ದೇಶ ಕಂಡ ಅಪ್ರತಿಮ ರಾಜಕಾರಣಿ ರಾಮಕೃಷ್ಣ ಹೆಗಡೆಯವರ ಜನ್ಮ ದಿನ :
ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ೧೯೨೬, ಅಗಸ್ಟ್ ೨೯ ರಂದು ಜನಿಸಿದರು . ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ ನ್ಯಾಯ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದ್ದ ಇವರು ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೊ ಅನುಭವಿಸಿದ್ದರು. ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದರು.
ತಮ್ಮ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇ೦ದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವ ರಾಮಕೃಷ್ಣ ಹೆಗಡೆಯವರು. 1983ರಲ್ಲಿ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆಯವರು ಅಧಿಕಾರ ವಿಕೇಂದ್ರೀಕರಣದ ಪ್ರಬಲ ಪ್ರತಿಪಾದಕರಾಗಿದ್ದರು. ಕಾ೦ಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಂಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅಂತರದಿಂದ ಬಿದ್ದು ಹೋದಾಗ, ಮಂತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎಂಬುದನ್ನು ನಿರೂಪಿಸಿದರು. ಸಾಹಿತ್ಯ ಸಂಸ್ಕ್ರತಿ ಕಲೆಗಳಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದವರಾಗಿದ್ದರು.
ರಾಮಕೃಷ್ಣ ಹೆಗಡೆಯವರು ಜಾರಿಗೆ ತ೦ದ “ಪ೦ಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ರಾಮಕೃಷ್ಣ ಹೆಗಡೆಯವರು ಜಾರಿಗೆ ತಂದ “ಪಂಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊಂಡೊಯ್ಯಬೇಕೆಂಬ ತಮ್ಮ ಮನದಿಂಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ!ಮುಂದೆ ಭಾರತದಲ್ಲಿಯೇ ಪಂಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾಂಧಿ ಪ್ರೇರಣೆಗೊಂಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊಂಡ ಪಂಚಾಯತ್ ಕಾನೂನಿನಿಂದ!
ಬಂಜರು ಭೂಮಿಗಳನ್ನೂ ಕೃಷಿಗೆ ಉಪಯೋಗಿಸಕೊಳ್ಳಲು ಅನುಕೂಲವಾಗುವಂತೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರ ಮುಖದಲ್ಲಿ ಸಂತೃಪ್ತಿಯ ನಗು ಕರುಣಿಸಿದ ಅವರ ಕೃಷಿ-ತೋಟಗಾರಿಕೆ ನೀತಿಯು ರಾಜೀವಗಾಂಧಿಯವರಿಂದ ರಾಷ್ಟ್ರೀಯ ತೋಟಗಾರಿಕಾ ನಿಗಮ ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು! ಇಲ್ಲಿಗೇ ಮುಗಿದು ಹೋಯಿತಾ..? ಇಲ್ಲ .
ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃಧ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ!
ಲೋಕಾಯುಕ್ತರಿಗೆ ಸ್ವ ಇಚ್ಛೆಯಿಂದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು! ಮುಖ್ಯಮಂತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು! ಮಂತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊಂದಿದ್ದರು! ಸಚಿವ ಸಂಪುಟದ ತೀವ್ರ ವಿರೋಧಗಳ ನಡುವೆ ಲೋಕಾಯುಕ್ತರ ಪರಮಾಧಿಕಾರವನ್ನು ಮೊಟಕುಗೊಳಿಸಲಾಯಿತೆಂಬುದು ಬೇರೆ ವಿಚಾರ.
ಆದರೆ ಭ್ರಷ್ಟಾಚಾರದ ನಿರ್ಮೂಲನೆಯತ್ತ ಹೆಗಡೆಯವರಿಗಿದ್ದ ಕಳಕಳಿ ಮಾತ್ರ ಪ್ರಶ್ನಾತೀತವೇ.
ವಿಧ್ಯಾರ್ಥಿಗಳ ಪ್ರಯಾಣಾನುಕೂಲಕ್ಕೆ ಬಸ್ ಪಾಸ್ ನೀಡಿಕೆಯ ಆರಂಭವೂ ಹೆಗಡೆಯವರ ಕಾಲದಿಂದಲೇ.. ಶಿಕ್ಷಣ ಕ್ಷೇತ್ರ ಬಹಳ ಸುಧಾರಣೆಗೊಂಡಿದ್ದು ಅವರ ಕಾಲದಲ್ಲಿಯೇ! ಕ್ಯಾಪಿಟೇಷನ್ ಶುಲ್ಕದ ರದ್ದತಿ,ರ್ಯಾಗಿಂಗ್ ಅನ್ನು ಕ್ರಿಮಿನಲ್ ಅಪರಾಧವೆಂದು ಮಾನ್ಯ ಮಾಡಿ,ಅದಕ್ಕಾಗಿ ಕಾನೂನನ್ನು ಜಾರಿಗೊಳಿಸಿ, ತನ್ಮೂಲಕ ರ್ಯಾಗಿಂಗ್ ಎಂಬ ಪೀಡೆಯನ್ನು ಮಟ್ಟಹಾಕುವಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ಯಶಸ್ಸಿನ ಸಾಧನೆ ಹೆಗಡೆಯವರದ್ದು.
ಹೆಗಡೆ ಜಾರಿಗೆ ತಂದ ಹತ್ತು ಹಲವಾರು ಜನ ಕಲ್ಯಾಣ ಯೋಜನೆಗಳಲ್ಲಿ ಕೆಲವು ದೇಶದಲ್ಲಿ ಪ್ರಥಮವಾಗಿ ಆರಂಭಗೊಂಡಂತವೆಂದರೆ ಹೆಗಡೆಯವರ ಜನನಾಯಕತ್ವ- ತಮ್ಮನ್ನಾರಿಸಿ ಕಳುಹಿಸಿದ ಮತದಾರವರ್ಗದ ಅಭ್ಯುದಯದತ್ತ ಅವರಿಗಿದ್ದ ಕಾಳಜಿ ಗುರುತಿಸುವಂಥಹವೇ!
ಹೆಗಡೆ ನಿಜವಾಗಿಯೂ ನೈತಿಕತೆಯನ್ನು ಪಾಲಿಸಿಕೊಂಡು ಬಂದಿದ್ದರು. “ ಕಿಂಗ್ ಶಿಪ್ ಹ್ಯಾಸ್ ನೋ ಕಿನ್ ಶಿಪ್“ ಎಂಬ ಮಾತಿಗೆ ನಿಜವಾಗಿಯೂ ಅರ್ಥ ತಂದುಕೊಟ್ಟ ಮಹಾ ಮುತ್ಸದ್ದಿ! ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ಅವರು,ಮೇಲೆ ಹೇಳಿದಂತೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದವರು.
ಸಾಂಸ್ಕೃತಿಕ ಮೆರಗನ್ನು ನೀಡಿದ್ದು ಹೆಗಡೆಯವರ ಆಡಳಿತ! ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದವರು.
ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಒಗೆ ಶೇಕಡಾ ೫೦ ರ ರಿಯಾಯಿತಿ ಮುಂತಾದ ಯೋಜನೆಗಳೂ ಅವರವೇ! ಬೆಂಗಳೂರಿನಲ್ಲಿ ಜಗತ್ಪ್ರಸಿಧ್ಧ ನೃತ್ಯಪಟುವಾಗಿದ್ದ ಪ್ರತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಠಳ ನೀಡಿದ ಹೆಗಡೆಯವರ ಔದಾರ್ಯವನ್ನು ತನ್ನ ಆತ್ಮಕಥೆಯಲ್ಲಿ ಪ್ರತಿಮಾ ಬೇಡಿ ಉಲ್ಲೇಖಿಸಿದ್ದಾರೆ.
______

Social Plugin