ಆಡಳಿತದಲ್ಲಿ ಪತಿಯಂದಿರ ಹಸ್ತಕ್ಷೇಪ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಮಹಿಳಾ ಶಕ್ತಿ ಸಂಘದಿಂದ ತೇರದಾಳ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು.
ಆಡಳಿತದಲ್ಲಿ ಪತಿಯಂದಿರ ದರ್ಭಾರ ನಿಲ್ಲಿಸಿ
ತೇರದಾಳ : ಚುನಾಯಿತ ಮಹಿಳಾ ಸದಸ್ಯೆಯರ ಪತಿಯಂದಿರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ತೇರದಾಳ ಘಟಕ ಹಾಗೂ ಡಾ.ಬಿ.ಆರ್ ಅಂಬೇಡ್ಕರ ಮಹಿಳಾ ಶಕ್ತಿ ಸಂಘದಿಂದ ತೇರದಾಳ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಇವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ನಿಯೋಗದ ಸದಸ್ಯರು ಮಹಿಳಾ ಮೀಸಲಾತಿ ಕೇವಲ ದಾಖಲೆಗಳಲ್ಲಿ ಮಾತ್ರವಿದ್ದು ಪುರಸಭೆಯಲ್ಲಿ ಚುನಾಯಿತ ಬಹುತೇಕ ಮಹಿಳಾ ಸದಸ್ಯರು ಕೇವಲ ಸಭೆಗಳಿಗೆ ಮಾತ್ರ ಸೀಮಿತರಾಗಿದ್ದು ಆಡಳಿತವನ್ನು ಅವರ ಪತಿಯಂದಿರರೇ ನಿರ್ವಹಿಸುತ್ತಿರುವುದು ನಮ್ಮ ದೇಶದ ದುರಾದೃಷ್ಠವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಜನರ ಅಹವಾಲುಗಳನ್ನು ಆಲಿಸುವಲ್ಲಿ ಮೂಖರಾಗಿರುವ ಮಹಿಳಾ ಸದಸ್ಯರು ಧ್ವನಿಯಾಗಿ ತಮ್ಮ ಪತಿದೇವರುಗಳನ್ನು ಬೊಟ್ಟು ಮಾಡಿ ತೋರಿಸುತ್ತಾರೆ. ವಾರ್ಡ ಸದಸ್ಯರು ಅಡುಗೆ ಮನೆಯಲ್ಲಿ ಅವರ ಗಂಡ ಆಡಳಿತದ ಕೋಣೆಯಲ್ಲಿ ಇದರ ನಡುವೆ ಅಭಿವೃದ್ಧಿ ಕತ್ತಲ ಕೋಣೆಯಲ್ಲಿಯಂತಾಗಿರುವ ಆಡಳಿತವ್ಯವಸ್ಥೆಗೆ ಹಿಡಿಶಾಪ ಹಾಕಿದ ಕಾರ್ಯಕರ್ತರು ಕೂಡಲೇ ಚುನಾಯಿತ ಮಹಿಳಾ ಸದಸ್ಯೆಯರ ಪತಿಯಂದಿರರನ್ನು ಆಡಳಿತದ ಹಸ್ತಕ್ಷೇಪದಿಂದ ದೂರವಿಟ್ಟು ಸಂವಿಧಾನ ಭದ್ಧವಾಗಿ ಆಡಳಿತ ನಿರ್ವಹಿಸಬೇಕೆಂದು ಆಗ್ರಹಿಸಿದರು. ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಮನವಿ ಸಲ್ಲಿಸಿ 'ಆಡಳಿತದಲ್ಲಿ ಪತಿಯಂದಿರ ದರ್ಬಾರ್ ನಿಲ್ಲಿಸಿ ಸಂವಿಧಾನ ಗೆಲ್ಲಿಸಿ' ಘೋಷಣೆಗಳನ್ನು ಕೂಗಿದರು.
ನಿಯೋಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೇರದಾಳ ಘಟಕದ ಅಧ್ಯಕ್ಷ ಮೈನುದ್ದಿನ ಮೋಕಾಶಿ, ಡಾ.ಬಿ.ಆರ್ ಅಂಬೇಡ್ಕರ್ ಮಹಿಳಾ ಶಕ್ತಿ ಸಂಘದ ಅಧ್ಯಕ್ಷೆ ಅಂಬಿಕಾ ತೆಳಗಡೆ, ಕರವೇ ಉಪಾಧ್ಯಕ್ಷ ವಿಠ್ಠಲ ಸಿಂಗೆ, ಸದಸ್ಯರಾದ ರಾಜು ನಧಾಪ, ರಿಯಾಜ ಹನಗಂಡಿ, ದಯಾನಂದ ಹೊಸಕೋಟಿ, ಸುನೀಲ ಹಟ್ಟೆನ್ನವರ, ಗುಲಾಬ ಜಮಾದಾರ, ಲಕ್ಕಪ್ಪ ಭಜಂತ್ರಿ ಸೇರಿದಂತೆ ನೂರಾರು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಮಹಿಳಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Social Plugin