ಲೇಖನ : ಹಿರಿಯ ಸಿನಿಮಾ ಪತ್ರಕರ್ತರು ಶ್ರೀ ಗಣೇಶ ಕಾಸರಗೋಡು

◆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮಕ್ಕಳ ಮನೆಗೆ ಅವರ ಸಿನಿಮಾಗಳ ಹೆಸರನ್ನಿಟ್ಟುಕೊಂಡಿದ್ದಾರೆ! ◆

     ಬೆಂಗಳೂರಿನ ಬನಶಂಕರಿಯ ನೆತ್ತಿಯ ಮೇಲಿತ್ತು ಆ ಪುಟ್ಟ ಕೈತೋಟದ ನಡುವಿನ ಮನೆ. ಮದರಾಸಿನಿಂದ ಬೆಂಗಳೂರಿಗೆ ಗುಳೆ ಹೊರಡುವ ಮೊದಲೇ ಪುಟ್ಟಣ್ಣ ಕಣಗಾಲ್ ಕಟ್ಟಿಸಿದ ಸುಂದರ ಮನೆಯದು. ಆದರೆ ಮನೆ ಎಷ್ಟೇ ಸುಂದರವಾಗಿದ್ದರೂ ಅದು ಹೊಟ್ಟೆ ತುಂಬಿಸುತ್ತದೆಯಾ? ಪುಟ್ಟಣ್ಣ ನಿರ್ಗಮನದ ನಂತರ ಕುಟುಂಬಸ್ಥರು ಜತೆ ಸೇರಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು : ತಾನಾಗಿಯೇ ಬಂದ ಆಫರಿನಂತೆ ಒಬ್ಬ ಕಂಟ್ರಾಕ್ಟರಿಗೆ ಆ ಜಾಗವನ್ನು ಕೊಡೋದು. ಆತ ಅಪಾರ್ಟ್ಮೆಂಟ್ ಕಟ್ಟೋದು. ಅದರಲ್ಲಿ ಅರ್ಧ ಇವರಿಗೆ ಇನ್ನರ್ಧ ಕಂಟ್ರಾಕ್ಟರಿಗೆ! ಕೈಗೆ ಒಂದಷ್ಟು ದುಡ್ಡು. ಎಲ್ಲರಿಗೂ ಒಪ್ಪಿಗೆಯಾಯಿತು. ಅಪಾರ್ಟ್ಮೆಂಟ್ ತಲೆಯೆತ್ತಿತು. ಅದಕ್ಕೆ 'ಪುಟ್ಟಣ್ಣ ಕಣಗಾಲ್ ಗೃಹಸ್ತೋಮ' ಎಂಬ ಹೆಸರನ್ನಿಡಲಾಯಿತು. ಪಾಲಾಗಿರುವ ಒಂದೊಂದು ಫ್ಲಾಟ್'ಗೂ ಪುಟ್ಟಣ್ಣ ಕಣಗಾಲ್ ಸ್ಮರಣೆಗಾಗಿ ಅವರ ಸಿನಿಮಾಗಳ ಹೆಸರನ್ನಿಡಲಾಯಿತು! 'ಉಪಾಸನೆ' ಹೆಸರನ್ನು ಸದಾ ನೃತ್ಯವನ್ನೇ ಉಪಾಸಿಸುವ ರಾಮು ಕಣಗಾಲ್ ತಮ್ಮ ಮನೆಗಿಟ್ಟುಕೊಂಡರು. ಹೆತ್ತಮ್ಮನ ಪಾಲಿನ ಮನೆಗೆ 'ಕರುಳಿನ ಕರೆ' ಎಂಬ ಹೆಸರನ್ನಿಟ್ಟುಕೊಂಡರು. ಉಳಿದಂತೆ 'ಅಮೃತಘಳಿಗೆ', 'ಬೆಳ್ಳಿಮೋಡ'...ಮೊದಲಾದ ಹೆಸರುಗಳನ್ನು ಪುಟ್ಟಣ್ಣನ ಇತರ ಮಕ್ಕಳು ತಮತಮಗೆ ಒಪ್ಪಿಗೆಯಾದಂತೆ ಇಟ್ಟುಕೊಂಡರು!
  ಯಾರ ತಂಟೆಯಿಲ್ಲ ತಕರಾರಿಲ್ಲ! ಯಾವ ಸರ್ಕಾರದ ಕಾಲಿಗೂ ಬೀಳಲಿಲ್ಲ. ಆತ್ಮದಿಚ್ಛೆಯಂತೆ ನಡೆದುಕೊಂಡ ಪುಟ್ಟಣ್ಣ ಕುಟುಂಬ ಕನ್ನಡ ಚಿತ್ರರಂಗದ ದಿಗ್ಗಜನಿಗೊಂದು ಸಾರ್ಥಕ 'ಸ್ಮಾರಕ'ವನ್ನು ಕಟ್ಟಿಯೇ ಬಿಟ್ಟಿತು! ಇಷ್ಟಾಗಿ 'ಸ್ಮಾರಕ' ಅಂದರೇನು? ಸದಾ ಸ್ಮರಿಸುವಂತಿರುವುದೇ ಸ್ಮಾರಕವಲ್ಲವೇ? ಪುಟ್ಟಣ್ಣನ ಸಿನಿಮಾಗಳ ಹೆಸರಿನ ಮೂಲಕ ಈ ಕುಟುಂಬ ಸದಾ ಅವರನ್ನು ಸ್ಮರಿಸುವಂತೆ 'ಪುಟ್ಟಣ್ಣ ಕಣಗಾಲ್ ಗೃಹಸ್ತೋಮ'ವನ್ನು ಕಟ್ಟಿರುವುದು ಸಾಮಾನ್ಯದ ಮಾತಾ? ಪುಟ್ಟಣ್ಣ ಕುಟುಂಬಕ್ಕೊಂದು ಅಭಿನಂದನೆ ತಿಳಿಸಿ...