ಜಮಖಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಮ್ ನ್ಯಾಮಗೌಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರನ್ನು ಜಗದ್ಗುರುಗಳ ಸಮ್ಮುಖದಲ್ಲಿ ಸತ್ಕರಿಸಿದರು.
ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ಭಾಗ್ಯಶ್ರೀ ಕಾಡಶೆಟ್ಟಿ : ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ
ತೇರದಾಳ : ಕಳೆದ ಜುಲೈ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಕುರುಹಿನಶೆಟ್ಟಿ ನೀಲಕಂಠೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರಿ ಭಾಗ್ಯಶ್ರೀ ಬಸಪ್ಪ ಕಾಡಶೆಟ್ಟಿ 625 ಕ್ಕೆ 619 ಅಂಕಗಳನ್ನು ಪಡೆದು ರಾಜ್ಯಕ್ಕೆ 6 ನೇ ರ್ಯಾಂಕ್ ಹಾಗೂ ರಬಕವಿ ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದು ಅಲ್ಲಮ ನಗರಿಗೆ ವಿಶೇಷ ಮೆರಗನ್ನು ತಂದಿದ್ದಾಳೆ.
ವಿದ್ಯಾರ್ಥಿಯ ಈ ಅಪ್ರತಿಮ ಸಾಧನೆಯನ್ನು ಕೊಂಡಾಡಿದ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಶಿವಶಂಕರ ಮಹಾಸ್ವಾಮಿಗಳು, ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿ ಅಧ್ಯಯನದಲ್ಲಿ ಅಳವಡಿಸಿಕೊಂಡ ಎಕಾಗ್ರತೆ ಇಂದು ಈ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಗುರು ಮಾರ್ಗದರ್ಶನದಲ್ಲಿ ವಿದ್ಯೆಗೆ ವಿಧೆಯರಾಗಿ ಸಾಗಿದ್ದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವೆಂದು ಸಾಧನೆ ತೋರಿದ ವಿದ್ಯಾರ್ಥಿ ಬಳಗಕ್ಕೆ ಆಶಿರ್ವದಿಸಿದರು.
ವಿದ್ಯಾರ್ಥಿನಿಯರ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ : ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿತಂದ ವಿದ್ಯಾರ್ಥಿನಿ ಭಾಗ್ಯಶ್ರೀ ಕಾಡಶೆಟ್ಟಿ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದ ಐಶ್ವರ್ಯ ತೇಗೂರ ವಿದ್ಯಾರ್ಥಿಗಳ ರಾಯಬಾಗ ತಾಲೂಕಿನ ಪಾಲಭಾಂವಿ ಗ್ರಾಮದ ಮನೆಗೆ ತಂಡದೊಂದಿಗೆ ತೆರಳಿದ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಮ್ ನ್ಯಾಮಗೌಡ ವಿದ್ಯಾರ್ಥಿನಿಯರನ್ನು ಜಗದ್ಗುರುಗಳ ಸಮ್ಮುಖದಲ್ಲಿ ಸತ್ಕರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ನಗರದ ಪ್ರತಿಷ್ಠಿತ ಶ್ರೀ ಕುರುಹಿನಶೆಟ್ಟಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿ ಅಂಕಗಳನ್ನು ಪಡೆಯುವದರ ಮೂಲಕ ನಮ್ಮ ರಾಜ್ಯಕ್ಕೆ ಆರನೇಯ ರ್ಯಾಂಕ್, ರಬಕವಿ ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದು ನಮ್ಮ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದಿರುವುದಕ್ಕೆ ಅಭಿನಂದಿಸಿದ ಅವರು ಈ ಸಾಧನೆಯನ್ನು ತೋರಲು ಪ್ರೇರಕವಾಗಿರುವ ಶಿಕ್ಷಕ ಸಿಬ್ಬಂದಿ ಈ ಶಾಲೆಯೂ ಕೂಡ ನಮ್ಮ ಭಾಗದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿರುವುದನ್ನು ನಿರೂಪಿಸಿದ್ದಾರೆಯಂದು ಬಣ್ಣಿಸಿದರು.
ಮುಖ್ಯೋಪಾಧ್ಯಾಯ ಶಂಕರ ತಿಗಣಿ ಮಾತನಾಡಿ ನಮ್ಮ ಶಾಲೆಯ ಈ ಸಾಧನೆಗೆ ಮೂಲ ಪ್ರೇರಣೆ ನಮ್ಮ ಪೂಜ್ಯ ಅಪ್ಪಾಜಿಯವರು, ಇವರ ಆಶಿರ್ವಾದದಿಂದ ನಮ್ಮ ಶಿಕ್ಷಕರು ಹಗಲಿರುಳು ಶ್ರಮಿಸಿದ ಫಲಶೃತಿಯಾಗಿ ಮಕ್ಕಳು ಈ ಅಮೋಘ ಸಾಧನೆಯನ್ನು ಮಾಡಲು ಸಾಧ್ಯವಾಗಿದ್ದು, ಈ ಸಾಧನೆಯನ್ನು ಗುರಿಯಾಗಿಟ್ಟುಕೊಂಡು ಮುಂದಿನ ವರ್ಷ ಇದಕ್ಕಿಂತಲೂ ಉತ್ತುಂಗದ ಸಾಧನೆಯ ಗುರಿಯನ್ನು ಪ್ರಸ್ತಾಪಿಸಿದರು.
ಈ ಸಂಧರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಎಸ್ ಬಿ ಬುರ್ಲಿ, ಡಿ.ಬಿ ಜಾಯಗೊಂಡ ಸಿಆರ್‍ಪಿಗಳಾದ ಪ್ರಶಾಂತ ಹೊಸಮನಿ, ಎಮ್ ಎಮ್ ಜಂಗಲಿ, ಎಮ್.ಎಸ್ ಗಡೆನ್ನವರ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Social Plugin