◆ ಸರಿಸಾಟಿ ಇಲ್ಲದ ದೃಶ್ಯಶಿಲ್ಪಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಏಕಮೇವಾದ್ವಿತೀಯ : ವಿ.ಕೆ.ಮೂರ್ತಿ
^^^^^^^^^^^^^^^^^^^^^^^^^^^^^^^^^^^^^^^^^^
ಲೇಖನ : ಶ್ರೀ ಗಣೇಶ ಕಾಸರಗೋಡು :ಹಿರಿಯ ಸಿನಿಮಾ ಪತ್ರಕರ್ತರು ● ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು ●
^^^^^^^^^^^^^^^^^^^^^^^^^^^^^^^^^^^^^^^^^
ಅಚಾನಕವಾಗಿ ನಡೆಯುವ ಒಂದು ಘಟನೆ ವ್ಯಕ್ತಿಯೊಬ್ಬನ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ವಿ.ಕೆ.ಮೂರ್ತಿಯವರ ವೃತ್ತಿ ಬದುಕು! ಅದು ನಡೆದದ್ದು ಹೀಗೆ : ಇವರು ಉದ್ಯೋಗ ಅರಸಿ ಮುಂಬೈಗೆ ಹೋದ ಮೇಲೆ ಖ್ಯಾತ ನಿರ್ಮಾಪಕರೂ ಆಗಿರುವ ನಿರ್ದೇಶಕ, ನಟ ಗುರುದತ್ ಅವರ ಸಿನಿಮಾಗಳಿಗೆ ಸಹಾಯಕ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದರು. ಚಿತ್ರದ ಹೆಸರು : 'ಬಾಜಿ'. ಇದು ಗುರುದತ್ ನಿರ್ದೇಶನದ ಪ್ರಥಮ ಚಿತ್ರ. ಈ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ 'ಲಾಂಗ್ ಶಾಟ್'ನಲ್ಲಿ ಚಲಿಸುವ ನಾಯಕನ ಕನ್ನಡಿಯ ಪ್ರತಿಬಿಂಬ ಬೇಕು' - ಅಂದರು ಗುರುದತ್. ಮುಖ್ಯ ಛಾಯಾಗ್ರಾಹಕರು ಗುರುದತ್ ಅವರ ಈ ವಿನಂತಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿಬಿಟ್ಟರು! ನಿರ್ದೇಶಕರಿಗೆ ಅವಮಾನವಾಗುವ ಈ ಸನ್ನಿವೇಶದಲ್ಲಿ ತಕ್ಷಣವೇ ಮುಂದೆ ಬಂದವರು ಅಲ್ಲೇ ಜೊತೆಗಿದ್ದ ಚೂಟಿ ಮೂರ್ತಿ : 'ಸರ್, ನಾನು ಮಾಡ್ತೀನಿ, ಒಂದು ಅವಕಾಶ ಕೊಟ್ಟು ನೋಡಿ ಪ್ಲೀಸ್...' - ಅಂತಂದು ಬಿಟ್ಟರು ಮೂರ್ತಿ! ಅಷ್ಟೇ. ಆ ಸನ್ನಿವೇಶದ ಚಿತ್ರೀಕರಣ ಮಾಡಲು ಗುರುದತ್ ಅನುಮತಿ ನೀಡಿದರು. ಯಾವ ಅಂಜಿಕೆಯೂ ಇಲ್ಲದೇ ಮೂರ್ತಿಯವರು ಅತ್ಯಂತ ಸಲೀಸಾಗಿ ಒಂದೇ ಟೇಕ್'ನಲ್ಲಿ ಚಿತ್ರೀಕರಿಸಿದರು. ಸೆಟ್'ನಲ್ಲಿದ್ದ ಅಷ್ಟೂ ಮಂದಿ ಕ್ಲಾಪ್ ಹಾಕಿ ಮೂರ್ತಿಯವರನ್ನು ಅಭಿನಂದಿಸಿದರು! ಗುರುದತ್ ಫುಲ್ ಖುಷ್ : 'ನನ್ನ ಮುಂದಿನ ಚಿತ್ರಕ್ಕೆ ನೀನೇ ಪ್ರಧಾನ ಸ್ವತಂತ್ರ ಛಾಯಾಗ್ರಾಹಕ...' -ಎಂದು ಅಲ್ಲೇ, ಆ ಕ್ಷಣದಲ್ಲೇ ಅನೌನ್ಸ್ ಮಾಡಿಬಿಟ್ಟರು ಗುರುದತ್! ವಿ.ಕೆ.ಮೂರ್ತಿ ಎಂಬ ಹೆಸರಿನ ಈ ವ್ಯಕ್ತಿ ಮುಂದೆ ಭಾರತೀಯ ಚಿತ್ರರಂಗದ ಮಹಾನ್ ಛಾಯಾಗ್ರಾಹಕರಾಗಿ ಬೆಳೆಯಲು ಸಾಧ್ಯವಾದ ಅಪರೂಪದ ಘಟನೆಯಿದು. ಛಾಯಾಗ್ರಹಣದ ಪ್ರಾಯೋಗಿಕ ತರಬೇತಿಗಾಗಿ ಮುಂಬೈ ಸೇರಿಕೊಂಡ ಮೂರ್ತಿ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ್ದು ಹೀಗೆ!
ಇಂಥಾ ವಿ.ಕೆ.ಮೂರ್ತಿ ಜನಿಸಿದ್ದು 1922ರ ನವಂಬರ್ 26ರಂದು ; ಮೈಸೂರಿನಲ್ಲಿ. ಇವರ ಪೂರ್ತಿ ಹೆಸರು : ವೆಂಕಟರಾಮಾ ಪಂಡಿತ್ ಕೃಷ್ಣಮೂರ್ತಿ. ತಂದೆ ವೆಂಕಟರಾಮಾ ಪಂಡಿತ್ ಸರ್ಕಾರಿ ಆಸ್ಪತ್ರೆಯ ಆಯುರ್ವೇದ ವೈದ್ಯರು. ತಾಯಿ ನಾಗಮ್ಮ, ಹೌಸ್ ವೈಫ್. ಈ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಮೂರ್ತಿಯವರಿಗೆ ಎಲ್ಲರಿಂದಲೂ ಗುರುತಿಸಿಕೊಳ್ಳಬೇಕೆಂಬ ಬಯಕೆ. ಹೀಗಾಗಿ ಚಿತ್ರನಟರಾಗುವ ಹಂಬಲ! ಆದರೆ ಒಮ್ಮೆ ಕನ್ನಡಿ ನೋಡಿಕೊಂಡ ಮೂರ್ತಿ 'ಇದು ಅಸಾಧ್ಯ' ಎಂಬ ತೀರ್ಮಾನಕ್ಕೆ ಬಂದರು! ನಂತರ ಇವರು ಪಿಟೀಲು ಕಲಿಯಲು ಹೊರಟರು. ಆದರೆ ತಾಳ್ಮೆಯಿರಲಿಲ್ಲ. ಕೊನೆಗೆ ಕ್ಯಾಮೆರಾ ಕೆಲಸ ಕಲಿಯಲೆಂದು ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸೇರಿಕೊಂಡರು. ಇಲ್ಲಿನ ಪ್ರಾಯೋಗಿಕ ಅಭ್ಯಾಸಕ್ಕಾಗಿ ಮುಂಬೈಗೆ ಹೋದ ಮೂರ್ತಿ ಅಲ್ಲಿ ಗುರುದತ್ ಜೊತೆ ಸೇರಿಕೊಂಡರು. ಅದೊಂದು ಇವರ ಪಾಲಿನ ಭದ್ರ ಬೆಸುಗೆಯಾಯಿತು. ಮುಂದೆ ಗುರುದತ್ ಅವರ ಎಲ್ಲಾ ಚಿತ್ರಗಳಿಗೆ ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು ಮತ್ತು ಇದಕ್ಕಾಗಿಯೇ ಫಾಲ್ಕೆ ಪ್ರಶಸ್ತಿ ಪಡೆದದ್ದು ಈಗ ಇತಿಹಾಸ! ಕನ್ನಡಕ್ಕೆ ಎರಡು ಫಾಲ್ಕೆ ಪ್ರಶಸ್ತಿ ಬಂದುವು : ಮೊದಲ ಫಾಲ್ಕೆ ಬಂದದ್ದು ಡಾ|ರಾಜಕುಮಾರ್ ಅವರಿಗೆ 1995ರಲ್ಲಿ. ಮತ್ತೊಂದು ಫಾಲ್ಕೆ ಬಂದದ್ದು ವಿ.ಕೆ.ಮೂರ್ತಿಯವರಿಗೆ 2010ರಲ್ಲಿ. ಆದರೆ ಇದು 2008ರ ಸಾಲಿನ ಫಾಲ್ಕೆ ಪ್ರಶಸ್ತಿ!
ನಿಮಗೆ ಗೊತ್ತೇ? ಇವರ ವೃತ್ತಿಯ ಗುರು ಗುರುದತ್ ಅವರಿಗೆ ಆತ್ಮಹತ್ಯಾ ಫೋಬಿಯಾ ಇತ್ತಂತೆ! ಈ ಹಿಂದೆ ನಾಲ್ಕಾರು ಸಲ ಆತ್ಮಹತ್ಯೆಯ ಪ್ರಯತ್ನ ಪಟ್ಟದ್ದೂ ಉಂಟಂತೆ. ಆಗಲೆಲ್ಲಾ ಗುರುದತ್ ಅವರನ್ನು ಬದುಕಿಸಿದ್ದು ಇದೇ ಮೂರ್ತಿಗಳು! ಅವರನ್ನು ಬದುಕಿಸಿದಂತೆಯೇ ಅವರ ಸಿನೆಮಾವನ್ನೂ ಬದುಕಿಸಿದ್ದು ಮತ್ತಿದೇ ಮೂರ್ತಿಗಳು ಎನ್ನುವುದಕ್ಕೆ ಸಾಕ್ಷಿ ಇದೆ! 1960ರಲ್ಲಿ ತೆರೆಕಂಡ 'ಕಾಗಜ್ ಕೆ ಫೂಲ್' ಉದ್ಯಮದ ದೃಷ್ಟಿಯಲ್ಲಿ ದೊಡ್ಡ ಫ್ಲಾಪ್ ಸಿನೆಮಾ. ಈ ಸೋಲಿನಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಂಗಾಲಾದ ಗುರುದತ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ! ಆಗ ಇದನ್ನು ತಪ್ಪಿಸಿದ್ದು ಮೂರ್ತಿಗಳು. ನಂತರದ ದಿನಗಳಲ್ಲಿ ಇದೇ ಸಿನೆಮಾ ಮರು ತೆರೆಕಂಡಾಗ ಹೊಸ ಪೀಳಿಗೆಯ ಪ್ರೇಕ್ಷಕರು ಈ ಚಿತ್ರಕ್ಕೆ 'ಕ್ಲಾಸಿಕ್ ಸಿನೆಮಾ' ಎಂಬ ಲೇಬಲ್ ನೀಡಿ ಗೌರವಿಸಿತು! ಆಗ ತಮ್ಮನ್ನು ಬದುಕಿಸಿದ್ದಕ್ಕೆ ಗುರುದತ್ ಸಾಹೇಬರು ಮೂರ್ತಿಯವರಿಗೆ ಥ್ಯಾಂಕ್ಸ್ ಹೇಳಿದ ಕಥೆಯನ್ನು ಸ್ವತಃ ಮೂರ್ತಿಯವರ ಮಾತಲ್ಲೇ ನೀವು ಕೇಳಬೇಕು! ಈಗ ಈ ಚಿತ್ರವನ್ನು ಸಾರ್ವಕಾಲಿಕ ಶ್ರೇಷ್ಠ ಚಿತ್ರವೆಂದು ಇಡೀ ಜಗತ್ತೇ ಗುರುತಿಸುತ್ತಿದೆ! ಇದಕ್ಕೆ ಪ್ರಮುಖ ಕಾರಣ ಮೂರ್ತಿಯವರ ಕ್ಯಾಮೆರಾದ ಕುಸುರಿ ಕೆಲಸ ಎನ್ನುವುದು ಸರ್ವವೇದ್ಯ!
ನಿಮಗೆ ಗೊತ್ತಿಲ್ಲ, ಹಲವು 'ಪ್ರಥಮ'ಗಳ ಸಾಹಸಿ ಈ ವಿ.ಕೆ.ಮೂರ್ತಿ ಸಾಹೇಬರು! ಇವರು ಕ್ಯಾಮೆರಾ ಕೆಲಸ ಮಾಡಿದ 'ಕಾಗಜ್ ಕೆ ಫೂಲ್' ಚಿತ್ರ ದೇಶದ ಪ್ರಥಮ ಸಿನೆಮಾಸ್ಕೋಪ್ ಚಿತ್ರ! ಹೆಲಿಕಾಫ್ಟರ್'ನಲ್ಲಿ ಕುಳಿತು ಚಿತ್ರೀಕರಿಸಿದ ಭಾರತದ ಪ್ರಥಮ ಸಾಹಸಿ ಇವರೇ. ಮೈಸೂರಿನ ಬೃಂದಾವನದಲ್ಲಿ ಚಿತ್ರೀಕರಿಸಿದ ಪ್ರಥಮ ಛಾಯಾಗ್ರಾಹಕರು ಇವರೇ. 'ಗನ್ಸ್ ಆಫ್ ನವರೋನ್' ಚಿತ್ರಕ್ಕಾಗಿ ಹಾಲಿವುಡ್ ಪ್ರವೇಶ ಪಡೆದ ಪ್ರಥಮ ಕ್ಯಾಮರಾಮನ್ ಇವರೇ. ಅಂದಹಾಗೆ, 1969ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ಥಾಪನೆಯಾದ ನಂತರ ಛಾಯಾಗ್ರಾಹಕರೊಬ್ಬರು ಈ ಗೌರವಕ್ಕೆ ಪಾತ್ರರಾಗಿರುವುದು ಇದೇ ಪ್ರಥಮ!
ಈಗಿನವರಂತೆ ವೃತ್ತಿ ಬದುಕಿನಲ್ಲಿ ಇವರು ಲಕ್ಷ ಲಕ್ಷ ರೂಪಾಯಿಗಳನ್ನು ನೋಡೇ ಇಲ್ಲ ; ಪ್ರಥಮ ಬಾರಿಗೆ ನೋಡಿದ್ದು ಫಾಲ್ಕೆ ಪ್ರಶಸ್ತಿಯ 10 ಲಕ್ಷ ರೂಪಾಯಿಗಳನ್ನು! ಈ ಬಗ್ಗೆ ಮೂರ್ತಿಯವರು ಪತ್ರಕರ್ತರೊಬ್ಬರ ಬಳಿ ಹೇಳಿಕೊಂಡದ್ದು ಹೀಗೆ : 'ನಾನು ಲಕ್ಷ ರೂಪಾಯಿಗಳನ್ನು ನೋಡಿದ್ದು ಪ್ರಶಸ್ತಿ ಬಂದ ಮೇಲೆಯೇ. ಆದರೆ ಖರ್ಚು ಮಾಡಬೇಕಾದ ಸಂದರ್ಭದಲ್ಲಿ ಸಿಗದ ಈ ಮೊತ್ತ ಈಗ ಸಿಕ್ಕಿದೆ. ಈ ವಯಸ್ಸಲ್ಲಿ ನಾನು ಇದನ್ನು ನಾನು ಹೇಗೆ ಖರ್ಚು ಮಾಡಲಿ ಹೇಳಿ?' - ಎಂದು ಪ್ರಶ್ನಿಸಿದ್ದರು ಅಂದು!
ಹತ್ತನೇ ಕ್ಲಾಸಿನಲ್ಲಿರುವಾಗ ಶಾಲೆಗೆ ಚಕ್ಕರ್ ಹೊಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದರಿಂದಾಗಿಯೇ ಈಗ ತಮಗೆ ಮಾಸಿಕ ಮೂರು ಸಾವಿರ ರೂಪಾಯಿಗಳ ಪಿಂಚಣಿ ಬರುತ್ತಿದೆ, ಇದುವೇ ನನ್ನ ಈಗಿನ ಸಂಪಾದನೆ' - ಎಂದು ತಮಾಷೆಯಾಗಿ ಹೇಳುತ್ತಿದ್ದರು ಮೂರ್ತಿ ಸಾಹೇಬರು!
ಫಾಲ್ಕೆ ಪ್ರಶಸ್ತಿ ಘೋಷಣೆಯಾದಾಗ ಮೂರ್ತಿಯವರು ಮುಂಬೈ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದರು. ಶಂಕರಮಠದಲ್ಲೊಂದು ಸ್ವಂತ ಬಂಗಲೆಯಿತ್ತು. ಸಂಜೆ ಹೊತ್ತು ಆ ಬಂಗಲೆಯ ಮುಂದಿನ ಗೇಟಿನ ಬಳಿ ನಿಂತುಕೊಳ್ಳುತ್ತಿದ್ದರು ಮೂರ್ತಿಗಳು. ಈಗ ಆ ಬಂಗಲೆ ಇಲ್ಲ. ಗೇಟೂ ಇಲ್ಲ. ಎಲ್ಲಾ ನೆಲಸಮ. ಮೂರ್ತಿ ಸಾಹೇಬರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಆದರೆ ಅವರು ಸೃಷ್ಟಿಸಿದ ಮಾಯಾಲೋಕದ ದೃಶ್ಯಾವಳಿಗಳು ಎಂದೆಂದೂ ಜೀವಂತ. ಅಮರ...
Social Plugin