^^^^^^^^^^^^^^^^^^^^^^^^^^^^^^^^^^^^^^^^^^
ಲೇಖನ : ಶ್ರೀ ಗಣೇಶ ಕಾಸರಗೋಡ- ಹಿರಿಯ ಸಿನಿಮಾ ಪತ್ರಕರ್ತರು.
^^^^^^^^^^^^^^^^^^^^^^^^^^^^^^^^^^^^^^^^^
'ಬಂಗಾರದ ಮನುಷ್ಯ' ಸಿನಿಮಾ ಮಂಗಳೂರಿನ 'ಜ್ಯೋತಿ' ಚಿತ್ರಮಂದಿರದಲ್ಲಿ ಶತದಿನ ಪ್ರದರ್ಶನ ಕಂಡಾಗ ನಾವೆಲ್ಲಾ ಸ್ಕೂಲು ಫ್ರೆಂಡ್ಸ್ ಗುಂಪು ಕಟ್ಟಿಕೊಂಡು ಕಾಸರಗೋಡಿನಿಂದ ಮಂಗಳೂರಿಗೆ ಹೋಗಿದ್ದೆವು. ಅಂದು ಅಲ್ಲಿ ಆ ಸಿನಿಮಾದ ಶತದಿನ ಸಮಾರಂಭ ನಡೆಯುವುದಿತ್ತು. ವಿಶೇಷವೆಂದರೆ 'ಜ್ಯೋತಿ' ಟಾಕೀಸಿಗೆ ರಾಜಕುಮಾರ್-ಭಾರತಿ ಮತ್ತು ಚಿತ್ರತಂಡ ಭೇಟಿ ಕೊಡುವ ಕಾರ್ಯಕ್ರಮವದು. ಅಪ್ಪಟ ಅಭಿಮಾನಿಗಳಲ್ಲವಾದರೂ ಕುತೂಹಲಕ್ಕಾಗಿ ನಾವೆಲ್ಲಾ 'ಜ್ಯೋತಿ' ಟಾಕೀಸಿನ ಹೊರಗಡೆಯ ರಸ್ತೆಯಲ್ಲಿ ಅವರ ಬಸ್ ಬರುವುದಕ್ಕಾಗಿ ಕಾದಿದ್ದೆವು. ಬಸ್ ಬಂತು. ಎಲ್ಲರೂ ಮುಗಿಬಿದ್ದರು. ನಾನು ಅಷ್ಟೊಂದು ಜನಗಳ ನಡುವೆ ದಾರಿ ಮಾಡಿಕೊಂಡು ರಾಜಕುಮಾರನ್ನು ಭೇಟಿಯಾಗಿ 'ನಮಸ್ಕಾರ ಸಾರ್' ಅಂದೆ! ಭಾರತಿ ನಕ್ಕರು. ನಮ್ಮ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಅದೇನೋ ಧನ್ಯತಾ ಭಾವ! ಅದೇ ಮೊದಲು ನಾನು ರಾಜಕುಮಾರ್ ಮತ್ತು ಭಾರತಿಯವರನ್ನು ಭೇಟಿಯಾದದ್ದು. ನಂತರದ ದಿನಗಳಲ್ಲಿ ಸಿನಿಮಾ ಪತ್ರಕರ್ತನಾದ ಮೇಲೆ ಇಬ್ಬರನ್ನೂ ಆಗೀಗ ಭೇಟಿಯಾದದ್ದಿದೆ...
'ಸುದ್ದಿಟಿವಿ'ಗಾಗಿ ಒಮ್ಮೆ ಭಾರತಿಯವರನ್ನು ಭೇಟಿಯಾಗಿದ್ದೆ. ಜಯನಗರದ ಅವರ ಮನೆಯಲ್ಲಿ ಭೇಟಿಯಾದಾಗ ಅವರು ಹೇಳಿದ ದೃಢವಾದ ಮಾತನ್ನು ನಾನು ಮರೆಯುವಂತಿಲ್ಲ : 'ಯಾವ ಕಾರಣಕ್ಕೂ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದ ಅಂಗಳದಲ್ಲಿ ಸ್ಥಾಪಿಸಲು ಬಿಡೋದಿಲ್ಲ. ಅದೇನಿದ್ದರೂ ಮೈಸೂರಿನಲ್ಲೇ...' - ಎಂದು ಹೇಳಿದ್ದಲ್ಲದೇ ಆ ಸ್ಮಾರಕದ ನೀಲನಕ್ಷೆಯನ್ನು ನನಗೆ ತೋರಿಸಿದ್ದರು.
ನಿಜಕ್ಕೂ ಅದ್ಭುತ ಕಲ್ಪನೆ ಭಾರತಿಯವರದ್ದು. ಸ್ಮಾರಕವೆಂದರೆ ಬರೀ ಶ್ರದ್ಧಾ ಕೇಂದ್ರವಲ್ಲ. ಅದೊಂದು ಮಿನಿ ಚಿತ್ರಲೋಕ! ಲೈಬ್ರರಿ, ಪ್ರೊಜೆಕ್ಷನ್ ಹಾಲ್, ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹದ ವಿಶ್ವರೂಪ, ಸೊಗಸಾದ ಮ್ಯೂಸಿಯಂ, ಅಷ್ಟೇ ಆಕರ್ಷಕವಾದ ಗಾರ್ಡನ್, ಸೆಮಿನಾರ್ ಹಾಲ್...ಒಂದಾ, ಎರಡಾ? ಭಾರತಿಯವರ ಅಷ್ಟೂ ಕಲ್ಪನೆ ಸಾಕಾರವಾದರೆ ಅದೊಂದು ಜಾಗತಿಕ ಆಕರ್ಷಣೆಯ ಕೇಂದ್ರವಾಗುವುದರಲ್ಲಿ ಅನುಮಾನವಿಲ್ಲ...
ಹಿಂದೊಮ್ಮೆ ಗೆಳೆಯ ರವಿಬೆಳಗೆರೆಗಾಗಿ ವಿಷ್ಣುವರ್ಧನ್ ಸಂದರ್ಶನಕ್ಕೆ ಅವರ ಮನೆಯಲ್ಲೇ ವ್ಯವಸ್ಥೆ ಮಾಡಿಸಿಕೊಂಡಿದ್ದೆ. ಆಗ ನನಗೆ ಸಹಾಯ ಮಾಡಿದವರು ಇದೇ 'ಆರ್ಯ' ಅನಿರುದ್ಧ. ರವಿಯ ಅನಿರೀಕ್ಷಿತ ಸಾವಿನ ಮೊದಲೊಮ್ಮೆ ಭಾರತಿಯವರನ್ನು ಮೀಟ್ ಮಾಡ್ಬೇಕು ಎನ್ನುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದರು. ನಾನು ವ್ಯವಸ್ಥೆ ಮಾಡಲು ಹೊರಟಿದ್ದೆ. ಆದರೆ ಅದಕ್ಕೂ ಮೊದಲು ರವಿಬೆಳಗೆರೆ ಅವಸರದಿಂದ ಹೊರಟು ಬಿಟ್ಟರು. ಒಂದು ವೇಳೆ ಈ ಭೇಟಿ ಸಾಧ್ಯವಾಗಿದ್ದಿದ್ದರೆ ಭಾರತಿಯವರ ಬದುಕು ರವಿಬೆಳಗೆರೆಯವರ ಅಕ್ಷರಗಳಲ್ಲಿ ದಾಖಲಾಗುತ್ತಿತ್ತು! 'ಭಾರತಿಯವರ ಬಗ್ಗೆ ನಾನು ಬರೆಯುತ್ತೇನೆ, ನೀವು ಸಾಕ್ಷ್ಯಚಿತ್ರ ಮಾಡಿ' ಎನ್ನುವುದು ರವಿಯ ಕೊನೆಯಾಸೆಯಾಗಿತ್ತು...
ಆದರೇನಂತೆ? ರವಿಬೆಳಗೆರೆಯವರ ಬದಲು ಅನಿರುದ್ಧ ಈ ಸಾಹಸಕ್ಕಿಳಿದಿದ್ದಾರೆ : ಈ ಸಾಹಸದ ಹೆಸರು : 'ಬಾಳೇ ಬಂಗಾರ'. ಪದ್ಮಶ್ರೀ ಪುರಸ್ಕೃತ ಕಲಾವಿದೆ ಭಾರತಿ ವಿಷ್ಣುವರ್ಧನ್ ಬಗೆಗಿನ ಈ ಸಾಕ್ಷ್ಯಚಿತ್ರ 'ಕೀರ್ತಿ ಇನೋವೇಷನ್ಸ್' ಅರ್ಪಣೆ. ಸಂಕಲ್ಪ, ಸಂಶೋಧನೆ, ಲೇಖನ, ನಿರೂಪಣೆ ಮತ್ತು ನಿರ್ದೇಶನದ ಹೊಣೆಯನ್ನು ಸ್ವತಃ ಅನಿರುದ್ಧ ವಹಿಸಿಕೊಂಡಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ನಂತರವಷ್ಟೇ ಯಶಸ್ಸಿನ ರುಚಿ ಕಂಡಿರುವ ಅನಿರುದ್ಧ ಹೊಸ ಹುರುಪಿನೊಂದಿಗೆ ಶುರು ಹಚ್ಚಿಕೊಂಡಿರುವ ಈ ಪ್ರಾಜೆಕ್ಟ್ ಅವರ ಬಹುದಿನಗಳ ಕನಸು. ಈ ಕನಸಿಗೆ ಸಾಥ್ ನೀಡಲು ಮುಂದೆ ಬಂದಿದ್ದಾರೆ ಸಂಗೀತ ನಿರ್ದೇಶಕ ಗುರುಕಿರಣ್. ರವಿಬೆಳಗೆರೆ ಬದುಕಿದ್ದಿದ್ದರೆ ಈ ಪ್ರಾಜೆಕ್ಟ್ ಅವರ ಪಾಲಾಗುತ್ತಿತ್ತೇನೋ. ಈಗ ಭಾರತಿ ವಿಷ್ಣುವರ್ಧನ್ ಅಳಿಯ ಅನಿರುದ್ಧ ಮುಂದೆ ಬಂದಿದ್ದಾರೆ. ಸದಾಶಯದ ಈ ಪ್ರಾಜೆಕ್ಟ್'ಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ...

Social Plugin