ತೇರದಾಳ ಪಟ್ಟಣದ ಪೋಲಿಸ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಕೈಕೊಂಡ ಸಾರ್ವಜನಿಕ ಗಣೇಶ ಉತ್ಸವ ಸಮೀತಿ ಶಾಂತಿ ಸಭೆಯನ್ನುದ್ದೇಶಿಸಿ ಸಿಪಿಐ ಜೆ.ಕರುಣೇಶಗೌಡ ಮಾತನಾಡಿದರು.
ಹಬ್ಬಗಳಿರುವುದು ಒಗ್ಗಟ್ಟಿನ ಭಾವ ಮೂಡಿಸಲು- ಸಿ.ಪಿ.ಐ.ಕರುಣೇಶಗೌಡ
ತೇರದಾಳ: ಈ ನಾಡಿನಲ್ಲಿ ಹಬ್ಬಗಳಿರುವುದು ಸಮಾಜದಲ್ಲಿ ಸಾಮರಸ್ಯ ಹಾಗೂ ಒಳ್ಳೆಯ ಸಂಸ್ಕಾರ ಮೂಡಿಸುವುದಕ್ಕಾಗಿ. ಈ ಹಬ್ಬಗಳು ಪರಸ್ಪರರಲ್ಲಿ ಒಳ್ಳೆಯ ಬಾಂಧವ್ಯ ಬೆಸೆದು, ಭಾವೈಕ್ಯದ ಭಾವ ಮೂಡಿಸುತ್ತವೆ. ಹಬ್ಬಗಳು ಭಾವೈಕ್ಯದ ಸಂಕೇತಗಳಾಗಿವೆ. ಈ ಹಬ್ಬಗಳಿರುವುದೇ ಪರಸ್ಪರರಲ್ಲಿ ಒಗ್ಗಟ್ಟಿನ ಭಾವ ಮೂಡಿಸಲು ಎಂದು ಸಿ.ಪಿ.ಐ. ಜೆ.ಕರುಣೇಶಗೌಡ ಹೇಳಿದರು.
ಪಟ್ಟಣದ ಪೋಲಿಸ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಕೈಕೊಂಡ ಸಾರ್ವಜನಿಕ ಗಣೇಶ ಉತ್ಸವ ಸಮೀತಿ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೋವಿಡ್ ಕಾರಣದಿಂದ ಇಡಿ ವಿಶ್ವವೇ ತಲ್ಲಣಗೊಂಡಿದೆ. ಸ್ವಲ್ಪವೂ ಎಡವಿದರೆ ಸಾಕು ಆಪತ್ತು ತಪ್ಪಿದ್ದಲ್ಲ. ಹೀಗಾಗಿ ನಾವೆಲ್ಲರೂ ಬಹಳ ಜಾಗೃತೆಯಿಂದ ಹೆಜ್ಜೆ ಇಡಬೇಕಾಗಿದೆ. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲಿಯೂ ಸಹ ಸಾರ್ವಜನಿಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಿರಲಿ ಎಂಬ ಕಾರಣದಿಂದ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಸಿ ಹಬ್ಬಹರಿದಿನಗಳನ್ನು ಆಚರಿಸಲು ಸರ್ಕಾರ ನಿರ್ದೇಶನ ನೀಡಿದ್ದು ಆ ಪ್ರಕಾರ ಎಲ್ಲರೂ ಬರುವ ಗಣೇಶ ಹಬ್ಬವನ್ನು ಸರಳರೀತಿಯಲ್ಲಿ ಆಚರಿಸಬೇಕೆಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಾದ ರಸ್ತೆ, ಗಲ್ಲಿ, ಓಣಿ, ಮೈದಾನಗಳಲ್ಲಿ ವಿಗ್ರಹನ್ನು ಪ್ರತಿಷ್ಟಾಪಿಸಲು ಅವಕಾಶವಿಲ್ಲ. ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಿ ಆಚರಿಸಬೇಕು. ಗಣೇಶ ವಿಗ್ರಹಗಳನ್ನು ಸಾರ್ವಜನಿಕ ನದಿ, ಕೆರೆ, ಕೊಳ, ಭಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡತಕ್ಕದ್ದಲ್ಲ. ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಹೊರಡಿಸತಕ್ಕದ್ದಲ್ಲ, ವಿಗ್ರಹವನ್ನು ಪ್ರತಿಷ್ಠಾಪಿಸಿದ ಸ್ಥಳಗಳನ್ನು ಕಡ್ಡಾಯವಾಗಿ ಸ್ಯಾನಿಟೈಸರ ಹಾಗೂ ಥರ್ಮಲ್ ಸ್ಕ್ರೀನಿಂಗ ಹಾಗೂ ಬರುವ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ ಧರಿಸಲು ಮತ್ತು ಆರು ಅಡಿ ಅಂತರ ಕಾಯ್ದುಕೊಳ್ಳಬೇಕೆಂದು ತಿಳಿಸಿದರು. ಕಾರಣ ಎಲ್ಲ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯಗಳು ಮೂಡುವಂತೆ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪತಹಶೀಲದಾರ ಎಸ್.ಬಿ.ಮಾಯನ್ನವರ, ಮುಖ್ಯಾದಿಕಾರಿ ಅಶೋಕ ಗುಡಿಮನಿ, ಪಿ.ಎಸ್.ಐ. ಆರ್.ವೈ. ಬೀಳಗಿ ಹಾಗೂ ಎಸ್.ಕೆ.ಸೂರ್ಯವಂಶಿ, ಇತರೆ ಪೋಲಿಸ ಸಿಬ್ಬಂದಿ ಹಾಗೂ ವಿವಿಧ ಗಣೇಶ ಮಿತ್ರ ಮಂಡಳಿ ಯುವಕರು ಹಾಗೂ ಪಟ್ಟಣದ ಪ್ರಮುಖ ಹಿರಿಯರು ಹಾಜರಿದ್ದರು.
--------------------------



Social Plugin