ತೇರದಾಳದ ದೇವರಾಜ ನಗರದ ವಾರ್ಡ ನಂ 6ರಲ್ಲಿನ ಸರ್ಕಾರಿ ಶಾಲೆಯ ಹತ್ತಿರವಿರುವ ಪುರಸಭೆ ನೀರಿನ ಟ್ಯಾಂಕ ಜಾಗೆಯನ್ನು ಅತೀಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿದರು.

ಪುರಸಭೆ ಜಾಗೆ ಅತೀಕ್ರಮಣ, ಸಾರ್ವಜನಿಕರಿಂದ ಪುರಸಭೆಗೆ ಮುತ್ತಿಗೆ

ತೇರದಾಳ : ಪಟ್ಟಣದ ದೇವರಾಜ ನಗರದ ವಾರ್ಡ್ ನಂ 6ರಲ್ಲಿನ ಸರಕಾರಿ ಕನ್ನಡ ಶಾಲೆಯ ಹತ್ತಿರದ ಪುರಸಭೆ ಜಾಗವನ್ನು ಶೌಕತ್ ಮಹಮ್ಮದಸಾಬ ತಾಂಬೋಳಿ ಎಂಬುವವರು ಅತೀಕ್ರಮಣ ಮಾಡಿದ್ದಾರೆ. ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರಿಗೆ ಮನವಿ ಸಲ್ಲಿಸಿದರು.

  ಮೊದಲಿನಿಂದಲೂ ಸಾರ್ವಜನಿಕರ ನೀರಿನ ಸೌಕರ್ಯಗೋಸ್ಕರ ಈ ನೀರಿನ ಟ್ಯಾಂಕನ್ನು ನಿರ್ಮಿಸಲಾಗಿತ್ತು. ದೇವರಾಜ ನಗರದ ಎಲ್ಲ ನಿವಾಸಿಗಳು ಈ ನೀರಿನ ಟ್ಯಾಂಕಿನಿಂದ ನೀರನ್ನು ಬಳಸುತ್ತಿದ್ದರು. ಶೌಕತ್ ಮಹಮ್ಮದಸಾಬ ತಾಂಬೋಳಿ ಎಂಬುವವರು ಈ ಜಾಗೆಯನ್ನು ಅತೀಕ್ರಮಣ ಮಾಡಿಕೊಂಡು ಕಂಪೌಂಡ ಗೋಡೆಯನ್ನು ನಿರ್ಮಾಣ ಮಾಡಿ ಈ ಟ್ಯಾಂಕನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅತೀಕ್ರಮಣ ಜಾಗೆಯನ್ನು ತೆರವುಗೊಳಿಸುವಂತೆ ಸಾಕಷ್ಟು ಬಾರಿ ಪುರಸಭೆಗೆ ಲಿಖಿತವಾಗಿ ಮನಿವಯನ್ನು ಕೊಟ್ಟಿದ್ದರು ಯಾವುದೇ ಪ್ರಯೋಜನವಾಗಿಲ್ಲವೆಂದು ಅಲ್ಲಿಯ ನಿವಾಸಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

   ಸದರಿ ನೀರಿನ ಟ್ಯಾಂಕನ್ನು ಪುರಸಭೆ ವ್ಯಾಪ್ತಿಗೆ ಒಳಪಡಿಸಿಕೊಂಡು ಸಾರ್ವಜನಿಕರಿಗೆ ನೀರಿನ ಅನುಕೂಲ ಮಾಡಿಕೊಡಬೇಕು. ವಾರ್ಡ ಸದಸ್ಯೆ ನಸ್ರೀನಬಾನು ನಗಾರ್ಜಿ ಅವರಿಗೆ ಸಾಕಷ್ಟು ಬಾರಿ ಹೇಳಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹಾಗೂ ಅವರು ನಾಪತ್ತೆಯಾಗಿದ್ದಾರೆ, ನಮ್ಮ ಸದಸ್ಯರನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. 

  ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ ಸ್ಥಳವನ್ನು ಪರಿಶೀಲನೆ ಮಾಡಿ ಪುರಸಭೆ ಆಸ್ತಿಯನ್ನು ಅತೀಕ್ರಮಣ ಮಾಡಿದ್ದರೆ ಅದನ್ನು ವಶ ಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.