ತೇರದಾಳ ಪಟ್ಟಣದ ಐತಿಹಾಸಿಕ ದತ್ತ ಮಂದಿರದಲ್ಲಿ ಪ್ರತಿವರ್ಷದಂತೆ ರಾಮನಾಮ ಸಪ್ತಾಹದಲ್ಲಿ ಭಾಗವಹಿಸಿದ ಭಕ್ತರು.

112ನೇ ತೇರಾಕೋಟಿ ರಾಮನಾಮ ಜಪ ಹಾಗೂ ಸಪ್ತಾಹ

ತೇರದಾಳ : ಪ್ರತಿ ವರ್ಷದಂತೆ ಈ ವರ್ಷವು ಭಾದ್ರಪದ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಶ್ರೀಬ್ರಹ್ಮ ಚೈತನ್ಯ ಮಹಾರಾಜ ಗೊಂದವಲ್ಲೇಖರ ಇವರ ಪರಮ ಶಿಷ್ಯರಾದ ಬ್ರಹ್ಮಾನಂದ ಮಹಾರಾಜರು(ಜಾಲಿಹಾಳ) 1909ನೇ ಇಶ್ವಿಯಲ್ಲಿ ಆರಂಭಿಸಿದ ತೇರಾಕೋಟಿ ಶ್ರೀರಾಮನಾಮ ಜಪ ಹಾಗೂ ಸಪ್ತಾಹವು ನಿರಂತರವಾಗಿ ಇಲ್ಲಿಯವರೆಗೆ ಅಂದರೆ ಅಖಂಡವಾಗಿ 112 ವರ್ಷಗಳ ಕಾಲ ವಿಶ್ವ ಕಲ್ಯಾಣಕ್ಕಾಗಿ ನಡೆದು ಬಂದಿದೆ. 

  ಶತಮಾನಗಳ ಇತಿಹಾಸ ಹೊಂದಿರುವ ತೇರದಾಳ ಪಟ್ಟಣದ ದತ್ತ ಮಂದಿರದಲ್ಲಿ ಭಾದ್ರಪದ ಅಷ್ಟಮಿಯಿಂದ ಅಂದರೆ ಸೆ.14ರಂದು ಮಂಗಳವಾರ ಶ್ರೀರಾಮನಾಮ ಸಪ್ತಾಹ ಪ್ರಾರಂಭಗೊಂಡು ಏಳು ದಿನಗಳ ವರೆಗೆ ಅಂದರೆ ಹುಣ್ಣಿಮೆಯವರೆಗೆ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದ ಹಲವು ಭಾಗಗಳಿಂದ ಆಗಮಿಸಿದ ಭಕ್ತವೃಂದ ಕೋವಿಡ್ ನಿಯಮಾವಳಿಗಳ ಪ್ರಕಾರ ಸಪ್ತಾಹದಲ್ಲಿ ಭಾಗವಹಿಸುತ್ತಾರೆ. ಈ ಸಪ್ತಾಹದ ಅಂಗವಾಗಿ ಸತತ ಏಳು ದಿನಗಳವರೆಗೆ ಪಂಚಪಕ್ವಾನ ಸಹಿತ ಅನ್ನ ಮಹಾಪ್ರಸಾದ ನಡೆಯುತ್ತದೆ. ದೇವಸ್ಥಾನದಲ್ಲಿ ಕೀರ್ತನೆ, ಭಜನೆ, ಸಂಗೀತ ಕಾರ್ಯಕ್ರಮ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ. 

   ಶ್ರೀಮದ್ ಭಾಗವತ್ ಪುರಾಣ, ಗುರು ಚರಿತ್ರೆ ಪಠಣ, ಮಹಾರಾಜರ ಜೀವನ ಚರಿತ್ರೆ ದಾಸ್ ಬೋಧ ಇತ್ಯಾದಿ ಗ್ರಂಥಗಳ ಪಠಣ ಅರ್ಚಕರಾದ ಅನಂತ ಅಗ್ನಿಹೊತ್ರಿ ಇವರ ಮಾರ್ಗದರ್ಶನದಲ್ಲಿ ನಡೆಯುತ್ತವೆ. ವೇ.ಶಾ.ಸಂ. ಜಂಬಗಿ ಆಚಾರ್ಯ ಪುಣೆ ಇವರು ಭಾಗವತ ಪಾರಾಯಣ ಮಾಡುತ್ತಾರೆ. ಈ ಕಾರ್ಯಕ್ರಮವು ಅತಿ ವಿಜೃಂಭಣೆಯಿಂದ ಪ್ರತಿವರ್ಷವು ನಡೆಯುತ್ತದೆ. ಭಕ್ತರು ತನುಮನದಿಂದ ಭಾಗವಹಿಸಿ ಸೇವೆ ಸಲ್ಲಿಸುತ್ತಾರೆ. ಶ್ರೀದತ್ತ ದೇವಸ್ಥಾನ ಚೇರಮನ್‍ರಾದ ಗುರುರಾಜ ಕುಲಕರ್ಣಿ, ಬಾಳು ದೇಶಪಾಂಡೆ, ಗೋವಿಂದ ಜೋಶಿ, ಪ್ರಭಾಕರ ಪಾರಗಾಂವಕರ, ರಾಮ ಜೋಶಿ, ಅಕುಲ್ ದೇಶಪಾಂಡೆ, ಅಚ್ಯುತ ಬೆಳಗಲಿ, ವರದ ದೇಶಪಾಂಡೆ, ಶ್ರೀಕಾಂತ ಕುಲಕರ್ಣಿ, ವಿರಾಜ ಬಂಕಾಪೂರ, ಡಾ. ಶೋಭಾ ದೇಶಪಾಂಡೆ, ಪುರಸಭೆ ಸ್ಥಾಯಿ ಸಮೀತಿ ಮಾಜಿ ಚೇರಮನ್ ಅಂಜಲಿ ಕುಲಕರ್ಣಿ, ಲೀಲಾ ದೇಶಪಾಂಡೆ, ಗೀತಾ ದೇಶಪಾಂಡೆ ಇವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿರುತ್ತವೆ ಎಂದು ಬಾಳು ದೇಶಪಾಂಡೆ ಪತ್ರಿಕೆಗೆ ತಿಳಿಸಿದರು.

------------------------