ತೇರದಾಳದ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನಿಗೆ ಮಂಗಳವಾರ ಬೀಳ್ಕೊಟ್ಟರು.

ಶ್ರದ್ಧಾ ಭಕ್ತಿಯಿಂದ ಪೊಲೀಸರಿಂದ ಗಣೇಶ ವಿಸರ್ಜನೆ 

ತೇರದಾಳ : ದಿನವಿಡೀ ಆ ಕೇಸು ಈ ಕೇಸು, ಅಲ್ಲಿ ಹೊಡೆದಾಟ, ಬಡಿದಾಟ, ಅಶಾಂತಿ, ಒಂದಿಲ್ಲೊಂದು ಪ್ರಕರಣಗಳ ಬಗಿಹರಿಸುವುದರಲ್ಲೇ ತಮ್ಮ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ಪೊಲೀಸರು ಮಂಗಳವಾರ ಸಂಜೆ ಲಾಠಿ ಕೈಬಿಟ್ಟು, ಪಟಾಕಿ ಸಿಡಿಸಿ, ಗಣೇಶನ ಜೈಘೋಷಗಳೊಂದಿಗೆ ವಿಘ್ನವಿನಾಶಕನನ್ನು ಸರಳವಾಗಿ ಬೀಳ್ಕೋಡುವ ಮೂಲಕ ಇತರರಿಗೆ ಮಾದರಿಯಾದರು. 

     ದೇಶದಲ್ಲೆಡೆ ಕೊರೊನಾ ವೈರಾಣುವಿನ ಅಟ್ಟಹಾಸದಿಂದಾಗಿ ಹಬ್ಬ ಹರಿದಿನಗಳು ಸರಳವಾಗಿ ಆಚರಿಸಲಾಯಿತು. ಗಣೇಶ ಚೌತಿಯ ನಿಮಿತ್ಯ ಪಟ್ಟಣದಲ್ಲಿ ಕೆಲವು ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಗಣೇಶನನ್ನು ಒಂದು ದಿನ ಪ್ರತಿಷ್ಠಾಪಿಸಿ ಗಣೇಶ ವಿಸರ್ಜನೆ ಮಾಡಿದರು. ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಧ್ವನಿವರ್ಧಕ ಬಳಸಲಿಲ್ಲ. ಈ ವರ್ಷ ಕೊರೊನಾ ಅಬ್ಬರದಿಂದಾಗಿ ಎಲ್ಲ ಹಬ್ಬಗಳಿಗೆ ಕಳೆ ಇಲ್ಲದಂತಾಗಿದೆ. ಪೋಲಿಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ವಾಹನದಲ್ಲಿ ಗಣೇಶನನ್ನು ಕುಳ್ಳಿರಿಸಿ ಪಟಾಕಿಗಳನ್ನು ಸಿಡಿಸುವುದರ ಮೂಲಕ ಯಾವುದೇ ರೀತಿಯ ವಾದ್ಯ, ಧ್ವನಿವರ್ಧಕಗಳಿಲ್ಲದೇ ವಿಸರ್ಜನೆಗೆ ತೆರಳಿದರು. ಐದು ದಿನಗಳವರೆಗೆ ಗಣೇಶನಿಗೆ ಪೊಲೀಸ್ ಠಾಣೆಯಲ್ಲಿ ವಿಶೇಷ ಪೂಜೆಗಳೊಂದಿಗೆ ನೈವೇದ್ಯ ಅರ್ಪಿಸಿದರು. ವಿಸರ್ಜನೆ ದಿನದಂದು ತೆಂಗಿನ ಕಾಯಿಗಳನ್ನು ಹಣ್ಣು ಹಂಪಲಗಳನ್ನು ಸವಾಲು ಮಾಡಿ ಗಣೇಶ ವಿಸರ್ಜಣೆಗೆ ತೆರಳಿದರು. ಪಿಎಸ್‍ಐ ರಾಜು ಬೀಳಗಿ ನೇತೃತ್ವದಲ್ಲಿ ಮಂಗಳವಾರ ಸಂಜೆ ವಿನಾಯಕನಿಗೆ ವಿದಾಯ ಹೇಳಿದರು. 

   ಈ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಪಿಎಸ್‍ಐ ರಾಜು ಬೀಳಗಿ, ಕೆ.ಎಚ್.ಸನಹಟ್ಟಿ, ಎಮ್.ಎಸ್.ಸವದಿ, ಮಂಜು ಎತ್ತಿಮನಿ, ಸಿದ್ದು ಗಲಾಟೆ, ಮಹಿಳಾ ಸಿಬ್ಬಂದಿಗಳಾದ ಎಲ್ಲಟ್ಟಿ ಹಾಗೂ ರಾಚನ್ನವರ ಸೇರಿದಂತೆ ಠಾಣೆಯ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.

------------------------------------