಸ್.ಬಿ ಬುರ್ಲಿ, ಡಿ.ಬಿ ಜಾಯಗೊಂಡ, ಬಿಆರ್‍ಪಿಗಳಾದ ಆರ್.ಎಮ್ ಸಂಪಗಾಂವ, ಶಿವು ಯಾದವಾಡ, ಸಿಆರ್‍ಪಿಗಳಾದ ಎಸ್.ಬಿ ಹಡಪದ, ಪ್ರಶಾಂತ ಹೊಸಮನಿ, ಎಸ್.ಬಿ ಮೋಮಿನ್. ಎಮ್.ಎಮ್ ಜಂಗಲಿ, ಆರ್ ಎ ನೇಮಗೌಡ, ಜಗದೀಶ ಕುಳ್ಳೊಳ್ಳಿ, ಅಜೀಜ ಬಾಗೇವಾಡಿ, ಮಮದಾಪೂರ ಸೇರದಂತೆ ಗ್ರಾಮಸ್ಥರು ಭಾಗವಹಿಸಿದ್ದರು. 
     ಚಿದಾನಂದ ಕಾರಜೋಳ ಹಾಗೂ ಆಯ್ ಎನ್ ಲಟ್ಟಿ ನಿರೂಪಿಸಿದರು, ವ್ಹಿ.ಸಿ ಹಿರೇಮಠ ಸ್ವಾಗತಿಸಿ ವಂದಿಸಿದರು.