ಜನರನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಪಡೆದಿರಿ. ಈಗ ಕೊಡುವ ಸಮಯ....,....

ಮತದಾರರನ್ನು ಉಪಯೋಗಿಸಿಕೊಂಡು ಎಂಎಲ್ಎ, ಮಂತ್ರಿಗಳಾದಿರಿ, ದಯವಿಟ್ಟು
ಜನರ ಕಷ್ಟಕ್ಕೆ ಹೃದಯಪೂರ್ವಕವಾಗಿ ಸಹಾಯ ಮಾಡಿ. ಸ್ಟಂಟ್ ಮಾಡಬೇಡಿ.

ಭಕ್ತಾದಿಗಳನ್ನು ಉಪಯೋಗಿಸಿಕೊಂಡು ಮಠಾಧೀಶರಾದಿರಿ, ದಯವಿಟ್ಟು,
ಹಣ, ಜಾತಿ, ವೈಭೋಗದ ಹಿಂದೆ ಹೋಗದೆ ತ್ಯಾಗ ಮನೋಭಾವದಿಂದ,‌ಜನರ ಸೇವೆ ಮಾಡಿ, 
ರಾಜಕೀಯ ಮಾಡಬೇಡಿ. 

ಓದುಗನನ್ನು ಉಪಯೋಗಿಸಿಕೊಂಡು ದೊಡ್ಡ ಸಾಹಿತಿ, ಲೇಖಕರಾದಿರಿ,‌ ಬಡತನ, ಶೊಷಣೆ, ಅಜ್ಞಾನವನ್ನು ವರ್ಣಿಸಿದಿರಿ, ದಯವಿಟ್ಟು 
ಈಗ ಅವರಿಗಾಗಿ ನಿಜದ ಧ್ವನಿ ಎತ್ತಿ, ಸ್ವಾರ್ಥಿಗಳಾಗಬೇಡಿ.

ಅಭಿಮಾನಿಗಳನ್ನು ಉಪಯೋಗಿಸಿಕೊಂಡು ಪ್ರಖ್ಯಾತ, ಶ್ರೀಮಂತ ನಟರಾದಿರಿ, ದಯವಿಟ್ಟು
ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗಿ, ಕಪಟ ನಾಟಕ ಮಾಡಬೇಡಿ.

ಕೃಷಿ ಭೂಮಿಯನ್ನು ಉಪಯೋಗಿಸಿಕೊಂಡು ಕೋಟ್ಯಾಧಿಪತಿ DEVELOPER ಗಳಾದಿರಿ. ದಯವಿಟ್ಟು
ಈಗ ಅನ್ನಕ್ಕಾಗಿ ಪರಿತಪ್ಪಿಸುತ್ತಿರುವ ಮಕ್ಕಳಿಗೆ ಆಶ್ರಯದಾತರಾಗಿ, ದುರಹಂಕಾರಿಗಳಾಗಬೇಡಿ.

ವೀಕ್ಷಕರನ್ನು ಉಪಯೋಗಿಸಿಕೊಂಡು ಟಿಆರ್ಪಿ ಹೆಚ್ಚಿಸಿಕೊಂಡು ಅಧಿಕ ಜಾಹೀರಾತು ಗಳಿಸಿ ದುಡ್ಡು ಮಾಡಿಕೊಂಡಿರಿ. ದಯವಿಟ್ಟು
ವಿಕೃತ ಕಾರ್ಯಕ್ರಮ ಮಾಡದೆ ಒಳ್ಳೆಯ ವಾಸ್ತವಿಕ ಸುದ್ದಿ ಪ್ರಸಾರ ಮಾಡಿ.

ಕಾರ್ಮಿಕರ ಶ್ರಮ ಉಪಯೋಗಿಸಿಕೊಂಡು ಬೃಹತ್ ಉದ್ಯಮಿಗಳಾದಿರಿ. ದಯವಿಟ್ಟು
ಮದುವೆ, ಪಾರ್ಟಿಯಲ್ಲಿ ಶ್ರೀಮಂತಿಕೆ ಪ್ರದರ್ಶಿಸದೆ ಇಲ್ಲದವರಿಗೆ ದಾನಮಾಡಿ.ಕ್ರೂರಿಗಳಾಗಬೇಡಿ.

ಸಾರ್ವಜನಿಕರ ತೆರಿಗೆ ಹಣದಿಂದಲೇ ಸಂಬಳ ಪಡೆಯುವ ಅಧಿಕಾರಿಗಳಾದಿರಿ. ದಯವಿಟ್ಟು
ಅವರಿಗಾಗಿ ಬದುಕನ್ನು ಮುಡುಪಿಡಿ. ಜನರನ್ನು ಗೋಳಾಡಿಸುವ ಭ್ರಷ್ಟರಾಗಬೇಡಿ.

ರೈತರು, ಕಾರ್ಮಿಕರು, ಮಹಿಳೆಯರು, ದಲಿತರನ್ನು, ಉಪಯೋಗಿಸಿಕೊಂಡು ನಾಯಕರಾದಿರಿ. ದಯವಿಟ್ಟು,
ಈಗ ಅವರ ಕಣ್ಣೀರೊರೆಸುವ ಕೈಗಳಾಗಿ, ಅಮಾನವೀಯರಾಗಬೇಡಿ.

ಕೋಟ್ಯಾಂತರ ಜನ ಒಟ್ಟಿಗೇ ಬದಲಾಗುವುದು ಕಷ್ಟಸಾಧ್ಯ. ಆದರೆ,...,.....

ನಾಯಕರುಗಳು ಬದಲಾದರೆ, ಈ ಸಮಾಜದ ಬದಲಾವಣೆ ಸುಲಭವಾಗುತ್ತದೆ.

ಜನರ ಆಕ್ರೋಶ, ಅಸಮಾಧಾನ ಭುಗಿಲೇಳುವ ಮೊದಲು ಎಚ್ಚೆತ್ತುಕೊಳ್ಳಿ,

ಸರಳ, ಸುಂದರ, ಸಮ ಸಮಾಜ ನಮ್ಮದಾಗಿಸಿಕೊಳ್ಳೋಣ.
*******************†********************
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ : ವಿವೇಕಾನಂದ. ಹೆಚ್.ಕೆ.